ಬಡವರಬಂಧು ಯೋಜನೆ ಸ್ಥಗಿತ

– ಪಿ.ಬಿ.ಹರೀಶ್ ರೈ ಮಂಗಳೂರು
ಬೀದಿಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ 10 ಸಾವಿರ ರೂ. ಸಾಲ ನೀಡುವ ರಾಜ್ಯ ಸರ್ಕಾರದ ಬಡವರ ಬಂಧು ಯೋಜನೆ ಸ್ಥಗಿತವಾಗಿದೆ. ಮಾರ್ಚ್ 31ರ ಬಳಿಕ ಯಾರಿಗೂ ಸಾಲ ಸೌಲಭ್ಯ ದೊರೆತಿಲ್ಲ. ಪೂರ್ತಿ ಸಾಲ ಮರುಪಾವತಿಸಿದವರಿಗೂ ಸಾಲ ನವೀಕರಿಸಿಲ್ಲ.

ಸರ್ಕಾರದ ಆದೇಶ ಪ್ರಕಾರ ಬಡವರ ಬಂಧು ಯೋಜನೆ 2018ರ ಏ.1ರಿಂದ 2019ರ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ. ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಸಾಲ ನೀಡಿಕೆ ಆರಂಭವಾಗಿತ್ತು. ಈಗ ಸರ್ಕಾರ ನೀಡಿದ ಆದೇಶದ ಗಡುವು ಮುಗಿದಿದೆ. ಯೋಜನೆ ಮುಂದುವರಿಸುವ ಬಗ್ಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಹಾಗಾಗಿ ಸಾಲ ಸೌಲಭ್ಯ ಸ್ಥಗಿತವಾಗಿದೆ.

ನಗರಕ್ಕೆ ಸೀಮಿತ: ರಾಜ್ಯದ ಹತ್ತು ಮಹಾನಗರ ಪಾಲಿಕೆ ಮತ್ತು 18 ಜಿಲ್ಲಾ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಬಡವರ ಬಂಧು ಯೋಜನೆ ಜಾರಿಯಾಗಿತ್ತು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಮೂಲಕ ಸಾಲದ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ಸೂಚಿಸಿತ್ತು. ಮಂಗಳೂರು ಮಹಾನಗರ ಪಾಲಿಕೆ ಮತ್ತು ಉಡುಪಿ ನಗರಸಭೆ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳಿಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಾಲ ವಿತರಣೆಯಾಗಿತ್ತು.

598 ಮಂದಿಗೆ ಸಾಲ: ಪಾಲಿಕೆ ವ್ಯಾಪ್ತಿಯಲ್ಲಿ 3 ಸಾವಿರ ಹಾಗೂ ಜಿಲ್ಲಾ ನಗರ ಪ್ರದೇಶ ವ್ಯಾಪ್ತಿಯಲ್ಲಿ ಒಂದು ಸಾವಿರ ಮಂದಿಯನ್ನು ಗುರುತಿಸಿ ಸಾಲ ವಿತರಿಸತಕ್ಕದ್ದು ಎಂದು ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿತ್ತು. ಜತೆಗೆ ನಗರ ಸ್ಥಳೀಯ ಸಂಸ್ಥೆಗಳು ಗುರುತಿನ ಚೀಟಿ ನೀಡಿದ ಬೀದಿಬದಿ ವ್ಯಾಪಾರಿಗಳಿಗೆ ಮಾತ್ರ ಸಾಲ ವಿತರಿಸಬೇಕೆಂಬ ನಿಯಮವಿತ್ತು. ಬಳಿಕ ನಿಯಮ ಸಡಿಲಿಸಿ ಗುರುತಿನ ಚೀಟಿ ಇಲ್ಲದವರಿಗೂ ನೀಡುವಂತೆ ಸೂಚಿಸಲಾಗಿತ್ತು. ಮಂಗಳೂರಿನಲ್ಲಿ 487 ಮಂದಿಗೆ 54.15 ಲಕ್ಷ ರೂ. ಹಾಗೂ ಉಡುಪಿಯಲ್ಲಿ 121 ಮಂದಿಗೆ 4.13 ಲಕ್ಷ ರೂ. ಸಾಲ ನೀಡಲಾಗಿದೆ.

3 ತಿಂಗಳ ಅವಧಿ: ಫಲಾನುಭವಿಗಳು ಬ್ಯಾಂಕ್‌ನಲ್ಲಿ ಸಾಲದ ಖಾತೆ ತೆರೆದು ತಮ್ಮ ವ್ಯಾಪಾರವನ್ನು ಅವಲಂಬಿಸಿ 10 ಸಾವಿರ ರೂಪಾಯಿವರೆಗೆ ಸಾಲ ಪಡೆಯಬಹುದು. ಮರುಪಾವತಿ ಅವಧಿ ಮೂರು ತಿಂಗಳಾಗಿದ್ದು, ಶೂನ್ಯ ಬಡ್ಡಿದರ ಇರುತ್ತದೆ. ಸಾಲ ವಿತರಿಸಿದ ಬ್ಯಾಂಕ್‌ಗಳಿಗೆ ಸರ್ಕಾರ ಬಡ್ಡಿ ಪಾವತಿಸುತ್ತದೆ. ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆದವರ ಪೈಕಿ ಶೇ.60ರಷ್ಟು ಮಂದಿ ಮರುಪಾವತಿಸಿದ್ದಾರೆ. ಸಕಾಲದಲ್ಲಿ ಮರುಪಾವತಿಸಿದವರಿಗೆ ಶೇ.10ರಷ್ಟು ಹೆಚ್ಚಿಗೆ ಮಾಡಿ ಸಾಲದ ಮಿತಿಯನ್ನು 15 ಸಾವಿರ ರೂ.ಗೆ ನಿಗದಿಪಡಿಸಬಹುದೆಂದು ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ. ಆದರೆ ಯೋಜನೆ ಮುಂದುವರಿಸುವ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ.

ಬಡವರ ಬಂಧು ಯೋಜನೆ ಮುಂದುವರಿಯಲಿದೆ. ಈ ಬಗ್ಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಹಣಕಾಸು ಇಲಾಖೆಯ ಒಪ್ಪಿಗೆ ದೊರೆತ ಬಳಿಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಿಗೆ ಅಧಿಕೃತ ಆದೇಶ ನೀಡಬಹುದು. ಬಳಿಕ ಸಾಲ ವಿತರಣೆಯಾಗಲಿದೆ.
– ಸುರೇಶ್ ಗೌಡ ಸಹಕಾರಿ ಸಂಘಗಳ ಉಪ ನಿಬಂಧಕರು, ದ.ಕ

Leave a Reply

Your email address will not be published. Required fields are marked *