Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಪತಿ-ಪತ್ನಿಯ ಪಟ್ಟು ಕೈ ಪಕ್ಷದಲ್ಲಿಲ್ಲ ಒಗ್ಗಟ್ಟು!

Friday, 13.07.2018, 12:31 AM       No Comments

ಅಶೋಕ ಶೆಟ್ಟರ, ಬಾಗಲಕೋಟೆ

ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ರೆಬಲ್ ಆಗಿರುವ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪಕ್ಷದ ಹಿರಿಯ ಮುಖಂಡರ ವಿರುದ್ಧವೇ ಸಮರ ಸಾರಿದ್ದಾರೆ. ಇದೀಗ ಮತ್ತೊಂದು ಸುತ್ತಿನ ಮೆಗಾಫೈಟ್​ಗೆ ಸಜ್ಜಾಗಿರುವುದು ಕುತೂಹಲ ಮೂಡಿಸಿದೆ.

ಒಂದು ಕಡೆಗೆ ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿರುವ ವಿಜಯಾನಂದ ಕಾಶಪ್ಪನವರ ಪತ್ನಿ, ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಅದಕ್ಕೆ ಇನ್ನಿಲ್ಲದ ಪಟ್ಟು ಹಿಡಿದಿದ್ದಾರೆ. ಇನ್ನೊಂದು ಕಡೆಗೆ ಮಾಜಿ ಶಾಸಕ ವಿಜಯಾನಂದ ಅವರು ಜಿಲ್ಲೆಯ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಬಿಗಿಪಟ್ಟು ಹಿಡಿದು ಕುಳಿತಿದ್ದಾರೆ.

ಹೌದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗ ಹೇಳಿಕೆ ನೀಡಿ ಸಾಕಷ್ಟು ಚರ್ಚೆಗೆ ವೇದಿಕೆ ಒದಗಿಸಿದ್ದ ವೀಣಾ ಕಾಶಪ್ಪನವರ, ವಿಧಾನಸಭೆಗೆ ನಿಲ್ಲುವಂತೆ ಸಾಕಷ್ಟು ಒತ್ತಡ ಇದ್ದರೂ ಟಿಕೆಟ್ ನಿರಾಕರಿಸಿದ್ದೆ. ಆದರೆ, ಇದೀಗ ಲೋಕಸಭೆ ಟಿಕೆಟ್​ಗೆ ಪ್ರಬಲ ಆಕಾಂಕ್ಷಿ ಆಗಿದ್ದು, ತಮಗೆ ಟಿಕೆಟ್ ನೀಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಅವರ ಪತಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸಹ ಧ್ವನಿಗೂಡಿಸಿದ್ದು, ವೀಣಾ ಅವರಿಗೆ ಲೋಕಸಭೆಗೆ ಸ್ಪರ್ಧೆ ಮಾಡುವಂತೆ ಸಾಕಷ್ಟು ಬೆಂಬಲಿಗರು ಒತ್ತಡ ಹಾಕುತ್ತಿದ್ದಾರೆ. ಪಕ್ಷ ಸಮ್ಮತಿಸಿದರೆ ಅವರ ಸ್ಪರ್ಧೆ ಖಚಿತ ಎನ್ನುವ ಮಾತುಗಳನ್ನು ಹೇಳಿದ್ದು, ಪಕ್ಷದಲ್ಲಿ ಟಿಕೆಟ್ ಆಕಾಂಕ್ಷೆ ಹೊಂದಿದ್ದ ಇತರರಿಗೆ ಇಕ್ಕಷ್ಟು ಸೃಷ್ಟಿಸಿದೆ.

ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೆ ಟಿಕೆಟ್​ಗಾಗಿ ವೀಣಾ ಕಾಶಪ್ಪನವರ ಪ್ರಚಾರ ಕಾರ್ಯವನ್ನು ಆರಂಭಿಸಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಬಳಿ ತಮ್ಮ ಸ್ಪರ್ಧೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಕೆಪಿಸಿಸಿ ನಿರ್ಗಮಿತ ಅಧ್ಯಕ್ಷ, ಉಪ ಮುಖ್ಯಮಂತ್ರಿ ಪರಮೇಶ್ವರ್ ಬಳಿ ಟಿಕೆಟ್ ಆಕಾಂಕ್ಷೆಯನ್ನು ಹೊರಹಾಕಿದ್ದು, ಅತ್ತ ಉತ್ತಮ ಸ್ಪಂದನೆಯೂ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಗ್ರಾಮ ವಾಸ್ತವ್ಯದ ಮೂಲಕ ಗಮನ ಸೆಳೆದಿರುವ ವೀಣಾ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯೂ ಆಗಿರುವ ವೀಣಾ ಕಾಶಪ್ಪನವರ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎನ್ನುವ ಮನದಾಳವನ್ನು ಒಂದು ವರ್ಷದಿಂದ ಹೇಳುತ್ತಲೇ ಬಂದಿದ್ದಾರೆ. ಇದೇ ಕಾರಣಕ್ಕೆ ಅವರು ಈಗಾಗಲೇ ಜಿಲ್ಲೆಯ ಏಳು ಕ್ಷೇತ್ರಗಳು ಸೇರಿದಂತೆ ಬಾಗಲಕೋಟೆ ಲೋಕಸಭೆ ವ್ಯಾಪ್ತಿಗೆ ಬರುವ ಗದಗ ಜಿಲ್ಲೆ ನರಗುಂದ ಕ್ಷೇತ್ರದಲ್ಲೂ ಆಗಾಗ ಪ್ರವಾಸ ಮಾಡುತ್ತ ಬಂದಿದ್ದಾರೆ. ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯದ ಮೂಲಕ ಗಮನ ಸೆಳೆದಿರುವ ಅವರಿಗೆ ಪಕ್ಷದಲ್ಲಿ ಅವರ ಬೆಂಬಲಕ್ಕೆ ಇರುವುದರ ಜತೆಗೆ ವಿರೋಧಿಗಳ ಪಟ್ಟಿಯೂ ದೊಡ್ಡದಿದೆ. ಜಿಪಂ ಅಧ್ಯಕ್ಷ ಸ್ಥಾನದಿಂದ ಕೆಳಗಿಸಬೇಕು ಎನ್ನುವ ಪ್ರಯತ್ನಗಳು ಅನೇಕ ಸಲ ನಡೆದಿದ್ದು, ಸದ್ಯ ಅದಕ್ಕೆ ಅವಕಾಶ ಇಲ್ಲವೆಂದು ಸುಮ್ಮನಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಅವರು ಲೋಕಸಭೆ ಟಿಕೆಟ್​ಗೆ ಪ್ರಯತ್ನ ನಡೆಸಿದ್ದು, ಇದಕ್ಕೆ ತಡೆಗೋಡೆ ನಿರ್ವಿುಸಲು ಅನೇಕರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಡಿಸಿಸಿ ಅಧ್ಯಕ್ಷ ಸ್ಥಾನ ಸಿಗುತ್ತಾ?: ಇನ್ನೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಒಂದು ಕಡೆ ತಮ್ಮ ಪತ್ನಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ಪಡೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದರೆ ಮತ್ತೊಂದು ಕಡೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಮೆಗಾಫೈಟ್ ನಡೆಸಿದ್ದಾರೆ. ಐದು ವರ್ಷ ಅಧಿಕಾರ ಅವಧಿಯನ್ನು ತಲಾ ಎರಡೂವರೆ ವರ್ಷಗಳಂತೆ ಒಪ್ಪಂದ ಆಗಿದ್ದು, ಅದರಂತೆ ಹಾಲಿ ಅಧ್ಯಕ್ಷ ಅಜಯಕುಮಾರ ಸರನಾಯಕ ಅವರು ರಾಜೀನಾಮೆ ನೀಡಿ ಆ ಸ್ಥಾನಕ್ಕೆ ತಮ್ಮನ್ನು ಕೂಡಿಸುವಂತೆ ಕಾಶಪ್ಪನವರ ಒತ್ತಡ ಹಾಕುತ್ತಿದ್ದಾರೆ.

