ಭಾರಿ ಬಿರುಗಾಳಿಗೆ ನೆಲಕ್ಕುರುಳಿದ ವಿದ್ಯುತ್ ಕಂಬಗಳು

ಬಾದಾಮಿ: ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಮಳೆ ಮಿಶ್ರಿತ ಭಾರಿ ಬಿರುಗಾಳಿಗೆ ದುರ್ಗಾದೇವಿ ರಥದ ಶೆಡ್‌ನ ಪತ್ರಾಸ್‌ಗಳು ಹಾರಿ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಐದಕ್ಕೂ ಹೆಚ್ಚು ಕಂಬಗಳು ನೆಲಕ್ಕುರುಳಿವೆ.

ಬಸ್ ನಿಲ್ದಾಣದಿಂದ ಊರ ಒಳಗೆ ಪ್ರವೇಶಿಸುವ ಪ್ರಮುಖ ರಸ್ತೆಯಲ್ಲಿಯೇ ಈ ಘಟನೆ ನಡೆದಿದ್ದು, ಹತ್ತಾರು ಪತ್ರಾಸ್‌ಗಳು ಕಬ್ಬಿಣದ ಕಂಬದೊಂದಿಗೆ ವಿದ್ಯುತ್ ತಂತಿ ಮೇಲೆ ಅಪ್ಪಳಿಸಿದ್ದರಿಂದ ಒಂದೇ ಸಾಲಿನಲ್ಲಿದ್ದ ಕಂಬಗಳು ನೆಲಕ್ಕೆ ಬಿದ್ದು ಹಾನಿಯಾಗಿದೆ. ಮಳೆ, ಬಿರುಗಾಳಿ ಜೋರಾಗಿದ್ದರಿಂದ ರಸ್ತೆ ಮೇಲೆ ಯಾರು ಇರಲಿಲ್ಲ. ಅಲ್ಲದೆ, ವಿದ್ಯುತ್ ಪೂರೈಕೆ ಕಟ್ ಆಗಿದ್ದರಿಂದ ಯಾವುದೇ ಅವಘಡ ಸಂಭವಿಸಿಲ್ಲ. ಜತೆಗೆ ದುರ್ಗಾದೇವಿ ದೇವಸ್ಥಾನ ಎದುರಿನ ಪಾದಕಟ್ಟೆಗೆ ಹಾನಿಯಾಗಿದೆ. ಇನ್ನೂ ದೇವೇಂದ್ರಪ್ಪ ಸಂದಿಗವಾಡ, ಶಿವಾನಂದ ಬೆಣ್ಣಿ ಅವರ ಮನೆಯ ಪತ್ರಾಸ್‌ಗಳು ಹಾರಿ ಹೋಗಿವೆ. ಶಿವಾನಂದ ಮಠದಲ್ಲಿ ಬೇರು ಸಮೇತ ಗಿಡ ಬಿದ್ದಿದೆ. ಕೆಲ ಕಾಲ ಭಾರಿ ಬಿರುಗಾಳಿಯಿಂದ ಜನತೆ ಆತಂಕಕ್ಕೆ ಒಳಗಾಗಿದ್ದರು.

Leave a Reply

Your email address will not be published. Required fields are marked *