ಟ್ರ್ಯಾಕ್ಟರ್ ಸಮೇತ ಅನ್ನದಾತರು ಪ್ರತಿಭಟನೆ

ಬಾಗಲಕೋಟೆ: ಬಾಗಲಕೋಟೆ ಎಪಿಎಂಎಂಸಿಯಲ್ಲಿರುವ ತೊಗರಿ ಖರೀದಿ ಕೇಂದ್ರದಲ್ಲಿ ಮೋಸವಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ವಿವಿಧ ಗ್ರಾಮದ ರೈತರು ತೊಗರಿ ತುಂಬಿದ ಟ್ರ್ಯಾಕ್ಟರ್ ಸಮೇತ ಜಿಲ್ಲಾಡಳಿತ ಭವನ ಎದುರು ಗುರುವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್‌ರನ್ನು ಭೇಟಿ ಮಾಡಿದರು.

ತೊಗರಿ ಖರೀದಿ ಮಾಡುವಾಗ ಇಲ್ಲ ಸಲ್ಲದ ನಿಯಮ, ನೀತಿ, ಕಾರಣ ಹೇಳಿ ಎನ್‌ಸಿಎಂಎಲ್ ಕಂಪನಿ ಅಧಿಕಾರಿಗಳು ವಂಚನೆ ಮಾಡುತ್ತಿದ್ದಾರೆ. ಗುಣಮಟ್ಟ ಇಲ್ಲ ಎಂದು ಹೇಳಿ ಕೆಲ ರೈತರಿಂದ ಮಾತ್ರ ತೊಗರಿ ಖರೀದಿ ಮಾಡುತ್ತಿದ್ದಾರೆ. ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಎಫ್‌ಎಕ್ಯೂ ಹೆಸರಿನಲ್ಲಿ ಗ್ರೇಡಿಂಗ್ ಮಾಡುವಾಗ ತೊಗರಿ ಬೆಳೆಗಾರರಿಗೆ ವಂಚಿಸುವ ಕಾರ್ಯ ನಡೆದಿದೆ. ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿದರು.

ರೈತರ ಮನವಿ ಆಲಿಸಿದ ಜಿಲ್ಲಾಧಿಕಾರಿ, ಎನ್‌ಸಿಎಂಎಲ್ ಕಂಪನಿ ಅಧಿಕಾರಿಗಳೊಂದಿಗೆ ರೈತರ ಸಮ್ಮುಖ ಚರ್ಚೆ ನಡೆಸಿದರು. ನಿಯಮ ಪಾಲಿಸುವುದರ ಜತೆಗೆ ತೊಗರಿ ಬೆಳೆಗಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ರೈತರ ಮನವೊಲಿಸಿ ಗುಣಮಟ್ಟದ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದ ಬಳಿಕ ರೈತರು ಪ್ರತಿಭಟನೆ ವಾಪಸ್ ಪಡೆದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶನ ಶ್ರೀಶೈಲ ಕಂಕನವಾಡಿ ಸೇರಿ ಇತರರು ಇದ್ದರು.