ಕಳಂಕರಹಿತ ರಾಜಕಾರಣಿ ಮೋದಿ

ಬಾದಾಮಿ: ಲಾಲ್‌ಬಹದ್ದೂರ್ ಶಾಸಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಅಟಲ್ ಬಿಹಾರಿ ವಾಜಪೇಯಿ ನಂತರ ಭ್ರಷ್ಟಾಚಾರ, ಕಳಂಕರಹಿತ ಅಪರೂಪದ ರಾಜಕಾರಣಿ ಯಾರಾದರೂ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಎಂದು ಟೀಮ್ ಮೋದಿ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಪಟ್ಟಣದ ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆ ಆವರಣದಲ್ಲಿ ಹೀರಾಬೆನ್ ವೇದಿಕೆಯಲ್ಲಿ ಟೀಮ್ ಮೋದಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿ ದೇಶದ ಅಭಿವೃದ್ಧಿಗಾಗಿ 5 ವರ್ಷಗಳಿಂದ ಒಂದು ದಿನವು ಮನೆಯಲ್ಲಿ ಹಬ್ಬ ಆಚರಿಸಿಕೊಂಡಿಲ್ಲ. ದೇಶದ ಅಭಿವೃದ್ಧಿಗೆ ಶ್ರಮಿಸುವ ಯಾರೇ ಇರಲಿ ಅವರನ್ನು ಬೆಂಬಲಿಸೋಣ ಎಂದರು.

ಪುಲ್ವಾಮಾ ದಾಳಿಯಲ್ಲಿ 35ಕ್ಕೂ ಹೆಚ್ಚು ಯೋಧರು ಮರಣ ಹೊಂದಿದರೆ ಮೋದಿಯವರು ಏರ್ ಸ್ಟ್ರೈಕ್ ಮುಖಾಂತರ ಉಗ್ರರ ನೆಲೆಯ ಮೇಲೆ ದಾಳಿ ಮಾಡಿ 350ಕ್ಕೂ ಹೆಚ್ಚು ಉಗ್ರರನ್ನು ಕೊಂದು ಹಾಕಿದ್ದನ್ನು ಎಷ್ಟು ಜನ ಸತ್ತಿದ್ದಾರೆ ಎಂದು ಕಾಂಗ್ರೆಸ್‌ನವರು ಅಂಕಿ ಅಂಶಗಳ ಸಮೇತ ಸಾಕ್ಷಿ ಕೊಡಿ ಎಂದು ಕೇಳುತ್ತಾರೆ. ಎಂತಹ ದುರ್ದೈವದ ಸಂಗತಿ. ಅವರಿಗೆ ನಾಚಿಕೆಯಾಗಬೇಕು ಎಂದರು.

ಜಾತಿಗೋಸ್ಕರ ಓಟು ಬೇಡ. ರಾಷ್ಟ್ರದ ವಿಚಾರ ಬಂದಾಗ ದೇಶದ ಪ್ರತಿಯೊಬ್ಬ ಪ್ರಜೆ ದೇಶದ ಹಿತ ಕಾಪಾಡುವುದು ಬಹಳ ಮುಖ್ಯ. ಮೋದಿಯವರು ಒಂದೇ ಒಂದು ಜಾತಿ ಸಮಾವೇಶ ಮಾಡಲಿಲ್ಲ. ದೇಶವನ್ನು ಸುರಕ್ಷೆ, ಸುಭಿಕ್ಷೆಯಿಂದ ರಕ್ಷಿಸಿ ಅಭಿವೃದ್ಧಿ ಮಾಡುವುದೆ ಅವರ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಯುವಕರು ಈ ಬಾರಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ ಎಂದು ಮನವಿ ಮಾಡಿದರು.

ಮೊದಲು ಭಾರತಮಾತೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಚಕ್ರವರ್ತಿ ಸೂಲಿಬೆಲೆ ರಚಿಸಿದ ಪ್ರಧಾನ ಸೇವಕ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಕೊಪ್ಪಳ ಗವಿಮಠದ ಸಿದ್ಧಲಿಂಗ ದೇವರು, ಮಾಜಿ ಯೋಧ ಕುಮಾರ ಮಾಗುಂಡಪ್ಪ ಧೂಪದ ಮಾತನಾಡಿದರು. ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತರ, ಮಲ್ಲಿಕಾರ್ಜುನ ಬನ್ನಿ, ತಾಲೂಕು ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಮುತ್ತು ಉಳ್ಳಾಗಡ್ಡಿ ಸೇರಿದಂತೆ ಸಾವಿರಾರು ಜನತೆ ಭಾಗವಹಿಸಿದ್ದರು.

ಕಾಂಗ್ರೆಸ್‌ಗೆ ಮತ್ತೊಮ್ಮೆ ಅವಕಾಶ ದೊರೆಯಲ್ಲ
ಕಾಂಗ್ರೆಸ್ ಪಕ್ಷದಲ್ಲಿ ಉಳಿದವರಿಗೆ ಪ್ರಧಾನಿಯಾಗಲೂ ಅವಕಾಶವಿಲ್ಲ. ರಾಜೀವ್ ಗಾಂಧಿ ನಂತರ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಧಾನಿ ಎಂದು ಹೇಳುತ್ತಿದ್ದಾರೆ. ಮುಂದೆ ವಾದ್ರಾ ನಂತರ ಅವರ ಮಕ್ಕಳು ಹೀಗೆ ಮುಂದುವರಿಯುವುದು. ನಮ್ಮ ಸರದಿ ಇನ್ನೊಮ್ಮೆ ಬರುತ್ತೆ ಎಂದು ಕಾದರೂ ಅದು ಬರುವುದಿಲ್ಲ. ಕಾಂಗ್ರೆಸ್ ನಾಯಕರು ಅವಕಾಶ ವಂಚಿತರಾಗಿ ಮೋದಿ ಸಾಧನೆಗಳನ್ನು ನೋಡುತ್ತ ಕುಳಿತುಕೊಳ್ಳಬೇಕಾಗುತ್ತದೆ ಎಂದು ಸೂಲಿಬೆಲೆ ವ್ಯಂಗ್ಯ ಮಾಡಿದರು.