ಸೇವಾ ಹಿಂಬಡ್ತಿ ಖಂಡಿಸಿ ಧರಣಿ

ಬಾದಾಮಿ: ರಾಜ್ಯ ಸರ್ಕಾರ ಮೇ 2017ರಲ್ಲಿ ರಚಿಸಿರುವ ಹೊಸ ಸಿ ಮತ್ತು ಆರ್ ನಿಯಮದ ಪ್ರಕಾರ ಪದವೀಧರ ಪ್ರಾಥಮಿಕ ಶಿಕ್ಷಕರನ್ನು 1 ರಿಂದ 5ನೇ ತರಗತಿ ಶಿಕ್ಷಕರೆಂದು ಪರಿಗಣಿಸಿ ಹಿಂಬಡ್ತಿ ನೀಡುತ್ತಿರುವ ಕ್ರಮವನ್ನು ಖಂಡಿಸಿ ಪದವೀಧರ ಸೇವಾನಿರತ ಪ್ರಾಥಮಿಕ ಶಾಲೆ ಶಿಕ್ಷಕರು ಶನಿವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಇಲಾಖೆಯ ಈ ಕ್ರಮ ಅವೈಜ್ಞಾನಿಕವಾಗಿದೆ. 1 ರಿಂದ 7ನೇ ತರಗತಿಗೆ ನೇಮಕವಾದ ನಾವು, 2005 ರಿಂದ 8ನೇ ತರಗತಿ ಪ್ರಾರಂಭಿಸಿದಾಗಿನಿಂದಲೂ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ 82 ಸಾವಿರಕ್ಕೂ ಅಧಿಕ ಪದವೀಧರ ಅನುಭವಿ ಶಿಕ್ಷಕರಿದ್ದು, ಮುಂಬಡ್ತಿಗೆ ಪರಿಗಣಿಸದೆ ಪ್ರಾಥಮಿಕ ಶಾಲೆ ಪದವೀಧರ ಶಿಕ್ಷಕರ ನೇರ ನೇಮಕಾತಿ ನಡೆಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಇಲಾಖೆ ಮುಖ್ಯಸ್ಥರು ಮತ್ತು ಸಚಿವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಸೇವೆಯಲ್ಲಿರುವ ಅರ್ಹರನ್ನು 6 ರಿಂದ 8ನೇ ವರ್ಗದ ಪದವೀಧರ ಶಿಕ್ಷಕರೆಂದು ಪರಿಗಣಿಬೇಕು. ಇಲ್ಲದಿದ್ದರೆ ಹೊಸ ವೃಂದ ನಿಯಮಗಳಂತೆ 1-5ನೇ ತರಗತಿಗಳಿಗೆ ಮಾತ್ರ ಬೋಧಿಸುತ್ತೇವೆ. 6-8ನೇ ತರಗತಿಗಳ ಬೋಧನೆ ಬಹಿಷ್ಕರಿಸುತ್ತೇವೆ ಎಂದು ತಿಳಿಸಲಾಗಿದೆ. ಬಳಿಕ ಬಿಇಒ ಎ.ಎಸ್.ಹತ್ತಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು. ತಾಲೂಕಿನ ಪ್ರಾಥಮಿಕ ಶಾಲೆ ಪದವೀಧರ ಶಿಕ್ಷಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *