More

  ಅಂಕಣ, ಬದಲಾದ ಭಾರತ; ಅಕ್ಷಯ ತೃತೀಯಕ್ಕೆ ಚಿನ್ನ 50 ಸಾವಿರ ರೂಪಾಯಿ 

  ಚಿನ್ನ ಈಗ ಚಿನ್ನದ ಜಿಂಕೆ ಆಗಿದೆ. ಈಗಿಲ್ಲ ರಾಮಬಾಣ ಚಿನ್ನದ ಜಿಂಕೆ ನಿಲ್ಲಿಸಲು! ಚೀನಾ ಕರೋನ ವೈರಸ್ ಚಿನ್ನದ ಬೆಲೆಗೆ ನಾಗಾಲೋಟ ನೀಡಿದೆ. ಚಿನ್ನ ಮೂಗುದಾರ ಇಲ್ಲದ ಗೂಳಿಯಂತಾಗಿದೆ. ಏಪ್ರಿಲ್ ತಿಂಗಳಿನಲ್ಲೇ ಅಕ್ಷಯ ತೃತೀಯ. ಆ ವೇಳೆಗೆ ನಮ್ಮಲ್ಲಿ 10 ಗ್ರಾಂ ಚಿನ್ನದ ಬೆಲೆ 50,000 ರೂಪಾಯಿಗೆ ನುಗ್ಗಿದರೂ ಅಚ್ಚರಿ ಇಲ್ಲ!

  ಏಕೆಂದರೆ ಮಿಂಚಿನ ಓಟ ಈ ಚಿನ್ನದ ಜಿಂಕೆಯದು.10 ಗ್ರಾಂ ಚಿನ್ನಕ್ಕೆ 50,000 ರೂಪಾಯಿ ಎಂದರೆ ಎಲ್ಲರೂ ಹೌಹಾರುವುದು ಸಹಜ. ಎಷ್ಟೇ ಜಟಡಿಹಾರಿದರೂ- ಹಾರಿ ಓಡುವ ಈ ಚಿನ್ನದ ಜಿಂಕೆ ಕೈಗೆ ಸಿಕ್ಕುವುದಿಲ್ಲ. ಅದಕ್ಕೆ ಈಗ ಮದ-ಮತ್ತು ಬಂದಿದೆ. ಅದು ಮದಗಜ ಆಗಿದೆ.

  ಇದೇನು ನನಗೆ ಅಚ್ಚರಿ ಎನಿಸುವುದಿಲ್ಲ. ಇದನ್ನು ನಾನು ಹಿಂದೆಯೇ ಕಂಡಿದ್ದೆ; ಹಿಂದೆಯೇ ಹೇಳಿದ್ದೆ. 2018ರ ಡಿಸೆಂಬರ್ 3ರಂದು ಇದೇ ‘ಬದಲಾದ ಭಾರತ’ ಕಾಲಂನಲ್ಲಿ ನಾನು ಚಿನ್ನದ ನಾಗಾಲೋಟ’ ನಿರೀಕ್ಷಿಸಿದ್ದೆ! ಆಗ ಚಿನ್ನದ ಬೆಲೆ 10ಗ್ರಾಂಗೆ 31,000 ರೂಪಾಯಿ ಇತ್ತು. ಆಗ ವಿಶ್ವ ಪೇಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ ಒಂದು ಔನ್ಸ್ ಗೆ 1260 ಡಾಲರ್ ಬಳಿ ಇತ್ತು. ಚಿನ್ನಕ್ಕೆ ಈಗ ಸುವರ್ಣ ಕಾಲ ಎಂದು ಆಗ ನಾನು ಬರೆದೆ. ಇದು ನನ್ನ ಹೊನ್ನಬರಹ! ಚಿನ್ನದ ಬೆಲೆ ಶೇ. 50ರಷ್ಟು ಏರುತ್ತದೆ ಎಂದು ನಾನು ಆಗಲೇ ಬರೆದಿದ್ದೆ.

  ಇದೇ ಮಾತು ‘ಬದಲಾದ ಭಾರತ’ದಲ್ಲಿ 2019ರ ಜೂನ್ 24ರಲ್ಲಿ ಮುಂದುವರೆದಿತ್ತು. ಒಂದೆರಡು ವರ್ಷಗಳಲ್ಲಿ 10 ಗ್ರಾಂ ಚಿನ್ನಕ್ಕೆ 50,000 ರೂಪಾಯಿ ಆಗಬಹುದು ಎಂಬುದು ಆಗಿನ ನನ್ನ ಭವಿಷ್ಯವಾಣಿ. ಹೋದ ಆಗಸ್ಟ್ ನಲ್ಲಿ ಚಿನ್ನದ ಬೆಲೆ 40,000 ರೂಪಾಯಿ ಮುಟ್ಟಿತ್ತು! ಈಗ 43,000 ರೂಪಾಯಿ ದಾಟಿದೆ. ಹೇಗಿದೆ ನೋಡಿ ಚಿನ್ನದ ಜಿಂಕೆಯ ಓಟ!. ಹೋದ ವರ್ಷ ಏಪ್ರಿಲ್ ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 33 ಸಾವಿರ ರೂಪಾಯಿ; ಈಗ 43,000 ರೂಪಾಯಿ!!

  ಚಿನ್ನದ ಓಟಕ್ಕೂ ಕಹಳೆ ಬಾಬಾಗೂ ನಂಟು ಇದೆ. ಈ ಬಾಬಾ ನಂಟು- ಗಂಟು ಜೋರಾಗಿದೆ. ಇದಾವ ಬಾಬಾ? ನಿಮಗೆ ಈ ಪ್ರಶ್ನೆ ಮೂಡಬಹುದು. ಕಹಳೆ ಅಂದರೆ ಟ್ರಂಪೆಟ್- ಅದೇ ಟ್ರಂಪ್. ಅಮೆರಿಕದ ಅಧ್ಯಕ್ಷರು ಈ ಟ್ರಂಪ್. ಈಗ ಭಾರತಕ್ಕೂ ಬರುತ್ತಿದ್ದಾರೆ. ಚಿನ್ನದ ಬೆಲೆಗೆ ರಾಕೆಟ್ ವೇಗ ತಂದಿದ್ದಾರೆ ಈ ಕಹಳೆ ಬಾಬಾ. ಏಕೆಂದರೆ 2016ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಅವರು ಆಯ್ಕೆಯಾದಾಗ ಜಗತ್ತಿನ ಎಲ್ಲೆಡೆ ಅಚ್ಚರಿಯೋ ಅಚ್ಚರಿ. ಈ ಮಹಾಶಯರು ಶ್ವೇತಭವನ ಪ್ರವೇಶಿಸಲು ಚಿನ್ನದ ರಥ- ಅದೇ ಅದ್ಧೂರಿಯ ಚಿನ್ನದ ಸ್ವಂತ ಕಾರಿನಲ್ಲಿ ಬಂದಾಗ ಎಲ್ಲೆಲ್ಲೂ ಅಚ್ಚರಿ ಅಚ್ಚರಿ ಅಚ್ಚರಿ!!! ಟ್ರಂಪ್ ಬಂದದ್ದೇ ಬಂದದ್ದು ಚಿನ್ನದ ಹಕ್ಕಿಗೆ ರೆಕ್ಕೆ ಪುಕ್ಕ ಬಂದಿದೆ.

  ಜಗತ್ತಿನಲ್ಲಿ ಬಾಬಾ ಕ್ಯಾತೆ ಅವ್ಯಾಹತವಾಗಿ ಸಾಗಿದೆ. ಮೊದಲು ಉತ್ತರ ಕೊರಿಯಾ ಮೇಲೆ ಬಾಬಾರ ಕೆಂಗಣ್ಣು ಬಿತ್ತು. ಚಿನ್ನ ಆಗ ಓಟಕಿತ್ತಿತು. ಆಮೇಲೆ ಕಹಳೆ ಬಾಬಾ ಚೀನಾದ ಮೇಲೆ ಚಾಟಿ ಬೀಸಿದರು. ಚೀನಾ-ಅಮೆರಿಕ ವ್ಯಾಪಾರ ಕಾಳಗದಲ್ಲಿ ಅಮೆರಿಕಕ್ಕೆ ಗೆಲುವು ಎಂದು ಟ್ರಂಪ್ ಸಾರಿದ ಕೂಡಲೇ ಚಿನ್ನಕ್ಕೆ ಸುವರ್ಣ ಕಾಲ ಬಂತು! ಚೀನಾವು ಅಮೆರಿಕದ ವ್ಯಾಪಾರ ಅಸ್ತ್ರಕ್ಕೆ ಪ್ರತ್ಯಸ್ತ್ರ ಬಿಟ್ಟಿತು.

  ಈ ಜಗಳ ಜೋರಾದಂತೆ ವಿಶ್ವದಲ್ಲಿ ಅನಿಶ್ಚಿತತೆ ಹೆಚ್ಚುತ್ತ ಹೋಯಿತು. ನೋಡಿ, 2013ರಿಂದ 2018ರವರೆಗೆ ಒಂದು ಔನ್ಸ್ ಗೆ 1360 ಡಾಲರ್ ಬೆಲೆ ಗಡಿಯನ್ನು ಚಿನ್ನವು ದಾಟಿರಲಿಲ್ಲ. ನಮ್ಮಲ್ಲಿ 10 ಗ್ರಾಂ ಚಿನ್ನದ ಬೆಲೆ 33,000 ರೂಪಾಯಿ ದಾಟಿರಲಿಲ್ಲ. ಚೀನಾ ಅಮೆರಿಕ ಜಗಳ ಜೋರಾದಂತೆ ಚಿನ್ನ ಈ ಲಕ್ಷ್ಮಣ ರೇಖೆಯನ್ನು ದಾಟಿಬಿಟ್ಟಿತು! ಅದರದ್ದು ಪುಷ್ಪಕ ವಿಮಾನದ ಸವಾರಿ! ಈ 1360 ಡಾಲರ್ ಲಕ್ಷ್ಮಣ ರೇಖೆಯನ್ನು ದಾಟಿದಾಗ ಚಿನ್ನದ ಹೊಸಶಖೆ ಆರಂಭವಾಯಿತು.

  ಉತ್ತರ ಕೊರಿಯಾ, ಚೀನಾದ ಮೇಲೆ ಕುಸ್ತಿಗೆ ಬಿದ್ದಿದ್ದ ಟ್ರಂಪ್ ಮಹಾಶಯರು ಕ್ಯಾತೆ ಮಾಡಲು ಅವರು- ಇವರು ಎಂದು ಭೇದಭಾವ ಮಾಡುವ ಆಸಾಮಿ ಅಲ್ಲ. ಅಮೆರಿಕದ ಕೇಂದ್ರ ಬ್ಯಾಂಕ್ ‘ಫೆಡ್’ ಇವರ ಕೆಂಗಣ್ಣಿಗೆ ಗುರಿಯಾಯಿತು. ‘ಅಮೆರಿಕದಲ್ಲಿ ಎಲ್ಲಾ ಚೆನ್ನಾಗಿದೆ; ಫೆಡ್ ಮಾತ್ರ ಚೆನ್ನಾಗಿಲ್ಲ’- ಇದು ಈ ಮಹಾಶಯರ ತಗಾದೆ. ಈ ಕೂಗು ಗದ್ದಲ ಜಾಸ್ತಿ ಆದಂತೆ ಫೆಡ್ ಬಡ್ಡಿ ದರ ಇಳಿದು ದಿಕ್ಕು ಬದಲಾಯಿತು. ಆಗ ಡಾಲರ್ ದುರ್ಬಲಗೊಂಡಿತು. ಡಾಲರ್ ಕೆಳಕ್ಕೆ, ಚಿನ್ನ ಮೇಲಕ್ಕೆ- ಇದು ಪೇಟೆಯ ಮರ್ಮ. ಹೀಗಾಗಿಯೇ ನಾನು 2019 ರ ಜೂನ್ ತಿಂಗಳಿನಲ್ಲಿ ಬರೆದೆ- ಚಿನ್ನದ ಬೆಲೆ 10 ಗ್ರಾಂಗೆ ಮುಂದೆ 50,000 ರೂಪಾಯಿ ಆಗುತ್ತದೆ ಎಂದು .

  ಕಹಳೆ ಬಾಬಾ ಕಿತಾಪತಿ ಅಲ್ಲಿಗೆ ಮುಗಿಯಲಿಲ್ಲ. ಅಮೆರಿಕಾ- ಚೀನಾದ ಕಿತ್ತಾಟ 2019ರ ಕೊನೆಯವರೆಗೂ ಸಾಗಿತ್ತು. ಹೀಗಾಗಿ ಮತ್ತೆ ಮತ್ತೆ ಚಿನ್ನ ಏರಿತು. 1360 ಡಾಲರ್ ದಾಟಿದ ಮೇಲೆ 1500 ಡಾಲರ್ ಕೂಡ ಬಂತು. ಅಲ್ಲಿಂದ ಹಿಂದೆ ಮುಂದೆ ನೋಡದೆ ಚಿನ್ನ ಏಕಪ್ರಕಾರ ಏರಿದಾಗ 2019ರ ಆಗಸ್ಟ್ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ. 40,000 ರೂಪಾಯಿ ಎಲ್ಲೆ ಮೀರಿತ್ತು. ಚಿನ್ನದ ಬೆಲೆ ಏರಿಕೆಗೆ ಬಂತೀಗ ವಿರಾಮ ಎಂದು ಭಾಸವಾದರೂ ಅದು ನಿಜವಾಗಲಿಲ್ಲ. ಕಹಳೆ ಬಾಬಾ ಮತ್ತೆ ಹೊಸ ಆಟ ಶುರು ಮಾಡಿದರು. ಈಗ ಇರಾನಿನ ಮೇಲೆ ದಾಳಿ ನಡೆದು ಸೇನಾನಿ ಸಂಹಾರ ಆಯಿತು.

  ಈ ಘಟನೆ ಆದಕೂಡಲೇ ಚಿನ್ನದ ಬೆಲೆ ವಿಶ್ವಪೇಟೆಯಲ್ಲಿ 1600 ಡಾಲರ್ ಎಲ್ಲೆಯನ್ನು ಮೀರಿತ್ತು. ಚೀನಾ ಕಾಳಗ, ಉತ್ತರ ಕೊರಿಯಾ ಜಗಳ, ಇರಾನ್ ಕಾದಾಟ- ಈ ಎಲ್ಲ ಕಾಲದಲ್ಲೂ ಬಾಬಾ ಮುಂದೆ ಮುಂದೆ ಹೋಗಲಿಲ್ಲ. ಎರಡು ಹೆಜ್ಜೆ ಮುಂದೆ, ಒಂದು ಹೆಜ್ಜೆ ಹಿಂದೆ- ಇದು ಬಾಬಾ ನಡೆ ಆಗಿತ್ತು. ಹೀಗಾಗಿ ಚಿನ್ನದ ಬೆಲೆಯು ನಮಲ್ಲಿ 40,000 ರೂಪಾಯಿ ಬಳಿಯಲ್ಲಿ ಬಂದು ಕುಳಿತಿತ್ತು. ಚೀನಾ ಅಮೆರಿಕ ವ್ಯಾಪಾರ ಕದನಕ್ಕೆ ವಿರಾಮ ಬಂದಾಗ ಚಿನ್ನದ ಬೆಲೆ ಹಿಂದೆ ಸರಿದಿತ್ತು. ಬಾಬಾ ಆಟ ಹುಸಿ ಎಂದು ಚಿನ್ನದ ಪೇಟೆಗೆ ಗೊತ್ತಾಗಿತ್ತು

  ಈಗ ಬಂದಿದೆ – ನಿಜವಾದ ಚಿನ್ನದ ಓಟ. ಈಗ ಚೀನಾದಲ್ಲಿ ಬಂದಿರುವ ಆತಂಕ ಅತ್ಯಂತ ವಾಸ್ತವ. ಅದೆಂದರೆ ಕೋರೋನ ವೈರಸ್ ಮಾರಿ. ಇದರಿಂದ ಜಗತ್ತು ತಪ್ಪಿಸಿಕೊಳ್ಳುವಂತೆಯೂ ಇಲ್ಲ. ಇಲ್ಲಿ ಬಾಬಾ ಕೂಡ ಬಚಾವ್ ಆಗುವಂತಿಲ್ಲ. ಇಲ್ಲಿಯವರೆಗೆ ಚೀನಾ- ಅಮೆರಿಕ ಜಗಳದಿಂದ ಆರ್ಥಿಕ ಮುಗ್ಗಟ್ಟು ಎಂಬ ಭಾವನೆ ಇತ್ತು. ಆದರೆ ಈಗ ಇಲ್ಲ. ಈಗ ದೋಸ್ತಿ ಒಪ್ಪಂದ ದೇಶಗಳ ನಡುವೆ ಆಗಿದೆ.. ಇರಾನಿನ ಜಗಳ ಕೂಡ ಟುಸ್ ಪಟಾಕಿ ಆಗಿದೆ. ಆದರೆ ಈಗ ಬಂದಿರುವ ಚೀನಾದ ಕರುಣೆ ಇಲ್ಲದ ಈ ಕರೋನ ಮಾರಿಯು ಮಾರೀಚನ ಚಿನ್ನದ ಜಿಂಕೆ ಆಗಿಬಿಟ್ಟಿದೆ.

  ಇದರಿಂದ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಏಕೆಂದರೆ ಜಗತ್ತಿನ ಜಿಡಿಪಿ ಬೆಳವಣಿಗೆಯಲ್ಲಿ ಚೀನದ ಪಾಲು ಶೇ. 38 ಇತ್ತು. ಈಗ ಮೂರೂ ಇಲ್ಲ; ಎಂಟೂ ಇಲ್ಲ. ಅದು ಶೂನ್ಯಕ್ಕೂ ಕೆಳಗೆ ಗ್ಯಾರಂಟಿ ಬೀಳುವುದು. ಚೀನಾದಲ್ಲಿ ಹೋದ ತಿಂಗಳು ಆರಂಭವಾದ ಈ ವೈರಸ್ ಮಾರಿಯು ಸಕಲವನ್ನು ಆಪೋಷಣ ತೆಗೆದುಕೊಂಡಿದೆ. ಚೀನಾದಲ್ಲಿ ಕೈಗಾರಿಕೆ ಚಟುವಟಿಕೆಗಳು ಬಂದ್ ಆಗಿವೆ. ಊರೂರುಗಳಲ್ಲಿ ಓಡಾಟ ಬಂದಾಗಿದೆ; ಮನೆಯೇ ಮಂತ್ರಾಲಯ ಎಂಬಂತೆ ಜನರು ಮನೆಯೊಳಗೆ ಬಚ್ಚಿಟ್ಟುಕೊಂಡಿದ್ದಾರೆ.

  ಚೀನಾದ ರಫ್ತು- ಆಮದು ಎಲ್ಲಾ ಸ್ಥಗಿತಗೊಂಡಿದೆ. ಇದರಿಂದ ಜಗತ್ತಿಗೇ ಹಿಂಜರಿತ, ಜಗತ್ತಿಗೇ ಆರ್ಥಿಕ ಮುಗ್ಗಟ್ಟು ಈಗ ಖಚಿತ. ಇದು ಈಗಲೇ ಕಾಣಿಸಿಕೊಳ್ಳುತ್ತಿದೆ. ಆಪಲ್ ಕಂಪನಿಯು ತನ್ನ ವ್ಯಾಪಾರಕ್ಕೆ ಚೀನಾದಿಂದ ಕುತ್ತು ಬಂದಿದೆ; ಹಿನ್ನಡೆ ಬಂದಿದೆ ಎಂದು ಮುಗ್ಗಟ್ಟಿನ ರಾಗ ಎಳೆಯುತ್ತಿದೆ. ತದನಂತರ ಇದೇ ರಾಗವನ್ನು ಅಮೆರಿಕದ ಮುಂಚೂಣಿಯಲ್ಲಿರುವ ಅನೇಕ ಕಂಪನಿಗಳು ಮುಂದುವರಿಸಿವೆ. ಅಂದರೆ ಮುಂದೆ ಏಪ್ರಿಲ್ ನಲ್ಲಿ ತ್ರೖೆಮಾಸಿಕ ಫಲಿತಾಂಶ ಬಂದಾಗ ಅಮೆರಿಕದ ಶೇರುಪೇಟೆ, ಹಾಗೆಯೇ ವಿಶ್ವದ ನಾನಾ ಪೇಟೆಗಳಲ್ಲಿ ಶೇ. 20ರಷ್ಟು ಕುಸಿತ ಇರುವಂತಿದೆ.

  ನಮ್ಮಲ್ಲಿ ಕೂಡ ಹೀಗೆಯೇ ಸೆನ್ಸೆಕ್ಸ್ ನೆಲಕಚ್ಚಲಿದೆ. ಇದೆಲ್ಲದರ ಪರಿಣಾಮ ಎಂದರೆ ಚಿನ್ನ ಕ್ಕೆ ಸುವರ್ಣಾವಕಾಶ. ಅದೊಂದೇ ಅಪವಾದ. ಹೀಗಾಗಿ ಅಕ್ಷಯತೃತೀಯದ ವೇಳೆಯಲ್ಲಿ ಏಪ್ರಿಲ್ ನಲ್ಲಿ ಚಿನ್ನದ ಬೆಲೆ ನಮ್ಮಲ್ಲಿ 10ಗ್ರಾಂಗೆ 50,000 ರೂಪಾಯಿ ಆಗಬಹುದು. ವಿಶ್ವ ಪೇಟೆಯಲ್ಲಿ ಈಗ 1600 ಡಾಲರ್ ದಾಟಿರುವ ಚಿನ್ನದ ಬೆಲೆ 1800 -1900 ಡಾಲರ್ ಮಟ್ಟಕ್ಕೆ ಏರಬಹುದು.

  ಡಾಲರ್ ನಲ್ಲಿ ಚಿನ್ನದ ಬೆಲೆ ನೋಡಿ. ಹಾಗೆಯೇ ನಮ್ಮಲ್ಲಿನ ಚಿನ್ನದ ಬೆಲೆ ಹೇಗಿದೆ ನೋಡಿ. ಇಲ್ಲಿ ತಾಳಮೇಳ ಇಲ್ಲ. ಏಕೆಂದರೆ ಇಲ್ಲಿ ಚಿನ್ನದ ಬೆಲೆ ಏರುತ್ತದೆ; ಅಲ್ಲಿ ಏರೊಲ್ಲ. ಇದಕ್ಕೆ ಕಾರಣ ನಮ್ಮ ರೂಪಾಯಿ ದುರ್ಬಲಗೊಳ್ಳುವುದು. ಹೀಗೆ ರೂಪಾಯಿ ದುರ್ಬಲಗೊಂಡಾಗ ಭಾರತವು ಆಮದು ಮಾಡಿಕೊಳ್ಳುವ ಚಿನ್ನಕ್ಕೆ ಜಾಸ್ತಿ ಹಣ ನೀಡಬೇಕಾಗುತ್ತದೆ. ಜೊತೆಗೆ ಚಿನ್ನದ ಮೇಲಿನ ಆಮದು ಸುಂಕ ಬೇರೆ ನಮಗೆ ಹೊರೆ. ಅದು ಶೇ. 10 ಇತ್ತು. ಈಗ ಶೇ. 12.5 ಆಗಿದೆ. ಹೀಗಾಗಿ ಜಗತ್ತಿನ ಜನರಿಗೆ ದುಬಾರಿ ಇಲ್ಲದಿದ್ದರೂ ನಮಗೆ ಚಿನ್ನ ದುಬಾರಿ!

