ಗುಡೂರ ಹೋಬಳಿ ಕೇಂದ್ರ ಮಾಡಿ

ಅಮೀನಗಡ: ಗುಡೂರ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡುವುದು ಸೇರಿ ಮೂಲಸೌಕರ್ಯಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುಡೂರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ಜಿಂದಾಲ ಕಾರ್ಖಾನೆಗೆ ಕೃಷ್ಣಾ ನದಿಯಿಂದ ನೀರು ಕೊಡುವುದಾದರೆ ಗುಡೂರ ಗ್ರಾಮಕ್ಕೆ ಏಕೆ ನೀರು ಕೊಡಲು ಸಾಧ್ಯವಿಲ್ಲ? ಹನಿ ನೀರಾವರಿ ಪದ್ಧತಿಯಲ್ಲಿ ಸಾವಿರಾರು ಕೋಟಿ ರೂ. ಹಗರಣ ನಡೆದರೂ ತನಿಖೆ ಮಾಡಲು ಸರ್ಕಾರ ಏಕೆ ಹಿಂಜರಿಯುತ್ತಿದೆ ಎಂದು ಆರೋಪಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವುದು, ಸರ್ಕಾರಿ ಪದವಿ ಕಾಲೇಜು ಸ್ಥಾಪನೆ, ಅರಸಿನಬೀಡಿ ಕೆರೆ ಹೂಳೆತ್ತುವುದು, ಆಲಮಟ್ಟಿ ಜಲಾಶಯದಿಂದ ರೈತರ ಜಮೀನಿಗೆ ನೀರು ಹರಿಸುವುದು ಸೇರಿ ಅನೇಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಕರವೇ ತಾಲೂಕು ಅಧ್ಯಕ್ಷ ರಂಜಾನ್ ನದ್ಾ ಮಾತನಾಡಿ, ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಕರವೇ ಉಗ್ರ ಹೋರಾಟ ಆರಂಭಿಸುತ್ತದೆ ಎಂದು ಎಚ್ಚರಿಸಿದರು. ಗುಡೂರ ಕರವೇ ಗ್ರಾಮ ಘಟಕದ ಅಧ್ಯಕ್ಷ ರಫೀಕ್ ಇಟಗಿ ಮಾತನಾಡಿದರು. ಇದಕ್ಕೂ ಮುಂಚೆ ಗುಡೂರ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಸ್ಥಳಕ್ಕೆ ಆಗಮಿಸಿದ ಇಳಕಲ್ಲ ತಾಲೂಕು ವಿಶೇಷ ತಹಸೀಲ್ದಾರ್ ಜಿ.ಎಂ. ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು. ತಾಲೂಕು ಸಂಘಟನಾ ಕಾರ್ಯದರ್ಶಿ ಸಲೀಂ ಜರತಾರಿ, ತಾಲೂಕು ಉಪಾಧ್ಯಕ್ಷ ವಿದ್ಯಾರಣ್ಯ ಮಾಯಾಚಾರಿ, ರಂಜಾನ್ ನದ್ಾ ಹಾಗೂ ತಾಲೂಕಿನ ರೈತ ಮುಖಂಡರು ಪಾಲ್ಗೊಂಡಿದ್ದರು.