ಜಿಲ್ಲೆಯ ಹಿರಿಯ ನಾಯಕರಾದ ಎಸ್.ಆರ್.ಪಾಟೀಲ, ಎಚ್.ವೈ.ಮೇಟಿ, ಜೆ.ಟಿ.ಪಾಟೀಲ ಸಮ್ಮುಖದಲ್ಲೇ ಅಧಿಕಾರ ಒಪ್ಪಂದ ಆಗಿದ್ದು, ಅವರೇ ತಮಗೆ ಅಧ್ಯಕ್ಷ ಸ್ಥಾನ ಕೊಡಿಸಬೇಕು ಎನ್ನುತ್ತಿದ್ದಾರೆ. ಇದೀಗ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರು ಇಸ್ರೇಲ್ ಪ್ರವಾಸಕ್ಕೆ ತೆರಳಿದ್ದು, ಅವರು ಬಂದ ಮೇಲೆ ಏನಾಗುತ್ತದೋ ಕಾಯ್ದು ನೋಡಬೇಕಿದೆ.

ಬೇರೆಯವರು ಇಲ್ಲವಾ? ಎಲ್ಲವೂ ಅವರಿಗೇನಾ…?: ಬಿಡಿಸಿಸಿ ಪಟ್ಟಕ್ಕೆ ವಿಜಯಾನಂದ ಹಾಗೂ ಲೋಕಸಭೆ ಟಿಕೆಟ್​ಗೆ ಅವರ ಪತ್ನಿ ಪಟ್ಟು ಹಿಡಿದಿದ್ದಾರೆ. ಏತನ್ಮಧ್ಯೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಅವರ ಕುಟುಂಬಕ್ಕೆ ಕೊಡಬೇಕಾ ಎನ್ನುವ ಪ್ರಶ್ನೆಯನ್ನು ಅನೇಕರು ಮಾಡುತ್ತಿದ್ದಾರೆ. ಈಗಾಗಲೇ ವಿಜಯಾನಂದ ಶಾಸಕರಾಗಿದ್ದರು. ಅವರ ಪತ್ನಿ ವೀಣಾ ಜಿಪಂ ಅಧ್ಯಕ್ಷರಾಗಿದ್ದಾರೆ. ಅವರ ಸಹೋದರ ಇಳಕಲ್ಲ ನಗರಸಭೆ ಅಧ್ಯಕ್ಷರಾಗಿ, ಸದ್ಯ ಸದಸ್ಯರಾಗಿದ್ದಾರೆ. ಇದೀಗ ಲೋಕಸಭೆ ಟಿಕೆಟ್​ಗೂ ಬೇಡಿಕೆ ಇಡುತ್ತಿದ್ದಾರೆ. ಪಕ್ಷದಲ್ಲಿ ಮತ್ತೆ ಯಾರು ಇಲ್ಲವೆ ಎನ್ನುವ ಪ್ರಶ್ನೆ ಅನೇಕ ಕಾರ್ಯಕರ್ತರದ್ದಾಗಿದೆ. ಅಲ್ಲದೆ, ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ. ಮೊದಲು ಅವರು ಹಿರಿಯ ನಾಯಕರ ಬಗ್ಗೆ ಮಾಧ್ಯಮಗಳ ಎದುರು ಮಾತನಾಡುವುದನ್ನು ನಿಲ್ಲಿಸಲಿ ಎಂದು ಹೆಸರು ಹೇಳಲಿಚ್ಛಿಸದ ಮುಖಂಡರೊಬ್ಬರು ಹೇಳುತ್ತಾರೆ.

ಆಗಿರುವ ಒಪ್ಪಂದದಂತೆ ಬಿಡಿಸಿಸಿ ಅಧ್ಯಕ್ಷ ಸ್ಥಾನ ನನಗೆ ಬಿಟ್ಟು ಕೊಡಬೇಕು. ಈ ವಿಚಾರವಾಗಿ ಈಗಾಗಲೇ ಎಸ್.ಆರ್.ಪಾಟೀಲ, ಎಚ್.ವೈ.ಮೇಟಿ, ಜೆ.ಟಿ.ಪಾಟೀಲ ಅವರಿಗೆ ಹೇಳಿದ್ದೇನೆ. ಚುನಾವಣೆ ಬಳಿಕ ಕೊಡಿಸುವುದಾಗಿ ಹೇಳಿದ್ದರು. ಅಧ್ಯಕ್ಷರು ಇಸ್ರೇಲ್ ಪ್ರವಾಸಕ್ಕೆ ಹೋಗಿದ್ದಾರೆ. ಅವರು ಬಂದ ಮೇಲೆ ಅಧ್ಯಕ್ಷ ಸ್ಥಾನ ನನಗೆ ಬಿಟ್ಟುಕೊಡಬೇಕು. ಈ ವಿಷಯದಲ್ಲಿ ನನಗೆ ಯಾವುದೇ ಷರತ್ತು ಹಾಕುವಂತಿಲ್ಲ. ನನ್ನ ಪತ್ನಿಗೆ ಜಿಪಂ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಅದು ನನ್ನ ಪ್ರಯತ್ನ. ಪಕ್ಷದ ಕೈತಪ್ಪಿ ಹೋಗಲಿದ್ದ ಅಧಿಕಾರವನ್ನು ಪಕ್ಷಕ್ಕೆ ತಂದಿದ್ದೇವೆ. ಬಿಡಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಜಿಪಂ ಅಧ್ಯಕ್ಷ ಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ. ನುಡಿದಂತೆ ತಮಗೆ ಬಿಡಿಸಿಸಿ ಅಧ್ಯಕ್ಷ ಸ್ಥಾನ ಸಿಗದೆ ಇದ್ದಲ್ಲಿ ಹೋರಾಟ ಮಾಡಿ ಪಡೆಯುವುದು ತಮಗೆ ಗೊತ್ತಿದೆ.

| ವಿಜಯಾನಂದ ಕಾಶಪ್ಪನವರ ಮಾಜಿ ಶಾಸಕ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ

ಲೋಕಸಭೆ ಚುನಾವಣೆಗೆ ನಾನು ಬಾಗಲಕೋಟೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ. ವಿಧಾನಸಭೆಗೆ ನಿಲ್ಲುವಂತೆ ಸಾಕಷ್ಟು ಒತ್ತಡ ಇದ್ದರೂ ಲೋಕಸಭೆಗೆ ಸ್ಪರ್ಧೆ ಮಾಡಬೇಕೆಂದು ಹಿಂದೆ ಸರಿದಿದ್ದೇನೆ. ಜಿಪಂ ಅಧ್ಯಕ್ಷೆಯಾಗಿ ಮಾಡಿರುವ ಉತ್ತಮ ಕಾರ್ಯಗಳು ನನಗೆ ಬೆಂಬಲಕ್ಕಿವೆ. ಜತೆಗೆ ಮಹಿಳಾ ಕೋಟಾದಲ್ಲಿ ಟಿಕೆಟ್ ನೀಡುವಂತೆ ಈಗಾಗಲೇ ಪರಮೇಶ್ವರ ಅವರಿಗೆ ಮನವಿ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಹಾಗೂ ರಾಜ್ಯದ ಮುಖಂಡರ ಬಳಿ ರ್ಚಚಿಸಿ ಟಿಕೆಟ್ ಕೇಳುತ್ತೇನೆ. ಸ್ಪರ್ಧೆಗೆ ಅವಕಾಶ ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸವೂ ಇದೆ.

| ವೀಣಾ ಕಾಶಪ್ಪನವರ ಜಿಪಂ ಅಧ್ಯಕ್ಷೆ, ಬಾಗಲಕೋಟೆ

 

Leave a Reply

Your email address will not be published. Required fields are marked *

Back To Top