ವಿದ್ಯುತ್ ಪ್ರವಹಿಸಿ ಲೈನ್‌ಮೆನ್‌ಗೆ ಗಂಭೀರ ಗಾಯ

ಬಾದಾಮಿ: ತಾಲೂಕಿನ ಬೇಲೂರ ಗ್ರಾಮದಲ್ಲಿ ಲೈನ್‌ಗಳ ಪರಿಶೀಲನೆಗೆ ತೆರಳಿದ್ದ ಲೈನ್‌ಮನ್ ರಾಚಪ್ಪ ನಿಡಗುಂದಿ ಅವರಿಗೆ ವಿದ್ಯುತ್ ಸ್ಪರ್ಶವಾಗಿ ಮಂಗಳವಾರ ತೀವ್ರ ಗಾಯಗೊಂಡಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ರಾಚಪ್ಪ ನಿಡಗುಂದಿ ಅವರ ಬಲಗೈ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದು, ದೇಹದ ಇತರ ಭಾಗದಲ್ಲೂ ಗಾಯಗಳಾಗಿವೆ. ಮೂರು ದಿನಗಳವರೆಗೂ ಏನನ್ನು ಹೇಳುವುದಕ್ಕೆ ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಘಟನೆ ಹಿನ್ನೆಲೆ: ಗ್ರಾಮದಲ್ಲಿ ಲೈನ್‌ಗಳ ಪರಿಶೀಲನೆಗೆ ಇಬ್ಬರು ಲೈನ್‌ಮೆನ್‌ಗಳು ಪ್ರತ್ಯೇಕ ಕಡೆ ತೆರಳಿ ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದರು. ಆಗ (ಎಲ್‌ಸಿ)ಪಡೆದಿದ್ದ ಓರ್ವ ತನ್ನ ಕೆಲಸ ಪೂರ್ಣಗೊಂಡಿರುವ ಬಗ್ಗೆ ಸ್ಟೇಷನ್‌ಗೆ ತಿಳಿಸುವುದರ ಜತೆಗೆ ಇನ್ನೊಬ್ಬನ ಕೆಲಸ ಪೂರ್ಣಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಲೈನ್ ಹಾಕುವಂತೆ ಸ್ಟೇಷನ್ ಸಿಬ್ಬಂದಿಗೆ ತಿಳಿಸಿದ್ದಾನೆ. ಆದರೆ, ಸ್ಟೇಷನ್ ಗುತ್ತಿಗೆ ಸಿಬ್ಬಂದಿ ಇನ್ನೊಬ್ಬನನ್ನು ವಿಚಾರಿಸದೆ ಲೈನ್ ಹಾಕಿದ್ದರಿಂದ ಈ ಘಟನೆ ಸಂಭವಿಸಿದೆ.

ಸಿಬ್ಬಂದಿ ಪ್ರತಿಭಟನೆ
ಸ್ಟೇಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಸಿಬ್ಬಂದಿ ನಿರ್ಲಕ್ಷೃದಿಂದ ಘಟನೆ ನಡೆದಿದ್ದು, ನಮ್ಮ ಜೀವಕ್ಕೆ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ರಾಜ್ಯ ವಿದ್ಯುತ್ ಪ್ರಸರಣಾ ನಿಯಮಿತ ನೌಕರರ ಸಂಘದವರು ಬೇಲೂರ ಶಾಖೆ ಎದುರು ಪ್ರತಿಭಟನೆ ನಡೆಸಿದರು. ಸ್ಟೇಷನ್‌ನಲ್ಲಿ ಕಾರ್ಯನಿರ್ವಹಿಸಲು ನಮ್ಮ ಹೆಸ್ಕಾಂ ಇಲಾಖೆ ಸಿಬ್ಬಂದಿಯನ್ನು ನೇಮಿಸಬೇಕೆಂದು ಒತ್ತಾಯಿಸಿದರು.

ಯೂನಿಯನ್ ಮುಖಂಡ ಲಕ್ಷ್ಮಣ ಹಡಪದ ಮಾತನಾಡಿ, ಸ್ಟೇಷನ್‌ನಲ್ಲಿ ಕಾರ್ಯನಿರ್ವಹಿಸಲು ಖಾಸಗಿ ಏಜೆನ್ಸಿಗಳಿಗೆ ಗುತ್ತಿಗೆ ನೀಡಲಾಗುತ್ತಿದೆ. ಇದರಿಂದ ನಮ್ಮ ಜೀವಕ್ಕೆ ತೊಂದರೆಯಾಗುತ್ತಿದೆ. ಖಾಸಗಿ ಗುತ್ತಿಗೆದಾರರು ನೇಮಿಸುವ ಸಿಬ್ಬಂದಿಗೆ ಅನುಭವದ ಕೊರತೆ ಮತ್ತು ನಿರ್ಲಕ್ಷೃತನ ಹೆಚ್ಚಿದೆ ಎಂದು ಆರೋಪಿಸಿದರು.

ಪ್ರತಿ ತಿಂಗಳು ಒಂದು ಸ್ಟೇಷನ್ ನಿರ್ವಹಣೆಗಾಗಿ 1.70 ಲಕ್ಷ ರೂ. ಪಡೆಯುವ ಖಾಸಗಿ ಏಜೆನ್ಸಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಓರ್ವ ಸಿಬ್ಬಂದಿಗೆ 10 ರಿಂದ 15 ಸಾವಿರ ರೂ. ವೇತನ ಆಧಾರದಲ್ಲಿ ಗುತ್ತಿಗೆ ಪಡೆಯುವ ಗುತ್ತಿಗೆದಾರರು, ಕೇವಲ 3 ರಿಂದ 4 ಸಾವಿರ ರೂ. ನೀಡಿ ನಾಲ್ಕೈದು ಸಿಬ್ಬಂದಿ ನಿಯೋಜಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸಿಬ್ಬಂದಿ ಬಸವರಾಜ ನಿಡಗುಂದಿ, ಎಸ್.ಎಸ್.ಕೋಣೇರಿ, ಎಂ.ಕೆ.ಗೌಡರ, ಮಂಜುನಾಥ ಸಾಲಿ, ಶಿವಾಜಿ ಕಟಗೇರಿ ಮತ್ತಿತರರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *