More

    ಅಂಕಣ, ಬದಲಾದ ಭಾರತ; ಕರ್ನಾಟಕದ ಮೇಲೆ ಬೆಂಗಳೂರಿನ ದೌರ್ಜನ್ಯ! 

    ಅಂಕಣ, ಬದಲಾದ ಭಾರತ; ಕರ್ನಾಟಕದ ಮೇಲೆ ಬೆಂಗಳೂರಿನ ದೌರ್ಜನ್ಯ! ಸಮುದ್ರದ ನಂಟು ಉಪ್ಪಿಗೆ ಬರ ಅಂತಾರಲ್ಲ ಹಾಗೆ ಇದು. ಇದು ಕರ್ನಾಟಕಕ್ಕೂ ಬೆಂಗಳೂರಿಗೂ ಇರುವ ಸಂಬಂಧ. ಬೆಂಗಳೂರಿಗೆ ಭಾಗ್ಯ; ಕರ್ನಾಟಕಕ್ಕೆ ಏನು ಬಂತು ಭಾಗ್ಯ ಎನ್ನುವ ಸ್ಥಿತಿ ಇದು! ಗಂಜಿಗೆ ಗತಿ ಇಲ್ಲದವನಿಗೆ ಮೀಸೆ ತಿರುವೋನು ಒಬ್ಬ ಅಂತಾರಲ್ಲ ಹಾಗೆ ಇದು.

    ಕರ್ನಾಟಕಕ್ಕೆ ಬೆಂಗಳೂರು ಕಿರೀಟ ನಿಜ; ಆದರೆ ಬರಗಾಲದಲ್ಲಿ ಬೇಯುತ್ತಿದೆ ಕರ್ನಾಟಕ! ಬಡತನದ ಬೇಗೆಯಲ್ಲಿ ಬೇಯುತ್ತಿರುವ ರಾಜ್ಯದ 20 ಜಿಲ್ಲೆಗಳು ಒಂದು ಕಡೆ; ಹಾಲುಜೇನಿನ ಹೊಳೆ ಹರಿಯುತ್ತಿರುವ ಬೆಂಗಳೂರ ಇನ್ನೊಂದು ಕಡೆ. ಇದು ಇಂದಿನ ಕರ್ನಾಟಕ. ಬಡತನದ ಸಾಗರದಲ್ಲಿ ಸಿರಿವಂತಿಕೆಯ ದ್ವೀಪ ಅಂತಾರಲ್ಲ ಹಾಗೆ ಕರ್ನಾಟಕ- ಬೆಂಗಳೂರು ಸಂಬಂಧ! ಕರ್ನಾಟಕದಲ್ಲಿ ಕಟ್ಟಕಡೆಯಲ್ಲಿ ಜಿಲ್ಲೆಗಳು 20 ಇವೆ; ಅಗ್ರಪಂಕ್ತಿಯಲ್ಲಿ ಇರೋದು ಬೆಂಗಳೂರು ಒಂದು. ದಕ್ಷಿಣ ಕನ್ನಡ ಇನ್ನೊಂದು.

    ಕರ್ನಾಟಕ ಆರ್ಥಿಕ ಎಕ್ಸೆ್ಪ್ರಸ್ ಓಡುವುದು ಈ ಒಂದೇ ಮಾರ್ಗದಲ್ಲಿ! ಅದು ಬೆಂಗಳೂರು-ಮಂಗಳೂರು ನಡುವೆ ಮಾತ್ರ. ಬೇಕಾದರೆ ಸಮೀಪದ ಉಡುಪಿಯನ್ನು ಸೇರಿಸಬಹುದು ಅಷ್ಟೇ. ಈ ಕರ್ನಾಟಕ ಆರ್ಥಿಕ ಎಕ್ಸೆ್ಪ್ರಸ್ ಹುಬ್ಬಳ್ಳಿ ಕಡೆಗೂ ತಿರುಗುವುದಿಲ್ಲ; ರಾಯಚೂರು – ಕಲ್ಬುರ್ಗಿ ಕಡೆಗೆ ತಿರುಗಿಯೂ ನೋಡುವುದಿಲ್ಲ! ಇದು ಅರ್ಥವಾಗಬೇಕಾದರೆ ಒಂದಿಷ್ಟು ವಿವರ ನೋಡಬೇಕು.

