ಬಾಗಲಕೋಟೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ

ಬಾದಾಮಿ: ಬಾಗಲಕೋಟೆ ಲೋಕಸಭೆ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಈ ಬಾರಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಸನ್ನದ್ಧರಾಗಿ ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದ ಅಕ್ಕಮಹಾದೇವಿ ಅನುಭಾವ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಲೋಕಸಭೆ ಚುನಾವಣೆ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ವಿವಾದ ಹುಟ್ಟುಹಾಕಿ, ಧರ್ಮ ಒಡೆಯಲು ಯತ್ನಿಸಿದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನತೆ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ. ಅವರಪ್ಪನ ಆಣೆ ಕುಮಾರಸ್ವಾಮಿ ಸಿಎಂ ಅಗೋದಿಲ್ಲ ಎಂದು ವ್ಯಂಗ್ಯವಾಡುತ್ತಿದ್ದ ಸಿದ್ದರಾಮಯ್ಯ ಚುನಾವಣೆ ಬಳಿಕ ಕುಮಾರಸ್ವಾಮಿ ಮುಂದೆ ನೀವೇ ಸಿಎಂ ಆಗಿ ಎಂದಿದ್ದನ್ನು ಇವರ ವ್ಯಕ್ತಿತ್ವ ಹಾಗೂ ರಾಜಕಾರಣದ ಪಾವಿತ್ರ್ಯತೆಯನ್ನು ತೋರಿಸುತ್ತದೆ. ಇದನ್ನೆಲ್ಲ ರಾಜ್ಯದ ಜನತೆ ಗಮನಿಸಿದ್ದಾರೆ ಎಂದರು.

ಕುತಂತ್ರ ರಾಜಕಾರಣಕ್ಕೆ ತಕ್ಕಪಾಠ
ಸಿದ್ದರಾಮಯ್ಯ ಕುತಂತ್ರ ರಾಜಕಾರಣಿ. ಇದಕ್ಕಾಗಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಅವರನ್ನು ವರುಣಾ ಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಿಂದ ಸೋಲಿಸಿದರೆ, ಕೇವಲ 16 ನೂರು ಮತಗಳ ಅಂತರದಲ್ಲಿ ಬಾದಾಮಿ ಜನತೆ ಗೆಲ್ಲಿಸಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಮಮದಾಪೂರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದಲ್ಲದೆ, ಜಗತ್ತಿನ ಎಲ್ಲ ರಾಷ್ಟ್ರಗಳನ್ನು ವಿಶ್ವಾಸಕ್ಕೆ ಪಡೆದು ಉತ್ತಮ ಆಡಳಿತ ನೀಡಿ ವಿಶ್ವಶ್ರೇಷ್ಠ ಮುಖಂಡರಾಗಿ ಹೊರಹೊಮ್ಮಿದ್ದಾರೆ. ಜಮ್ಮು-ಕಾಶ್ಮೀರ ಸೇರಿ ದೇಶದ ರಕ್ಷಣೆಗೆ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗಬೇಕೆಂದು ಈಗಾಗಲೆ ದೇಶದ ಪ್ರಜೆಗಳು ನಿರ್ಣಯಿಸಿದ್ದು, ಹಾಗೆಯೇ ಪಿ.ಸಿ. ಗದ್ದಿಗೌಡರ ಅವರನ್ನು ಗೆಲ್ಲಿಸಲು ಕ್ಷೇತ್ರದ ಜನತೆ ನಿರ್ಣಯಿಸಿದ್ದಾರೆ. ಗದ್ದಿಗೌಡರು ಪ್ರಾಮಾಣಿಕ, ಉತ್ತಮ ನಡತೆಯ ಮೂಲಕ ಕ್ಷೇತ್ರದ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾಧ್ಯಕ್ಷ ಶಾಸಕ ಸಿದ್ದು ಸವದಿ, ಶಾಸಕರಾದ ಸಿ.ಸಿ. ಪಾಟೀಲ, ವೀರಣ್ಣ ಚರಂತಿಮಠ, ಮುರುಗೇಶ ನಿರಾಣಿ, ಮಾಜಿ ಶಾಸಕರಾದ ಎಂ.ಕೆ. ಪಟ್ಟಣಶೆಟ್ಟಿ, ಶ್ರೀಕಾಂತ ಕುಲಕರ್ಣಿ, ರಾಜಶೇಖರ ಶೀಲವಂತ, ನಾರಯಣಸಾ ಬಾಂಢಗೆ, ಪ್ರಕಾಶ ತಪಶೆಟ್ಟಿ, ರಾಜು ರೇವಣಕರ, ಬಿ.ಪಿ. ಹಳ್ಳೂರ, ತಾಲೂಕಿನ ಜಿಪಂ, ತಾಪಂ, ಪುರಸಭೆ, ಗ್ರಾಪಂ ಸದಸ್ಯರು ನಗರ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. ತಾಲೂಕು ಅಧ್ಯಕ್ಷ ಶಾಂತಗೌಡ ಪಾಟೀಲ ಸ್ವಾಗತಿಸಿದರು. ಭೀಮನಗೌಡ ಪಾಟೀಲ ವಂದಿಸಿದರು.

ಕೋಮುವಾದಿ, ಕೊಲೆಗಡುಕ ಪಕ್ಷ ಬಿಜೆಪಿ ಎಂದು ಹೇಳುವ ಸಿದ್ದರಾಮಯ್ಯ ತಮ್ಮ ಬಗ್ಗೆ ತಾವು ಅವಲೋಕಿಸಿಕೊಳ್ಳಬೇಕು. ಅವರು ಸಿಎಂ ಇದ್ದಾಗ ರಾಜ್ಯದ 22 ಹಿಂದು ಯುವಕರನ್ನು ಹತ್ಯೆ ಮಾಡಿದರೂ ಒಬ್ಬರನ್ನೂ ಬಂಧಿಸಲಿಲ್ಲ. ಬಿಜೆಪಿ ಬಗ್ಗೆ ಟೀಕೆ ಮಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಿದ್ದಾರೆ.
ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