ಮಲೇಷ್ಯಾದ ಬ್ಯಾಡ್ಮಿಂಟನ್ ದಿಗ್ಗಜ ಲೀ ಚಾಂಗ್ ವೀ ವಿದಾಯ

ಪುಟ್ರಾಜಯ(ಮಲೇಷ್ಯಾ): ಕ್ಯಾನ್ಸರ್​ನಿಂದ ಬಳಲುತ್ತಿದ್ದ ದಿಗ್ಗಜ ಬ್ಯಾಡ್ಮಿಂಟನ್ ಆಟಗಾರ ಮಲೇಷ್ಯಾದ ಲೀ ಚಾಂಗ್ ವೀ ಗುರುವಾರ ವಿದಾಯ ಘೋಷಿಸಿದ್ದಾರೆ. 348 ವಾರಗಳ ಕಾಲ ವಿಶ್ವ ನಂ.1 ಪಟ್ಟದಲ್ಲಿದ್ದರೂ ಚಾಂಗ್ ವೀ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಜಯಿಸಿರಲಿಲ್ಲ.

‘ಇದೊಂದು ಕಠಿಣ ಸಮಯ. ಈ ಕ್ರೀಡೆಯನ್ನು ತುಂಬಾ ಪ್ರೀತಿಸುತ್ತೇನೆ. ಕಳೆದ 19 ವರ್ಷಗಳಿಂದ ಪ್ರೋತ್ಸಾಹಿಸಿದ ಮಲೇಷ್ಯಾ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು 36 ವರ್ಷದ ಲೀ ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕುತ್ತಾ ವಿದಾಯ ಹೇಳಿದರು. ಅತಿ ವೇಗದ ಸ್ಮ್ಯಾಷ್ ಬಾರಿಸಿದ ಆಟಗಾರ ಎನಿಸಿ ಕೊಂಡಿರುವ ಚಾಂಗ್ ವೀ ಕಳೆದ ವರ್ಷ ಮೂಗಿನ ಕ್ಯಾನ್ಸರ್​ಗೆ ಯಶಸ್ವಿ ಚಿಕಿತ್ಸೆಗೊಳಗಾಗಿದ್ದರು. 2 ಮಕ್ಕಳ ತಂದೆಯಾಗಿರುವ ಲೀ ಚಾಂಗ್ ತೈವಾನ್​ನಲ್ಲಿ ಚಿಕಿತ್ಸೆ ಪಡೆದಿದ್ದರು. ‘ಚೇತರಿಕೆ ಬಳಿಕ ಬ್ಯಾಡ್ಮಿಂಟನ್​ಗೆ ವಾಪಸಾಗಬೇಕೆಂದು ಸಾಕಷ್ಟು ಪ್ರಯತ್ನ ಪಟ್ಟೆ, ಆದರೆ, ಸಾಧ್ಯವಾಗುತ್ತಿಲ್ಲ. ಸದ್ಯಕ್ಕೆ ಆರೋಗ್ಯವೇ ಮುಖ್ಯ ಎಂದು ತಲಾ 3 ಬಾರಿ ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್​ಷಿಪ್ ಬೆಳ್ಳಿ ವಿಜೇತ ತಿಳಿಸಿದರು. 2008ರ ಬೀಜಿಂಗ್, 2012ರ ಲಂಡನ್, 2016ರ ರಿಯೋ ಒಲಿಂಪಿಕ್ಸ್ ಹೀಗೆ ಸತತ 3 ಬಾರಿ ಫೈನಲ್​ಗೇರಿದ್ದರೂ ಚೀನಾ ಆಟಗಾರರ ಎದುರು ನಿರಾಸೆ ಅನುಭವಿಸಿದ್ದರು.

ವೃತ್ತಿಜೀವನದಲ್ಲಿ 69 ಪ್ರಶಸ್ತಿಗಳನ್ನು ಗೆದ್ದಿದ್ದ ಚಾಂಗ್ ವೀ, 705 ಪಂದ್ಯಗಳಲ್ಲಿ ಗೆಲುವು ಹಾಗೂ 134 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.