    ಅದು ಇಲ್ಲಿದೆ: ಕೃಷಿ ವಲಯದಲ್ಲಿ ರಾಜ್ಯದಲ್ಲಿ ಟಾಪ್ -10 ಎಂದರೆ ಬೆಳಗಾವಿ, ಬಳ್ಳಾರಿ, ತುಮಕೂರು, ಕಲ್ಬುರ್ಗಿ, ಬಾಗಲಕೋಟೆ, ದಕ್ಷಿಣ ಕನ್ನಡ, ಶಿವಮೊಗ್ಗ, ರಾಯಚೂರು, ವಿಜಯಪುರ ಮತ್ತು ದಾವಣಗೆರೆ ಜಿಲ್ಲೆಗಳು. ಇಲ್ಲಿ ಮೈಸೂರು ಇಲ್ಲ; ಮಂಡ್ಯ ಕೂಡ ಇಲ್ಲ! ನಿಮಗೆ ಅಚ್ಚರಿ ಎನಿಸುವ ಸಂಗತಿ ಎಂದರೆ ಮಂಡ್ಯದ್ದು. ರಾಜ್ಯದ ಕನಿಷ್ಠ ನಗರೀಕರಣ ಆಗಿರುವ 5 ಜಿಲ್ಲೆಗಳಲ್ಲಿ ಮಂಡ್ಯ ಕೂಡ ಒಂದು! ಚಾಮರಾಜನಗರ ಇನ್ನೊಂದು. ನಮ್ಮ ಭಾವನೆ ಎಂದರೆ ಮಂಡ್ಯ ಶ್ರೀಮಂತ; ಚಾಮರಾಜನಗರ ಬಡಕಲು ಜಿಲ್ಲೆ! ಎಷ್ಟು ತಪ್ಪು ಕಲ್ಪನೆ ಇದು ಗೊತ್ತಾಯಿತೇ?

    ಹೀಗೆ ಕೃಷಿಯಲ್ಲಿ ಜೀರ್ಣಾವಸ್ಥೆಯಲ್ಲಿರುವ ನಮ್ಮ 21 ಜಿಲ್ಲೆಗಳು ಬೆಂಗಳೂರು ನಗರದ ಕೊಬ್ಬಿದ ಜಿಲ್ಲೆಯೊಂದಿಗೆ ಪೈಪೋಟಿ ನಡೆಸಬೇಕು! ಹೆಚ್ಚಿಗೆ ಬಸ್ ಚಾರ್ಜ್ ನೀಡಬೇಕು! ಅಷ್ಟೇ ಅಲ್ಲ, ಈಗ ತಾನೇ ಹಾಲಿನ ಬೆಲೆ ಕೂಡ ಜಾಸ್ತಿ ಆಗಿದೆ. ಅಲ್ಲೂ ಅತಿ ಕಡುಬಡವ ಜಿಲ್ಲೆಗಳ ಬಗ್ಗೆ ಕಿಂಚಿತ್ತೂ ಕರುಣೆ ಕಾಣಲಿಲ್ಲ.

    ’ಬಡವರು ಸತ್ತರೆ ಸುಡಲಿಕ್ಕೂ ಸೌದಿಲ್ಲ

    ಒಡಲ ಕಿಚ್ಚಿನಲ್ಲಿ ಹೆಣಬೆಂತೋ ದೇವರೆ

    ಬಡವಾಗೆ ಸಾವ ಕೊಡಬೇಡ’ ಎಂಬ ಜಾನಪದ ಪದ ನೆನಪಾಗುತ್ತದೆ.

    ರಾಜ್ಯದ ಬಡಕಲು ಜಿಲ್ಲೆಗಳ ಜನರನ್ನು ನೋಡಿದರೆ. 2018ರಲ್ಲಿ ಹಿಂಗಾರಿನಲ್ಲಿ 156 ತಾಲೂಕುಗಳು ಬರಗಾಲ ಪೀಡಿತವಾಗಿದ್ದವು. ಆಗ ಮುಂಗಾರಿನಲ್ಲಿ 100 ತಾಲ್ಲೂಕುಗಳು ಬರಗಾಲ ಪ್ರದೇಶ ಎಂದು ಘೊಷಿಸಲ್ಪಟ್ಟಿದ್ದವು. 18 ವರ್ಷಗಳಲ್ಲಿ 11 ವರ್ಷ ನಮ್ಮ ಜೊತೆ ಬರಗಾಲ ಬಂದಿತ್ತು. ಅದಾವುದನ್ನೂ ಲೆಕ್ಕಿಸದೆ ಈಗ ನೋಡಿ ಈ ಬಸ್ ಚಾರ್ಜ್ ಏರಿಕೆ, ಹಾಲು ಬೆಲೆ ಏರಿಕೆ ಬಂದಿವೆ.

    ಇವಾವುದಕ್ಕೂ ಬರಗಾಲ ಜಿಲ್ಲೆಗಳ ಬಗ್ಗೆ ಕಿಂಚಿತ್ತೂ ಕರುಣೆಯಿಲ್ಲ. ಏಕೆಂದರೆ ಈ ನಿರ್ಧಾರ ಎಲ್ಲಾ ಆಗುವುದು ಬೆಂಗಳೂರಿನಲ್ಲೇ! ಬೆಂದಕಾಳೂರು ಇದಾದರೂ ಕರ್ನಾಟಕದ ಬಹುಪಾಲು ಕಡುಬಡವ ಜಿಲ್ಲೆಗಳಲ್ಲಿ ಬೆಂದ ಜೀವನ ನಡೆಸುತ್ತಿರುವವರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಹಾಲಿನ ಬೆಲೆ ಬಸ್ ದರ ಏರಿಕೆ ಕಾಲದಲ್ಲಿ ಕರುಣೆ ಅಂತಃಕರಣ ಸಾಸುವೆ ಕಾಳಿನಷ್ಟು ಕಾಣಲಿಲ್ಲ. ರಾಜ್ಯದಲ್ಲಿ ಕೃಷಿ ಜಿಡಿಪಿ ಪಾಲು ಶೇ.6.92 ಕ್ಕೆ ಕುಸಿದಿರುವ ಬಗ್ಗೆ ಪರಿವೆಯೇ ಇಲ್ಲ- ಬೆಂಗಳೂರಿನಲ್ಲಿ ದರ್ಬಾರು ನಡೆಸುತ್ತಿರುವವರಿಗೆ. ಇದು ಇವತ್ತಿನ ಮಾತಲ್ಲ. 20 ವರ್ಷಗಳಿಂದ ಉದ್ದಕ್ಕೂ ಕಂಡು ಬಂದಿರುವ ಸತ್ಯ ಇದು.

    ಕೃಷಿ ಬಿಡಿ ಅದು ಕಟ್ಟಕಡೆಯಲ್ಲಿದೆ. ಉದ್ಯಮವಾದರೂ ಚೆನ್ನಾಗಿದೆಯಾ? ಅದೊಂದು ಕರ್ಮ. ಅದು ಹೇಗಿದೆ ಗೊತ್ತಾ? ಉದ್ಯಮದಲ್ಲಿ ತಯಾರಿಕೆ ಘಟಕಗಳು ಬಳಸುತ್ತಿರುವ ರಾಜ್ಯದ ವಿದ್ಯುತ್ ಪಾಲು ಶೇ. 15 ಮಾತ್ರ! ಅದೇ ಅಲಂಕಾರ ಬೆಡಗು ಬಿನ್ನಾಣ ಗಳಿಗಾಗಿ ವಾಣಿಜ್ಯ ವಿದ್ಯುತ್ ಖರ್ಚು ಶೇ. 13 ಇದೆ! ಅಂದರೆ ಶೋಕಿಗೇ ವಿದ್ಯುತ್ ಜಾಸ್ತಿ ಖರ್ಚು ಆಗುತ್ತಿದೆ. ಕೃಷಿ ವಲಯದ ಉತ್ಪತ್ತಿ 1.15 ಲಕ್ಷ ಕೋಟಿ ರೂಪಾಯಿ ಇದ್ದರೆ ಉದ್ಯಮದ ಬಾಬ್ತು ಎರಡು ಲಕ್ಷ ಕೋಟಿ ರೂಪಾಯಿ ಮಾತ್ರ. ಇಲ್ಲಾದರೂ ಬೆಂಗಳೂರು ಬಿಟ್ಟರೆ ಕರ್ನಾಟಕ ಬೆಳಗುವುದೇ? ಇಲ್ಲೂ ಕರ್ನಾಟಕ ಕತ್ತಲೆಯಲ್ಲಿದೆ!

