ರೇವಣ್ಣ ಸತ್ತರೆ ಮರುದಿನವೇ ಭವಾನಿ ಕ್ಯಾಂಡಿಡೇಟ್ !

ಬಾಗಲಕೋಟೆ: ಗಂಡ ಅಂಬರೀಷ್ ಸತ್ತು 2-3 ತಿಂಗಳಾಗಿಲ್ಲ. ಸುಮಲತಾಗೆ ರಾಜಕೀಯ ಏಕೆ ಬೇಕಿತ್ತಾ ಎಂದಿರುವ ಸಚಿವ ರೇವಣ್ಣರಿಗೆ ಮಾಜಿ ಡಿಸಿಎಂ ಈಶ್ವರಪ್ಪ ಅದೇ ದಾಟಿಯಲ್ಲಿ ತಿರುಗೇಟು ನೀಡಿದ್ದಾರೆ.

ರೇವಣ್ಣ ಇವತ್ತೇ ಸತ್ತರೆ ಮರುದಿನವೇ ಭವಾನಿ ರೇವಣ್ಣ ಕ್ಯಾಂಡಿಡೇಟ್ ಆಗ್ತಿದ್ರು. ಹೀಗಂತ ಮಂಡ್ಯದಲ್ಲಿ ಯಾರೋ ಒಬ್ಬರು ಹೇಳಿದ್ರು.ಇದನ್ನು ಹೇಳೋಕೆ ಸಂಕೋಚ ಆಗ್ತಿದೆ ಎಂದು ಈಶ್ವರಪ್ಪ ಟಾಂಗ್ ನೀಡಿದರು.

ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಈಶ್ವರಪ್ಪ, ರೇವಣ್ಣ ಅವರಿಗೆ ಇದೆಲ್ಲ ಬೇಕಿತ್ತಾ ? ಅವರ ಪಾರ್ಟಿಯಲ್ಲಿ ಇದೆಲ್ಲ ಆಗಿಲ್ವಾ ? ಹಿಂದೆ ಅವರ ಪಕ್ಷದ ಶಾಸಕರು, ಸಚಿವರು ಸತ್ತಾಗ ಅವರ ಪತ್ನಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಲ್ವಾ ? ಹೀಗಾಗಿ ಸಹೋದರಿ ಸುಮಲತಾ ಬಗ್ಗೆ ಈ ರೀತಿ ಕೆಟ್ಟದಾಗಿ ಮಾತನಾಡಬಾರದಿತ್ತು ಎಂದು ಹೇಳಿದರು.

ತೆನೆ ಹೊತ್ತ ಚಿನ್ಹೆ ತೆಗೆಯಲಿ:
ರೇವಣ್ಣ ಹೇಳಿಕೆ ಕೇವಲ ಸುಮಲತಾ ಅವರಿಗೆ ಮಾತ್ರ ಅಪಮಾನ ಮಾಡಿದಂತಲ್ಲ. ಇಡೀ ಮಹಿಳೆಯರಿಗೆ ಮಾಡಿದ ಅವಮಾನವಾಗಿದೆ. ಹೀಗಾಗಿ ಕೂಡಲೇ ರಾಜ್ಯದ ಎಲ್ಲ ಮಹಿಳೆಯರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ದೇವೇಗೌಡರು ತಮ್ಮ ಪಕ್ಷದ ಸಿಂಬಾಲ್ ಆಗಿರುವ ತೆನೆ ಹೊತ್ತ ಮಹಿಳೆ ಚಿನ್ಹೆ ತೆಗೆಯಬೇಕು. ಅವರಿಗೆ ಆ ಚಿನ್ಹೆ ಇಟ್ಟುಕೊಳ್ಳಲು ಯಾವುದೇ ನೈತಿಕತೆ ಇಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಮಂಡ್ಯ ಮತ್ತು ಹಾಸನದಲ್ಲಿ ದೇವೇಗೌಡರ ಮೊಮ್ಮಕ್ಕಳ ಸ್ಪರ್ಧೆ ಕುರಿತು ಅಷ್ಟೇ ವ್ಯಂಗ್ಯವಾಗಿ ಉತ್ತರಿಸಿದ ಈಶ್ವರಪ್ಪ, ರಾಜ್ಯದಲ್ಲಿ 28 ಲೋಕಸಭೆ ಕ್ಷೇತ್ರಗಳಿದ್ದು, ಆ ಎಲ್ಲ ಕ್ಷೇತ್ರಗಳಿಗೆ ಮಕ್ಕಳನ್ನೇ ನಿಲ್ಲಿಸಬೇಕೆಂದರೆ 28 ಮಕ್ಕಳು ಇಲ್ಲವಲ್ಲ ಎನ್ನುವ ಕೊರಗು ದೇವೇಗೌಡರನ್ನು ಕಾಡುತ್ತಿದೆ. ಕೊನೆ ಪಕ್ಷ 14 ಮಕ್ಕಳಾದರೂ ಇದ್ದಿದ್ದರೆ ಅವರು, ಅವರ ಪತ್ನಿಯರಿಗೆ ಎಲ್ಲ ಕ್ಷೇತ್ರದ ಟಿಕೆಟ್ ಕೊಡಬಹುದಿತ್ತು ಎಂದು ದುಃಖಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರ ಕುಟುಂಬ ರಾಜಕೀಯ ಮುಕ್ತಾಯವಾಗುತ್ತದೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು.