ಸಾಹಿತ್ಯ ಬೆಳೆಯಲು ಪ್ರೋತ್ಸಾಹ ಅಗತ್ಯ

ಬಾದಾಮಿ: ಕವಿ, ನಾಟಕ, ಸಾಹಿತಿಗಳಿಗೆ ಪ್ರೋತ್ಸಾಹ ದೊರೆತರೆ ಮಾತ್ರ ಸಾಹಿತ್ಯ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ವಿಕ್ರಮ್ ಪೈಲ ಪ್ರತಿಷ್ಠಾನದ ದಶಮಾನೋತ್ಸವ ಸಂಭ್ರಮ ಇದಕ್ಕೆ ಸಾಕ್ಷಿಯಾಗುತ್ತಿದೆ ಎಂದು ಮುಧೋಳ ಸಾಹಿತಿ ಬಿ.ಪಿ. ಹಿರೇಸೋಮಣ್ಣವರ ಹೇಳಿದರು.

ಇಲ್ಲಿಯ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ವಿಕ್ರಮ್ ಪೈಲ ಪ್ರತಿಷ್ಠಾನ, ಹೇಮವೇಮ ಚಾರಿಟಬಲ್ ಸಂಸ್ಥೆ, ಮಲ್ಲಿಕಾರ್ಜುನ ಪತ್ತಿನ ಸಹಕಾರಿ ಸಂಘ, ಹೇಮರಡ್ಡಿ ಮಲ್ಲಮ್ಮ ಮಹಿಳಾ ವೇದಿಕೆ, ವಿಶ್ವಚೇತನ ಸಂಸ್ಥೆ, ರೆಡ್ಡಿ ಯುವಸೇನೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಕ್ರಮ್ ಪೈಲ ಅವರ ದಶಮಾನೋತ್ಸವ ಸಂಭ್ರಮ, ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಚಂದ್ರಕಾಂತ ತಾಳಿಕೋಟಿ ರಚಿತ ‘ಕಪ್ಪು ಡೈರಿ’ ಪತ್ತೇದಾರಿ ಕಾದಂಬರಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಕ್ರಮನ ಶೈಕ್ಷಣಿಕ ಹಾಗೂ ಸಾಮಾಜಿಕ ಕಳಕಳಿ ಅರಿತು 9 ವರ್ಷದ ಹಿಂದೆ ಕುಟುಂಬ ಈ ಪ್ರತಿಷ್ಠಾನ ಆರಂಭಿಸಿ ಕಲೆ, ಸಾಹಿತ್ಯ, ಶಿಕ್ಷಣ, ಕೃಷಿ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸುವ ಮಹತ್ವದ ಕಾರ್ಯ ಮಾಡುತ್ತಿದೆ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಡಿ.ಎಂ.ಪೈಲ ಮಾತನಾಡಿ, ನನ್ನ ಪುತ್ರನ ಮರಣಾನಂತರ ಗೆಳೆಯರ ಬಳಗದ ಅಪೇಕ್ಷೆಯಂತೆ ಸಂಸ್ಥೆ ಹುಟ್ಟು ಹಾಕುವ ಮೂಲಕ ಸಾಮಾಜಿಕ, ಶೈಕ್ಷಣಿಕ ಸೇವೆ ಹಾಗೂ ಇತರ ಕ್ಷೇತ್ರದ ಸಾಧಕರನ್ನು ಗೌರವಿಸುವ ಮೂಲಕ ಅವನ ಸ್ಮರಣೆ ಮಾಡಲಾಗುತ್ತಿದೆ ಎಂದರು.

ಮಹಾಂತಲಿಂಗ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅನ್ನಪೂರ್ಣ ಪೈಲ, ಹೇಮಲತಾ ಕರಡಿ, ವಿಜಯ ಪೈಲ, ವಿಕ್ರಮ್ ಗೆಳೆಯರ ಬಳಗ, ಅಕ್ಕನ ಬಳಗ ಸೇರಿ ಸ್ಥಳೀಯ ವಿವಿಧ ಸಂಸ್ಥೆಗಳ ಪದಾಕಾರಿಗಳು ಹಾಗೂ ಮುಖಂಡರು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ಸಂಸ್ಥೆ ಕುರಿತು ಎಸ್.ಎ. ಭರಮಗೌಡರ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಭಾವಿ ಸ್ವಾಗತಿಸಿದರು. ಶಿಕ್ಷಕಿ ಎಂ.ಆರ್. ನಾಲತ್ವಾಡ ನಿರೂಪಿಸಿದರು. ಬಸವರಾಜ ಕರಡಿ ವಂದಿಸಿದರು.

ವೇಮನ ಪ್ರಶಸ್ತಿ ವಿತರಣೆ
ತತ್ವಜ್ಞಾನಿ, ಮಹಾಯೋಗಿ ವೇಮನ ಪ್ರಶಸ್ತಿಯನ್ನು ರಂಗಪ್ಪ ಆಲೂರ (ರಕ್ಷಣಾ), ಆರ್.ಎಂ. ಪಾಟೀಲ (ಶಿಕ್ಷಣ), ನಾಮದೇವ ತುಳಸಿಗೇರಿ (ಸಾಹಿತ್ಯ), ಶ್ರೀಕಾಂತ ಗೌಡರ (ಜಾನಪದ) ನೀಡಿ ಗೌರವಿಸಲಾಯಿತು. 2018-19 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ದೀಪಿಕಾ ಹೊಸಮನಿ, ಸ್ವಾತಿ ಪತ್ತಾರ, ವಿಜಯಲಕ್ಷ್ಮೀ ಕವಿಶೆಟ್ಟಿ, ಇಂದಿರಾ ಸೂಳಿಕೇರಿ, ಪ್ರತಿಭಾ ಗದ್ದನಕೇರಿ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದ ಶಂಕ್ರವ್ವ ಗೌಡರ, ಗಿರೀಶ ಮ್ಯಾಗೇರಿ, ದೀಪಾ ಪರಣ್ಣವರ, ಪೂಜಾ ಹನಮಸಾಗರ, ಪ್ರಮೋದ ಮುಂಡರಗಿ, ಮಹೇಶ ಲಮಾಣಿ ಅವರನ್ನು ಪುರಸ್ಕರಿಸಲಾಯಿತು.

Leave a Reply

Your email address will not be published. Required fields are marked *