ಪ್ರತಿಯೊಬ್ಬರೂ ಸಂಚಾರಿ ನಿಯಮ ಪಾಲಿಸಿ

ಬಾದಾಮಿ: ನಗರದಲ್ಲಿ ದಿನದಿನಕ್ಕೆ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ವಾಹನ ಸವಾರರು, ಆಟೋ ಚಾಲಕರು, ಕಾರು ಮತ್ತು ವ್ಯಾಪಾರಸ್ಥರು ಸಂಚಾರಿ ನಿಯಮ ಪಾಲಿಸುವ ಅಗತ್ಯವಿದೆ ಎಂದು ಸಿಪಿಐ ಕರಿಯಪ್ಪ ಹಟ್ಟಿ ಹೇಳಿದರು.

ನಗರದ ತಾಪಂ ಸಭಾಭವನದಲ್ಲಿ ಪೊಲೀಸ್ ಮತ್ತು ಕಂದಾಯ ಇಲಾಖೆ ಹಾಗೂ ಪುರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಸಂಚಾರ ನಿಯಂತ್ರಣ ಸಭೆಯಲ್ಲಿ ಅವರು ಮಾತನಾಡಿದರು.

ಬಾದಾಮಿ ರಾಷ್ಟಮಟ್ಟದಲ್ಲಿ ಗುರುತಿಸಿಕೊಂಡಿದ್ದು, ನಗರಕ್ಕೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ಸಂಚಾರಿ ನಿಯಮ ಪಾಲಿಸುವ ಜತೆಗೆ ಪ್ರವಾಸಿಗರಿಗೆ ಸುಗಮ ಸಂಚಾರ ಒದಗಿಸಿಕೊಡಬೇಕೆಂದು ತಿಳಿಸಿದರು.

ಪ್ರಮುಖವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ಸಾಕಷ್ಟು ತೊಂದರೆಯಾಗುತ್ತದೆ. ಇದರ ನಿಯಂತ್ರಣಕ್ಕಾಗಿ ಎಲ್ಲರೂ ತಮ್ಮ ವಾಹನ ಸರಿಯಾಗಿ ನಿಲ್ಲಿಸಬೇಕು. ತಮಗೆ ಗುರುತಿಸಿದ ಜಾಗದಲ್ಲೇ ವಾಹನ ನಿಲ್ಲಿಸದಿದ್ದರೆ ಮುಂಬರುವ ದಿನಗಳಲ್ಲಿ ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದೆಂದು ಎಚ್ಚರಿಸಿದರು.

ಹಿರಿಯ ವರದಿಗಾರ ಎಸ್.ಎಂ. ಹಿರೇಮಠ ಮಾತನಾಡಿ, ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ನಾವು ಹೆಚ್ಚು ಅನಕೂಲ ಮಾಡಿಕೊಡುವುದರಿಂದ ಇಲ್ಲಿರುವ ವ್ಯಾಪಾರ ವಹಿವಾಟು ಹೆಚ್ಚಾಗಿ ಎಲ್ಲರೂ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಪುರಸಭೆ ಸದಸ್ಯರಾದ ಆರ್.ಎಫ್. ಭಾಗವಾನ, ನಾಗರಾಜ ಕಾಚಟ್ಟಿ, ಮುಖಂಡರಾದ ಮಹೇಶ ಹೊಸಗೌಡರ, ಎಸ್.ವೈ. ಕುಳಗೇರಿ, ನಿಸರ್ಗ ಬಳಗದ ಅಧ್ಯಕ್ಷ ನಿವೃತ್ತ ಉಪನ್ಯಾಸಕ ಎಸ್.ಎಚ್. ವಾಸನ ಮಾತನಾಡಿದರು.

ಪುರಸಭೆ ಮುಖ್ಯಾಧಿಕಾರಿ ಜ್ಯೋತಿ ಗಿರೀಶ, ಪಿಎಸ್‌ಐ ಎಚ್.ಎಸ್. ನಡಗಡ್ಡಿ, ಖಾಸಗಿ ಆಟೋ ಮತ್ತು ಕಾರು ಚಾಲಕರು ಹಾಗೂ ಮಾಲೀಕರು, ವ್ಯಾಪಾರಸ್ಥರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ನಗರದ ಸಂಚಾರಿ ವ್ಯವಸ್ಥೆಯಲ್ಲಿ ಪ್ರಮುಖವಾಗಿ ಟಂಟಂ ಹಾಗೂ ಆಟೋ ಚಾಲಕರ ವೇಗವಾಗಿ ವಾಹನ ಚಲಾಯಿಸುವುದರಿಂದ ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಆಟೋ ಚಾಲಕರು ಸರ್ಕಾರದ ಎಲ್ಲ ನಿಯಮ ಪಾಲಿಸಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಸಮವಸ ಹಾಗೂ ಲೈಸನ್ಸ್ ಹೊಂದಿರಬೇಕು. ಪಾರ್ಕಿಂಗ್ ಸ್ಥಳ ಗುರುತಿಸಲು ಚಿಂತನೆ ಮಾಡಲಾಗಿದ್ದು, ಅಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು.
– ಸುಹಾಸ್ ಇಂಗಳೆ ತಹಸೀಲ್ದಾರ್