ಕವಿ, ಸಾಹಿತಿಗಳಿಗೆ ಜನರ ಭಾವದ ಹಾರ ಮುಖ್ಯ

ಬಾಗಲಕೋಟೆ: ಕವಿ, ಸಾಹಿತಿಗಳಿಗೆ ಪ್ರಶಸ್ತಿ, ಸನ್ಮಾನ, ಹೂವಿನ ಹಾರ ಕ್ಷಣಿಕ. ಅವರು ಬರೆದ ಅಕ್ಷರಗಳನ್ನು ಓದಿ ಸಂತಸಪಟ್ಟು ವ್ಯಕ್ತವಾಗುವ ಜನರ ಭಾವದ ಹಾರ ದೊಡ್ಡದು. ಅದು ಪ್ರತಿಯೊಬ್ಬ ಸಾಹಿತಿಗೆ ದೊರೆಯಬೇಕು. ಅಂದಾಗ ಸಾಹಿತಿಗಳು ಸಂಭ್ರಮಿಸುತ್ತಾರೆ. ಎಲ್ಲರೂ ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ನಗರದ ಕಲಾಭವನದಲ್ಲಿ ಮಂಗಳವಾರ ಎಸ್.ಆರ್.ಪಾಟೀಲ ಸಮೂಹ ಸಂಸ್ಥೆ ಆಶ್ರಯದಲ್ಲಿ ನಡೆದ ಜಾಜಿ ಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟ ಅವರ ನಾಲ್ಕು ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧಿಕಾರ, ಹಣ, ಆಸ್ತಿ ಯಾವುದು ಮಹತ್ವದ್ದಲ್ಲ. ಇವೆಲ್ಲವು ಬಯಸಿದಾಗ ಸಿಕ್ಕೆ ಸಿಗುತ್ತದೆ. ಜನರ ಪ್ರೀತಿ ದೊರೆಯುವುದು ಅಪರೂಪ. ಕವಿ, ಸಾಹಿತಿಗಳಿಗೆ ಹೂವಿನ ಹಾರ ಹಾಕಿದರೆ ಅದು ಕೆಲ ಸಮಯದ ಬಳಿಕ ಬಾಡಿ ಹೋಗುತ್ತದೆ. ಓದುಗರು, ಜನರ ಪ್ರೀತಿ ಬೆರೆತ ಭಾವದ ಹಾರ ಎಂದಿಗೂ ಬಾಡುವುದಿಲ್ಲ. ಸದಾ ಅರಳುತ್ತಲೆ ಇರುತ್ತದೆ ಎಂದರು.

ಕವಿ ಹೊಗಳಿದ ಸಾಲುಗಳನ್ನು ನೋಡಿ ನಾವು ಸಂತಸ ಪಡುತ್ತೇವೆ. ನಿಜ ಜೀವನದಲ್ಲಿ ಅವರು ಹಲವು ಸಂಕಷ್ಟ ಎದರಿಸುತ್ತಾರೆ. ಮಾತು ಸರೋವರದಂತೆ, ಬೆಳದಿಂಗಳದಂತೆ, ಜ್ಯೋತಿಯಂತಿರಬೇಕು. ಮಾತು ದೇವಲೋಕದ ಬಟ್ಟೆ ಇದ್ದ ಹಾಗೆ. ಅದು ಆಯ ತಪ್ಪಿದರೆ ಕಷ್ಟವಾಗುತ್ತದೆ. ನಮ್ಮ ಮಾತುಗಳಿಂದ ವೈರಿ ಕೂಡ ಮಿತ್ರನಾಗಬೇಕು ಎಂದ ಅವರು, ಕವಿಗಳು ಅನುಭವ ತುಂಬಿ ಪರಿಣಾಮಕಾರಿಯಾಗಿ ಬರೆಯುತ್ತಾರೆ. ಸತ್ಯವನ್ನು ಬರೆಯುವ ಸಾಹಿತಿ ಮನಸ್ಸುಗಳಿಗೆ ಸಮಾಜದಲ್ಲಿ ದೊಡ್ಡ ಬೆಲೆ ಇದೆ. ಸತ್ಯಾನಂದ ಪಾತ್ರೋಟ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಮಾತನಾಡಿ, ಸತ್ಯಾನಂದ ಪಾತ್ರೋಟ ಅವರು ಬರೆದ ಕವನಗಳು 8 ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿ ಸೇರ್ಪಡೆಗೊಂಡಿವೆೆ. ಪಕ್ಕದ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಅವರ ಕವಿತೆಗಳು ಪ್ರಸಿದ್ಧಿ ಪಡೆದಿವೆ. ಅವರು ಎಷ್ಟು ದೊಡ್ಡಮಟ್ಟದ ಸರಳ ಕವಿ ಎಂಬುದಕ್ಕೆ ಇದೇ ಸಾಕ್ಷಿ. ಇಂತಹ ಶ್ರೇಷ್ಠ ಕವಿಗೆ ಇನ್ನೂ ಹೆಚ್ಚಿನ ಸ್ಥಾನಮಾನ ದೊರಕಬೇಕಿತ್ತು. ಅವರು ಬೆಂಗಳೂರು ಭಾಗದಲ್ಲಿ ಇದ್ದಿದ್ದರೆ ವಿಧಾನಸೌಧದ ಗಾಳಿಗೆ ಸಿಕ್ಕು ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದ್ದರು. ಉ-ಕ ಭಾಗದಲ್ಲಿ ಇದ್ದ ಕಾರಣ ಅವಕಾಶ ವಂಚತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬೆಳಗಾವಿ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಮಾತನಾಡಿ, ಆಧುನಿಕ ಸಾಹಿತ್ಯಕ್ಕೆ ಜೀವನ ತುಂಬಿದವರು ಸತ್ಯಾನಂದ ಪಾತ್ರೋಟ ಅವರು. ದೇಸಿ ಸೊಗಡು ಮೈಗೂಡಿಸಿಕೊಂಡು ಕವಿತೆಗಳನ್ನು ರಚಿಸುತ್ತ ಬಂದಿದ್ದಾರೆ. ಕೃಷ್ಣಾ ತೀರದ ಬದುಕು, ಬವಣೆ, ಪ್ರೀತಿ, ವಾತ್ಸಲ್ಯ ನಾಡಿನೆಲ್ಲೆಡೆ ಪಸರಿಸುವಂತೆ ಮಾಡಿದ್ದಾರೆ. ದಲಿತ, ಬಂಡಾಯ ಸಾಹಿತ್ಯದಲ್ಲಿ ಇವರು ಶ್ರೇಷ್ಠ ಸಾಹಿತ್ಯಗಳಾಗಿದ್ದಾರೆ. ತಮ್ಮ ಅಕ್ಷರ ಸೇವೆ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ ಎಂದು ತಿಳಿಸಿದರು. ಡಾ.ಪಲ್ಲವಿ ಪಾತ್ರೋಟ ವೇದಿಕೆ ಮೇಲೆ ಇದ್ದರು.

ಬಡತನ, ಕಷ್ಟವಿದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಕಾಲೇಜು ದಿನಗಳಲ್ಲಿ ನಾನು ಕೂಡ ಕಷ್ಟ ಅನುಭವಿಸಿದ್ದೇನೆ. ಕಾಲೇಜು ಫೀ ತುಂಬಲು ಆಗುತ್ತಿರಲಿಲ್ಲ. ಹೀಗೆ ಅನೇಕ ಸಾರಿ ಸಮಸ್ಯೆಗೆ ಸಿಲುಕಿದಾಗ ಹಲವರು ಸಹಾಯ ಮಾಡಿದ್ದಾರೆ. ಇಂದಿನ ರಾಜಕಾರಣದ ವ್ಯವಸ್ಥೆ ನೋಡಿದರೆ ಯೋಗ್ಯರಿಗೆ ಬೆಲೆ ಇಲ್ಲ ಅನಿಸುತ್ತದೆ. ಎಸ್.ಆರ್.ಪಾಟೀಲ ಇದಕ್ಕೆ ಉದಾಹರಣೆ. ಕನ್ನಡ ನಾಡು, ನುಡಿ, ಭಾಷೆ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು.
– ಪಾಟೀಲ ಪುಟ್ಟಪ್ಪ

ಹಿರಿಯ ಪತ್ರಕರ್ತ

ಇದ್ದ ಖುರ್ಚಿ ಬಿಟ್ಟ ಬುದ್ಧ, ಖರ್ಚಿಯನ್ನೆ ತ್ಯಾಗ ಮಾಡಿದ ಬಸವಣ್ಣ, ಖುರ್ಚಿಯತ್ತ ಸುಳಿಯದ ಮಹಾತ್ಮ ಗಾಂಧಿ, ತನ್ನವರಿಗಾಗಿ ಜೀವನ ಮುಡಿಪಾಗಿಟ್ಟ ಅಂಬೇಡ್ಕರ್ ನಮ್ಮೆಲ್ಲರಿಗೂ ಮಾದರಿಯಾಗಬೇಕು. ಓದುಗರು ನಿಜವಾದ ವಿಮರ್ಶಕರು. ಜಾತಿ ವ್ಯವಸ್ಥೆಯಿಂದ ನಾವೆಲ್ಲ ದೂರವಾಗಬೇಕು.
– ಸತ್ಯಾನಂದ ಪಾತ್ರೋಟ ಜಾಜಿ ಮಲ್ಲಿಗೆ ಕವಿ