    ಬೆಂಗಳೂರು ಜಿಲ್ಲೆಯ ಬಾಬ್ತಿಗೆ ಸಮ ಆಗಲು ರಾಜ್ಯದ 20 ಜಿಲ್ಲೆಗಳು ಜೋಡಿಯಾಗಿ ಬರಬೇಕು! ಬೆಂಗಳೂರು ನಗರ ಜಿಲ್ಲೆ, ದಕ್ಷಿಣ ಕನ್ನಡ, ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳು ಉದ್ಯಮದ ಅರ್ಧದಷ್ಟನ್ನು ಕೊಳ್ಳೆಹೊಡೆದಿದೆ. ಉದ್ಯಮ ಕ್ಷೇತ್ರದ ಟಾಪ್ 10 ಜಿಲ್ಲೆಗಳು ಈ ವಲಯದ ಮುಕ್ಕಾಲು ಭಾಗವನ್ನು ಆವರಿಸಿಕೊಂಡಿವೆ. 20 ಜಿಲ್ಲೆಗಳದ್ದು ಕಾಲುಭಾಗ ಮಾತ್ರ ಪಾಲು. ಇದು ವಾಸ್ತವ ಸ್ಥಿತಿ. ಈ ಜಿಲ್ಲೆಗಳು ಕೃಷಿಯಲ್ಲೂ ಬಡವ, ಉದ್ಯಮದಲ್ಲೂ ಕಡುಬಡವ! ಹೀಗಿದ್ದಾಗ ಎಲ್ಲ ಜಿಲ್ಲೆಗಳನ್ನು ಸರಿಸಮನಾಗಿ ನೋಡಿದರೆ, ಹಾಲಿನ ಬೆಲೆ- ಬಸ್ ದರ ಏರಿಸಿದರೆ ಅದು ಬಡವರ ಮೇಲೆ ಬರೆ ಎಳೆದಂತೆಯೇ ಸರಿ.

    ಇನ್ನು ಸೇವಾ ಕ್ಷೇತ್ರಕ್ಕೆ ಬರೋಣ. ಇಲ್ಲೂ ಬೆಂಗಳೂರು ನಗರವು ಅಂಬಾರಿ ಆನೆ – ಐರಾವತ! ಉಳಿದ ಜಿಲ್ಲೆಗಳು ಕುರಿ ಕೋಳಿಗಳು!! ಬೆಂಗಳೂರು ನಗರ ಒಂದು ಜಿಲ್ಲೆಗೆ ಸರಿಸಮವಾಗಲು ರಾಜ್ಯದ 25 ಜಿಲ್ಲೆಗಳು ಒಟ್ಟಾಗಿ ಬರಬೇಕು! ಈ ಎಲ್ಲ ಜಿಲ್ಲೆಗಳು ಕೊಡುವ ಒಟ್ಟು ಉತ್ಪತ್ತಿ 2.63 ಲಕ್ಷ ಕೋಟಿ ರೂಪಾಯಿ, ಬೆಂಗಳೂರು ನಗರದ ಭಾಗ್ಯ 2.71 ಲಕ್ಷ ಕೋಟಿ ರೂಪಾಯಿ! ಇನ್ನು ರಾಜ್ಯದ ಕೃಷಿ ವಲಯ ಉದ್ಯಮ ವಲಯ ಎರಡು ಸೇರಿದರೆ ಮೂರು ಲಕ್ಷ ಕೋಟಿ ರೂಪಾಯಿ. ಆದರೆ ಸೇವಾ ಕ್ಷೇತ್ರ ಒಂದೇ 6 ಲಕ್ಷ ಕೋಟಿ ರೂಪಾಯಿ ದಾಟಿದೆ!

    ಈ ವಲಯದ ಅರ್ಧಪಾಲು ಸುಮಾರು 3 ಲಕ್ಷ ಕೋಟಿ ರೂಪಾಯಿ ಬೆಂಗಳೂರು ನಗರ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳದ್ದು. ಅದಕ್ಕೆ ನಾನು ಆಗಲೇ ಹೇಳಿದೆ – ಕರ್ನಾಟಕ ಆರ್ಥಿಕ ಎಕ್ಸೆ್ಪ್ರಸ್ ಓಡುವುದು ಬೆಂಗಳೂರು-ಮಂಗಳೂರು ನಡುವೆ ಮಾತ್ರ ಎಂದು. ರಾಜ್ಯದ 21 ಜಿಲ್ಲೆಗಳ ಸೇವಾ ಕ್ಷೇತ್ರದ ಪಾಲು ಕೇವಲ ಕಾಲುಭಾಗ ಆಗುತ್ತದೆ. ಅಂದರೆ ಈ 20 – 21 ಜಿಲ್ಲೆಗಳು ಕೃಷಿ, ಉದ್ಯಮ ಹಾಗೂ ಸೇವಾ ಕ್ಷೇತ್ರ ಎಲ್ಲದರಲ್ಲೂ ಪಾತಾಳದಲ್ಲಿ! ಈ ಜಿಲ್ಲೆಗಳನ್ನು ಅಗ್ರಪಂಕ್ತಿಯ ಜಿಲ್ಲೆಗಳ ಜೊತೆ ಸೇರಿಸಿ ಅಳತೆ ಮಾಡಿದರೆ ಅದು ಮಾನದಂಡ ಆಗುವುದಿಲ್ಲ, ಮಾನ ದಂಡ ಆಗುತ್ತದೆ? ಮಾನ ಮರ್ಯಾದೆ ಹೋಗುತ್ತದೆ.

    ಹೀಗಾಗಿ ಹಾಲಿರಲಿ ಬಸ್ ದರ ಆಗಲಿ ಬೆಲೆ ಏರಿಕೆ ಮಾಡುವಾಗ ತಲೆಗೆಲ್ಲಾ ಒಂದೇ ಮಂತ್ರ ಎಂಬ ನೀತಿ ಬಂದರೆ ಅದು ಅಪಾಯಕಾರಿ ಅನರ್ಥಕಾರಿ ಹಾಗೂ ಅಮಾನುಷ ಆಗುತ್ತದೆ. ಈ ರೀತಿ ಮಾಡುವುದರಿಂದ ಕರ್ನಾಟಕದ ಮೇಲೆ ಬೆಂಗಳೂರಿನ ದೌರ್ಜನ್ಯ ನಡೆದಂತೆ ಆಗುತ್ತದೆ. ರಾಜ್ಯದ ಉತ್ಪತ್ತಿಯಲ್ಲಿ 9 ಜಿಲ್ಲೆಗಳು ಮೂರನೇ ಎರಡು ಪಾಲನ್ನು ಹೊಂದಿವೆ. 21 ಜಿಲ್ಲೆಗಳು ಮೂರನೇ ಒಂದು ಭಾಗ ಪಾಲು ಹೊಂದಿವೆ.

    ಇವೆರಡನ್ನು ಬೇರೆ ಮಾಡಿ ಆರ್ಥಿಕ ನ್ಯಾಯ ಒದಗಿಸಬೇಕು. ಅದು ಆಗಲು ಸುಲಭ ಮಾರ್ಗ ಇದೆ. ಅದೆಂದರೆ ಬೆಂಗಳೂರಿಗೇ ಬೇರೆ ಒಂದು ಬಜೆಟ್, ಕರ್ನಾಟಕಕ್ಕೆ ಬೇರೆ ಒಂದು ಬಜೆಟ್ ಮಾಡಿದರೆ ಆಗ ಕರ್ನಾಟಕಕ್ಕೆ ನ್ಯಾಯ ಸಲ್ಲುತ್ತದೆ; ನಿಜಸ್ಥಿತಿ ಅರಿವಾಗುತ್ತದೆ; ಪರಿಹಾರ ಹುಡುಕುವ ಕಾರ್ಯ ಸಮರ್ಪಕ ಹಾಗೂ ಸಮರ್ಥ ಆಗುತ್ತದೆ. ಬೆಂಗಳೂರಿನಲ್ಲಿರುವ ಶೇ. 80ರಷ್ಟು ಅನ್ಯ ಭಾಷಿಕರನ್ನು ಮುದ್ದು ಮಾಡುವುದು ನಿಲ್ಲುತ್ತದೆ; ಕನ್ನಡಿಗರ ಕಷ್ಟಕ್ಕೆ ಸ್ಪಂದಿಸುವ ಅವಕಾಶವೂ ಬರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts