ತಾಂತ್ರಿಕ ಸಂಕ್ರಮಣದಲ್ಲಿ ಮಾಧ್ಯಮ

ಬಾಗಲಕೋಟೆ: ಮಾಧ್ಯಮಗಳು ಹೊಸ ಆಯಾಮಕ್ಕೆ ತೆರೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಹೊಸತನಕ್ಕೆ, ಹೊಸ ಸವಾಲುಗಳಿಗೆ ತೆರೆದುಕೊಳ್ಳಬೇಕಿದೆ. ಆಧುನಿಕ ಯುಗದಲ್ಲಿ ಮಾಧ್ಯಮ ತಾಂತ್ರಿಕವಾಗಿ ಸಂಕ್ರಮಣ ಸ್ಥಿತಿಯಲ್ಲಿವೆ ಎಂದು ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ. ಹೇಳಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ವಿದ್ಯಾಗಿರಿಯ ಸೀತಾರಾಮ ಮಂಗಲ ಭವನದಲ್ಲಿ ಮಂಗಳವಾರ ಪತ್ರಕರ್ತರಿಗೆ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವೃತ್ತಿ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಯುಗದಲ್ಲಿ ಮಾಧ್ಯಮ ಶಕ್ತಿಶಾಲಿ ಸಾಧನವಾಗಿದೆ ಮತ್ತು ಸಮಾಜದ ಪ್ರಬಲ ಅಸ್ತ್ರವಾಗಿದೆ. ಇಂದು ಪತ್ರಿಕಾರಂಗ ಉದ್ಯಮವಾಗಿ ಮಾರ್ಪಟ್ಟಿದ್ದು, ವಿದ್ಯುನ್ಮಾನ ಮಾಧ್ಯಮ, ಸೋಷಿಯಲ್ ಮೀಡಿಯಾ. ಹೀಗೆ ಅನೇಕ ರೀತಿಯಲ್ಲಿ ತನ್ನ ವ್ಯಾಪ್ತಿಯ ಬದಲಾವಣೆ ಹೊಸ್ತಿಲಿಗೆ ತೆರೆದುಕೊಂಡಿದೆ ಎಂದರು.

ವಿದ್ಯುನ್ಮಾನ ಮಾಧ್ಯಮ ಪ್ರವೇಶ ಮಾಡಿದಾಗ ಮುದ್ರಣ ಮಾಧ್ಯಮ ಕಥೆ ಮುಗಿದು ಹೋಯಿತು ಎಂದುಕೊಳ್ಳಲಾಗಿತ್ತು, ಇಂತಹ ಹಲವು ಸಂಕಷ್ಟದ ನಡುವೆ ಮುದ್ರಣ ಮಾಧ್ಯಮ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ವಿದ್ಯುನ್ಮಾನ, ಸೋಷಿಯಲ್ ಮೀಡಿಯಾಗಳಿಗೆ ಪೈಪೋಟಿ ನೀಡುತ್ತಿದೆ. ಮುದ್ರಣ ಮಾಧ್ಯಮ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ. ವೃತ್ತಿ ಪರತೆ ಇದರ ಜೀವಾಳ ಎಂದು ಹೇಳಿದರು.

ವಿದ್ಯುನ್ಮಾನ ಮಾಧ್ಯಮಗಳು ಅವಸರದಲ್ಲಿ ಸುದ್ದಿ ಪ್ರಸಾರ ಮಾಡುತ್ತವೆ. ಅತಿಯಾದ ವೇಗ ಕೆಲವೊಂದು ಸಾರಿ ತಪ್ಪು ಮಾಹಿತಿ ನೀಡಿದ ಉದಾಹರಣೆಗಳೂ ಇದೆ. ಸತ್ಯಾಸತ್ಯತೆ ಅರಿತು ಸುದ್ದಿ ಮಾಡುವುದು ಒಳಿತು. ಇಲ್ಲದಿದ್ದರೆ ಸಮಾಜದ ಮೇಲೆ ಕಟ್ಟ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.

ಜಿಪಂ ಸಿಇಒ ಗಂಗೂಬಾಯಿ ಮಾನಕರ ಮಾತನಾಡಿ, ಪತ್ರಿಕಾರಂಗಕ್ಕೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಸ್ಥಾನ ನೀಡಲಾಗಿದೆ. ಮಾಧ್ಯಮಗಳು ಸಮಾಜದ ಅಗತ್ಯತೆ, ಉದ್ದೇಶವನ್ನರಿತು ಸುದ್ದಿಗಳನ್ನು ಪ್ರಕಟಿಸಬೇಕು. ಪ್ರಸ್ತುತ ಮಾಧ್ಯಮ ರಂಗವನ್ನು ತಿರಸ್ಕಾರ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಮಾಧ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗವಾಗಬಾರದು. ಜನರಿಗೆ ಉತ್ತಮ ಸುದ್ದಿಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.

ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಪತ್ರಿಕೆಯಲ್ಲಿ ಲೇಖನ, ವರದಿ ಬರೆಯುವುದು ಒಂದು ಕಲೆ. ಅದನ್ನು ಪತ್ರಕರ್ತರು ಸತ್ಯದ ಸುಳಿವಿನಲ್ಲಿ ಬರೆದರೆ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದರು.

ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಸಿದ್ಧರಾಜು ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಸದಸ್ಯ ಮುತ್ತು ನಾಯ್ಕರ, ಹಿರಿಯ ಛಾಯಾಗ್ರಾಹಕ ಆಸ್ಟ್ರೋ ಮೋಹನ, ಬಾಗಲಕೋಟೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧಕ್ಷ ಮಹೇಶ ಅಂಗಡಿ, ವಿಜಯಪುರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶರಣು ಮಸಳಿ, ಪತ್ರಕರ್ತರಾದ ಬಸವರಾಜಸ್ವಾಮಿ, ಬಿ.ವೆಂಕಟಸಿಂಗ್, ಎನ್.ನಾಗರಾಜ್, ರಾಮ ಮನಗೂಳಿ, ಮುತ್ತು ನಾಯ್ಕರ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದಲ್ಲಿ ಪತ್ರ ಕರ್ತರು,ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಗವಹಿಸಿದ್ದರು.