ನಾವು ಹೊಂಟೇವ ಶ್ರೀಶೈಲ ನೋಡಲಾಕ

ಬಾಗಲಕೋಟೆ: ಅಸಂಖ್ಯ ಭಕ್ತ ಸಾಗರ ಹೊಂದಿರುವ ಆಂಧ್ರಪ್ರದೇಶದ ಶ್ರೀಶೈಲಂ (ಶ್ರೀಶೈಲ) ಶ್ರೀ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಉತ್ತರ ಕರ್ನಾಟಕದ ಅಪಾರ ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ.

ಹಿಂದು ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಯುಗಾದಿ ಹಬ್ಬದಂದು ಶಿವನ ಮಹಾಕ್ಷೇತ್ರ ಶ್ರೀಶೈಲ ಜಾತ್ರೆಗೆ ಸಹಸ್ರಾರು ಭಕ್ತರು ಕಂಬಿಗಳೊಂದಿಗೆ ಭಕ್ತಿಯ ಹೆಜ್ಜೆ ಹಾಕಿದ್ದಾರೆ. ಮಲ್ಲಯ್ಯನ ದರ್ಶನಕ್ಕೆ ಬಾಗಲಕೋಟೆ ಮೂಲಕ ಅಪಾರ ಸಂಖ್ಯೆಯ ಪಾದಯಾತ್ರಿಗಳು ಹೊರಟಿದ್ದಾರೆ.

ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಜಾತಿ, ಧರ್ಮ ಬೇಧಭಾವ ಇಲ್ಲದೆ ಮಲ್ಲಿಕಾರ್ಜುನನ ಸೇವೆಗೆ ಮುಂದಾಗಿದ್ದಾರೆ. ಮಹಾಶಿವರಾತ್ರಿ ಮುಗಿದ ನಂತರ ಹೋಳಿ ಹುಣ್ಣಿಮೆ ಎರಡು ದಿನ ಬಾಕಿ ಇರುವಾಗ ಪಾದಯಾತ್ರೆ ಆರಂಭಿಸಿ ಯುಗಾದಿ ಮುಂಚಿನ ದಿನ ಶ್ರೀಶೈಲ ತಲುಪುತ್ತಾರೆ. ಯುಗಾದಿ ಅಮಾವಾಸ್ಯೆ ಹಾಗೂ ಪಾಡ್ಯದಂದು ಜರುಗುವ ಜಾತ್ರೆ ಸಡಗರಕ್ಕೆ ಸಾಕ್ಷಿಯಾಗುತ್ತಾರೆ.

ನಾವು ಹೊಂಟೇವ ಶ್ರೀಶೈಲ ನೋಡಲಾಕ
ನಾವು ಹೊಂಟೇವ ಶ್ರೀಶೈಲ ನೋಡಲಾಕ.. ಸ್ವಾಮಿ ಮಲಯ್ಯನ ದರುಶನ ಮಾಡೋದಕ…ಗೀಯ ಗಾ… ಗಾಗೀಯ ಗಾ.. ಎಂದು ಉರಿವ ಬಿಸಿಲು ಲೆಕ್ಕಿಸದೇ ಗೀಗಿ ಪದ ಹಾಡುತ್ತ, ಶಿವ ಸ್ಮರಣೆ ಧ್ಯಾನಿಸುತ್ತ ಪಾದಯಾತ್ರೆ ಹೊರಟಿದ್ದಾರೆ. ಮರಗಾಲು ಕಟ್ಟಿಕೊಂಡು, ದೀರ್ಘದಂಡ ನಮಸ್ಕಾರ ಹಾಕುತ್ತ, ತೇರು ಎಳೆಯುತ್ತ ಮಲ್ಲಯ್ಯನ ಕಂಬಿಗಳನ್ನು ಹಿಡಿದು ಸಾಗುವ ದೃಶ್ಯ ಭಕ್ತಿಯ ಭಾವ ಹರಿಸುವಂತೆ ಮಾಡುತ್ತದೆ.

ಪಾದ ಯಾತ್ರಿಗಳಿಗೆ ವಿವಿಧ ಸೇವೆ
ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರ, ಕರ್ನಾಟಕ ಗಡಿಭಾಗದ ಅಸಂಖ್ಯಾತ ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಿರುವ ಹಿನ್ನೆಲೆ ಬಾಗಲಕೋಟೆ ನಗರದ ವಲ್ಲಭಭಾಯಿ ಚೌಕ್, ಮುಚಖಂಡಿ ಕ್ರಾಸ್, ಚರಂತಿಮಠ, ಟೀಕಿನಮಠ ಮತ್ತು ನಗರದ ಆಸುಪಾಸಿನಲ್ಲಿರುವ ಕೃಷಿಕರು ತೋಟದ ಮನೆಯಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ, ವಿವಿಧ ಬಗೆಯ ಹಣ್ಣು ಹಂಪಲು, ಎಳನೀರು, ಪಾನಕ, ಮಜ್ಜಿಗೆ, ಗಂಜಿ ನೀಡಿ ಸೇವೆ ಮಾಡಲಾಗುತ್ತಿದೆ. ನೋವು ನಿವಾರಣೆಯ ಔಷೋಧಪಚಾರ ಒದಗಿಸಲಾಗುತ್ತಿದೆ. ಇನ್ನೂ ಕೆಲವೆಡೆ ಪಾದಯಾತ್ರಿಗಳ ಅಂಗಗಳಿಗೆ ಮಸಾಜ್ ಮೂಲಕ ನಗರದ ಸೇವಾಕರ್ತರು ಯಾತ್ರಿಗಳ ಸಹಾಯ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *