ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ

ಬಾದಾಮಿ: ಬಣಜಿಗ ಸಮಾಜ ಬಾಂಧವರು ಕಷ್ಟವಾದರೂ ಸರಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ವೀರಪುಲಿಕೇಶಿ ವಿದ್ಯಾ ಸಂಸ್ಥೆ ಚೇರ್ಮನ್ ಎ.ಸಿ. ಪಟ್ಟಣದ ಹೇಳಿದರು.

ಆನಂದ ನಗರದ ಗಣೇಶ ದೇವಸ್ಥಾನದಲ್ಲಿ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಶನಿವಾರ ಹಮ್ಮಿಕೊಂಡಿದ್ದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸೇವಾ ನಿವೃತ್ತರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ವ ಜನರೊಂದಿಗಿನ ಅವಿನಾಭಾವ ಸಂಬಂಧದಿಂದ ಬಣಜಿಗರು ಸ್ವಂತ ಉದ್ಯೋಗ ಮೂಲಕ ಶೈಕ್ಷಣಿಕ, ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಮಾತನಾಡಿ, ದಿ.ಕೆ.ಎಂ. ಪಟ್ಟಣಶೆಟ್ಟಿ, ಜಿ.ಎಸ್. ಮಮದಾಪುರ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದು ಎಲ್ಲ ಸಮಾಜವನ್ನು ಗೌರವಿಸಬೇಕು. ನಾವು ಎರಡು ಸಂಸ್ಥೆಗಳಿಂದ ಬಣಜಿಗ ಸಮಾಜದ ಬದ್ಧತೆಯನ್ನು ಬಿತ್ತರಿಸುತ್ತಿದ್ದೇವೆ. ಇದಕ್ಕೆ ಸಮಾಜದ ಸರ್ವರೂ ಪ್ರೋತ್ಸಾಹಿಸುವ ಮೂಲಕ ಸಂಘಟನೆಯನ್ನು ಶೈಕ್ಷಣಿಕ ಹಾಗೂ ಸಾಮಾಜಿಕ ಕಳಕಳಿಯಿಂದ ಮುಂದುವರಿಸಬೇಕು ಎಂದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪುರ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ ಮತ್ತು ಸಹಕಾರಿ ಸಂಸ್ಥೆಗಳು ಬಣಜಿಗರ ಮುಂದಾಳತ್ವದಲ್ಲಿ ಮುನ್ನಡೆಯುತ್ತಿವೆ. ಡಾ.ವಿಜಯ ಸಂಕೇಶ್ವರ ಅವರು ಸರ್ವ ಜನಾಂಗಕ್ಕೂ ಮಾದರಿಯಾಗಿದ್ದಾರೆ ಎಂದರು.

ಐಎಎಸ್ ಪರೀಕ್ಷೆ ಪಾಸಾದ ರಾಹುಲ್ ಸಂಕನೂರ ಮಾತನಾಡಿ, ಮಕ್ಕಳಿಗೆ ಪ್ರೋತ್ಸಾಹಿಸುವ ಜತೆಗೆ ಅವರ ಆಸೆ, ಆಕಾಂಕ್ಷೆಗಳಿಗೂ ಮನ್ನಣೆ ನೀಡಬೇಕು.ವಿದ್ಯಾರ್ಥಿಗಳ ಗುರಿಯನ್ನು ಪಾಲಕರು ಅರಿತು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘ, ಕೆರೂರ ಗಣ್ಯ ವ್ಯಾಪಾರಸ್ಥ ಮಲ್ಲಪ್ಪಜ್ಜ ಘಟ್ಟದ ಕುಟುಂಬದ ವತಿಯಿಂದ ರಾಹುಲ್ ಸಂಕನೂರ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಬಣಜಿಗ ಸಮಾಜದ ನಿವೃತ್ತ ನೌಕರರನ್ನು ಗೌರವಿಸಲಾಯಿತು.

ಶಶಿಧರ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಬಿ. ಕಲಹಾಳ, ಕಾರ್ಯದರ್ಶಿ ನಾಗರಾಜ ಕಾಚೆಟ್ಟಿ ಉಪಸ್ಥಿತರಿದ್ದರು. ಸಮಾಜದ ಹಿರಿಯರು, ಮಹಿಳೆಯರು ಹಾಗೂ ಯುವಕರು ಪಾಲ್ಗೊಂಡಿದ್ದರು. ಬಿ.ಎಸ್. ಪವಾಡಶೆಟ್ಟಿ ಸ್ವಾಗತಿಸಿದರು. ಸಂತೋಷ ಪಟ್ಟಣಶೆಟ್ಟಿ ನಿರೂಪಿಸಿದರು. ಬಿ.ಎಸ್. ಕಲಗುಡಿ ವಂದಿಸಿದರು.

ಬಣಜಿಗ ಸಮಾಜದ ರಾಹುಲ್ ಸಂಕನೂರ ಭಾರತೀಯ ಆಡಳಿತ ಸೇವಾ ಪರೀಕ್ಷೆಯಲ್ಲಿ ದೇಶಕ್ಕೆ 17ನೇ ಹಾಗೂ ರಾಜ್ಯಕ್ಕೆ ಮೊದಲ ರ‌್ಯಾಂಕ್ ಪಡೆದಿರುವುದು ಮಾದರಿಯಾಗಿದೆ. ರಾಹುಲ್ ಅವರನ್ನು ಸಮಾಜದವರು ಅನುಕರಣೆ ಮಾಡುವ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕು.
ಎಂ.ಕೆ. ಪಟ್ಟಣಶೆಟ್ಟಿ, ಮಾಜಿ ಶಾಸಕ

Leave a Reply

Your email address will not be published. Required fields are marked *