ರಾಜ್ಯದಲ್ಲಿ ಬಿಜೆಪಿಗೆ 24 ಸ್ಥಾನ ಖಚಿತ

ಬಾದಾಮಿ: ನರೇಂದ್ರ ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ 24 ಕ್ಕೂ ಅಧಿಕ ಸ್ಥಾನ ಪಡೆಯಲಿದ್ದು, ಮೂರು ಬಾರಿ ಗೆದ್ದಿರುವ ಪಿ.ಸಿ. ಗದ್ದಿಗೌಡರ ನಾಲ್ಕನೇ ಬಾರಿಗೆ ಗೆಲ್ಲಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆ, ಸದೃಢ ಭಾರತಕ್ಕಾಗಿ ಬಿಜೆಪಿ ಬೆಂಬಲಿಸಿ ಗದ್ದಿಗೌಡರ ಅವರನ್ನು ಆಯ್ಕೆ ಮಾಡಿ ನರೇಂದ್ರ ಮೋದಿ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ತಂದು ಜಾರಿಗೊಳಿಸುವಲ್ಲಿ ಹಗಳಿರುಳು ಶ್ರಮಿಸಿದ್ದೇನೆ. ಹಿಂದುಳಿದ ವರ್ಗಗಳಿಗೆ ಸಂವಿಧಾನಾತ್ಮಕವಾಗಿ ಆದ್ಯತೆ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಎಂದರು.

60 ವರ್ಷ ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬರೀ ಮತಕ್ಕಾಗಿ ರಾಜಕೀಯ ಮಾಡಿತು ಹೊರತು ದೇಶದ ಅಭಿವೃದ್ಧಿ ಮಾಡಲಿಲ್ಲ. ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡ ಮೇಲೆ 5 ವರ್ಷದಲ್ಲಿ ಇಡೀ ಜಗತ್ತು ತಿರುಗಿ ನೋಡುವಂತೆ ಮಾಡಿದ್ದಾರೆ. ದೇಶದ ಪ್ರಗತಿ, ಭದ್ರತೆಗಾಗಿ ಬಿಜೆಪಿಗೆ ಮತ ನೀಡಿ ಎಂದರು.

ಮಾಜಿ ಶಾಸಕರಾದ ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತರ, ಎಂ.ವಿ.ಬನ್ನಿ, ಮುಖಂಡರಾದ ಮಹಾಂತೇಶ ಮಮದಾಪುರ, ಬಿ.ಪಿ. ಹಳ್ಳೂರ, ಸಿದ್ದನಗೌಡ ಪಾಟೀಲ, ಮುತ್ತಣ್ಣ ಕಳ್ಳಿಗುಡ್ಡ, ಬಸವರಾಜ ಪಾಟೀಲ, ಸಿದ್ದಣ್ಣ ಶಿವನಗುತ್ತಿ, ಉಮೇಶ ಅಕ್ಕಿ, ಭಾಗ್ಯಾ ಉದ್ನೂರ, ನಾಗರಾಜ ಕಾಚಟ್ಟಿ ಇತರರು ಉಪಸ್ಥಿತರಿದ್ದರು. ರೋಡ್ ಶೋದಲ್ಲಿ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇವಲ ನಾಲ್ಕೈದು ಜಿಲ್ಲೆಗಳಿಗೆ ಅನುದಾನ ಕೊಡುವ ಮೂಲಕ ಅಲ್ಲಿನ ಗುತ್ತಿಗೆದಾರರಿಂದ ಕಮಿಷನ್ ಪಡೆದಿದ್ದಾರೆ. ಅದೇ ರೀತಿ ಪಿಡಬ್ಲುೃಡಿ ಸಚಿವ ರೇವಣ್ಣ ಕೂಡ ಕಮಿಷನ್ ಪಡೆದು ಇದೀಗ ತಮ್ಮ ಮಕ್ಕಳ ಚುನಾವಣೆಯಲ್ಲಿ ಹಣ ಹಂಚುತ್ತಿದ್ದಾರೆ.
– ಶ್ರೀರಾಮುಲು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ

Leave a Reply

Your email address will not be published. Required fields are marked *