ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ

ಬಾದಾಮಿ: ಮತಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಹಾಗೂ ನಿಗದಿತ ಕಾಲಮಿತಿಯೊಳಗೆ ಮುಗಿಯಬೇಕು. ಕಾಮಗಾರಿಯಲ್ಲಿ ಕಳಪೆ ಕಂಡುಬಂದರೆ ಸಂಬಂಧಿಸಿದವರನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ನಗರದ ರಾಮದುರ್ಗ ರಸ್ತೆಯಲ್ಲಿ ತಮ್ಮ ಕಚೇರಿಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆಗಳ ಆವರ್ತಕ ನಿರ್ವಹಣ ಕಾಮಗಾರಿಯ ಬೆಳವಲಕೊಪ್ಪ-ತಪ್ಪಸಕಟ್ಟಿ, ನರಸಾಪುರ-ಕುಳಗೇರಿ, ಢಾಣಕಶಿರೂರ-ಮಣ್ಣೇರಿ, ನೀಲಾನಗರ-ಕೋಟಿಕಲ್ಲ, ಬಿಳೇಕಲ್-ಹೊಸುರ, ಪಾದನಕಟ್ಟೆ-ಹಳದೂರ ಗ್ರಾಮಗಳ ರಸ್ತೆಯ ಆವರ್ತಕ ನಿಧಿಯ ಡಾಂಬರಿಕರಣ, ಎಸ್‌ಟಿಪಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಚಿರ್ಲಕೊಪ್ಪದಿಂದ ಜಾಯಿನ್ ಎಸ್.ಎಚ್. ರಸ್ತೆವರೆಗೆ 0.65 ಕಿ.ಮೀ. ರಸ್ತೆ ಅಭಿವೃದ್ಧಿ ಮತ್ತು ಡಾಂಬರಿಕರಣ ಹಾಗೂ ಕಿತ್ತಲಿ ಅಪ್ರೋಚ ರಸ್ತೆಯಿಂದ ತಾಂಡಾ ತಾಲೂಕು ಗಡಿವರೆಗಿನ 2.10 ಕಿ.ಮೀ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಹಾಗೂ 2018-19ನೇ ಸಾಲಿನ 8443 ಠೇವಣಿ ವಂತಿಗೆ ಯೋಜನೆಯಡಿ ಗುಳೇದಗುಡ್ಡ ಪಟ್ಟಣದಲ್ಲಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡ ನಿರ್ಮಾಣದ ಕಾಮಗಾರಿ ಸೇರಿದಂತೆ ಒಟ್ಟು 564.84ಲಕ್ಷ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ಜನರ ಋಣ ತೀರಿಸುವುದು ನನ್ನ ಜವಾಬ್ದಾರಿ. ಕಾಮಗಾರಿ ಬಗ್ಗೆ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಿದರು.

ಸಕ್ಕರೆ ಸಚಿವ ಆರ್.ಬಿ. ತಿಮ್ಮಾಪುರ, ಮಾಜಿ ಸಚಿವರಾದ ಬಿ.ಬಿ. ಚಿಮ್ಮನಕಟ್ಟಿ, ಎಚ್.ವೈ. ಮೇಟಿ, ಬಿ.ಆರ್. ಯಾವಗಲ್ಲ, ಪಿ.ಆರ್. ಗೌಡರ, ಎಂ.ಡಿ. ಯಲಿಗಾರ, ಎಂ.ಬಿ. ಹಂಗರಗಿ, ಮಹೇಶ ಹೊಸಗೌಡ್ರ, ಡಾ.ಎಂ.ಜಿ. ಕಿತ್ತಲಿ, ಸುವರ್ಣ ಬ್ಯಾಹಟ್ಟಿ, ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ನೋಟಗಾರ, ಶಿವಾನಂದ ಕುಳಗೇರಿ, ಎ್.ಆರ್. ಪಾಟೀಲ, ಎಇಇ ಎಚ್.ಆರ್. ರಾಮಗೇರಿ, ಪುರಸಭೆ ಮುಖ್ಯಾಧಿಕಾರಿ ಜ್ಯೋತಿ ಗಿರೀಶ ಇತರರಿದ್ದರು.