  ಉದಾಹರಣೆಗೆ- 2013 ರಲ್ಲಿ ಚಿನ್ನದ ಬೆಲೆ ಅಲ್ಲಿ 1913 ಡಾಲರ್ ಇದ್ದದ್ದು ಇಲ್ಲಿ 33,000 ರೂಪಾಯಿ ಆಗಿತ್ತು. 2013ರಲ್ಲೇ ನಾವು 10 ಗ್ರಾಂ ಚಿನ್ನಕ್ಕೆ 33000 ರೂಪಾಯಿ ನೀಡುತ್ತಿದ್ದವು. ಹೋದವರ್ಷ ನಮ್ಮಲ್ಲಿ ಒಂದು ಡಾಲರಿಗೆ 74 ರೂಪಾಯಿ ಆಯಿತು. ಇದು ವಿಚಿತ್ರ ಸನ್ನಿವೇಶ. 2019 ರಲ್ಲಿ ವಿಶ್ವ ಪೇಟೆಯಲ್ಲಿ 1360 ಡಾಲರ್ ನಲ್ಲಿ ಚಿನ್ನದ ಬೆಲೆ ಇದ್ದಾಗ ನಾವು 10ಗ್ರಾಂಗೆ 34,000 ರೂಪಾಯಿ ದಾಖಲೆ ಕಂಡಿದ್ದೆವು.

  ಆಗ ನೋಡಿ, 2013ರಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 1900 ಡಾಲರ್ ಇದ್ದದ್ದಾಗ ನಾವು 33,000 ರೂಪಾಯಿ ಕೊಟ್ಟರೆ ಈಗ 1360 ಡಾಲರ್ ಬೆಲೆ ಇದ್ದಾಗಲೇ 34,000 ರೂಪಾಯಿ! ರೂಪಾಯಿ ದುರ್ಬಲಗೊಂಡರೆ ಅದು ನಮ್ಮ ಬುಡಕ್ಕೇ ಬರುತ್ತೆ. ಚಿನ್ನ- ಪೆಟ್ರೋಲ್ ಬೆಲೆ ಏರುತ್ತದೆ. ರೂಪಾಯಿ ಕಿಮ್ಮತ್ತು ಕಳೆದುಕೊಂಡರೆ ನಮ್ಮ ಚಿನ್ನಕ್ಕೆ ಕನ್ನ ಬೀಳುತ್ತದೆ.

  ಈಗ ವಿಶ್ವ ಪೇಟೆಯಲ್ಲಿ ಡಾಲರ್ ನಲ್ಲಿ ಚಿನ್ನದ ಬೆಲೆ ಏರುತ್ತಿದೆ. ಅದರಿಂದ ನಮಗೆ ಹೊಡೆತ; ಹಾಗೆಯೇ ಈಗಿನ ರೂಪಾಯಿ ದೌರ್ಬಲ್ಯದಿಂದಲೂ ನಮಗೆ ಹೊಡೆತ. ಹೀಗಾಗಿ ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆ ನಮ್ಮಲ್ಲಿ 10ಗ್ರಾಂ.ಗೆ 50,000 ರೂಪಾಯಿ ಆಗಬಹುದು.

  ವಿಶ್ವ ಪೇಟೆಯಲ್ಲಿ ಚಿನ್ನದ ಬೆಲೆ 2011ರಲ್ಲಿಯೇ 1913 ಡಾಲರಿಗೆ ಜಿಗಿದಿತ್ತು. 2015ರಲ್ಲಿ ಅದು 1050 ಡಾಲರಿಗೆ ವಿಶ್ವ ಪೇಟೆಯಲ್ಲಿ ಕುಸಿದಿತ್ಥು. ಈಗ ಅದು 1900 ಡಾಲರ್ ನತ್ತ ಸಾಗಿದೆ. ಕಳೆದ ಏಪ್ರಿಲ್ ಬಳಿಕ ಚಿನ್ನದ ವಿಶ್ವ ಪೇಟೆಯಲ್ಲಿ 1200 ಡಾಲರ್ ನಿಂದ ಸತತವಾಗಿ ಏರುತ್ತಿದೆ. ಹೀಗಾಗಿ ಎಲ್ಲರೂ ಚಿನ್ನಕ್ಕೆ ಜೋತು ಬೀಳುತ್ತಿದ್ದಾರೆ. ನಾವು-ನೀವು ಮಾತ್ರವಲ್ಲ, ಸ್ವತಃ ನಮ್ಮ ರಿಸರ್ವ್ ಬ್ಯಾಂಕ್ ಕೂಡ 2019ರಲ್ಲಿ 60 ಟನ್ ಚಿನ್ನವನ್ನು ಖರೀದಿಸಿದೆ! ಅತ್ತ ರಿಸರ್ವ್ ಬ್ಯಾಂಕ್ ಚಿನ್ನ ಖರೀದಿಸುತ್ತಿದೆ; ಅದು ಒಕೆ; ಇತ್ತ ನಾವು ನೀವು ಖರೀದಿ ಅದು ನಾಟ್ ಒಕೆ! ನಮ್ಮ ಮೇಲೆ ಆಮದು ಸುಂಕದ ಗದಾಪ್ರಹಾರ ಬೇರೆ ಇದೆ! ಹೀಗೇಕೆ? ಇದೇನಿದು ವಿಚಿತ್ರ!

  ರಿಸರ್ವ್ ಬ್ಯಾಂಕ್ ಮಾತ್ರವಲ್ಲ, ಜಗತ್ತಿನ 15 ಕೇಂದ್ರ ಬ್ಯಾಂಕುಗಳು ಈಗ ಡಾಲರ್ ವಿರುದ್ಧ ತಿರುಗಿ ಬಿದ್ದಿವೆ. ರಷ್ಯಾ ಕೇಂದ್ರ ಬ್ಯಾಂಕ್ ಫೋರೆಕ್ಸ್- ಮುದ್ರಾಭಂಡಾರದಲ್ಲಿ ಒಂದೇ ಒಂದು ಡಾಲರ್ ಇಲ್ಲ! ಅದು ಡಾಲರ್ ಬಿಟ್ಟು ಚಿನ್ನ ತುಂಬಿಕೊಂಡಿದೆ!! ಇದೇ ರೀತಿ ಚೀನಾ ಕೂಡ ಹೆಚ್ಚು ಹೆಚ್ಚು ಚಿನ್ನ ಖರೀದಿ ಮಾಡುತ್ತಿದೆ. 2018ರಲ್ಲಿ ಕೇಂದ್ರ ಬ್ಯಾಂಕುಗಳು 656 ಟನ್ ಚಿನ್ನ ಖರೀದಿಸಿದವು. 2019ರಲ್ಲಿ ಅವು 651 ಟನ್ ಖರೀದಿಸಿವೆ. ಕಳೆದ ಹತ್ತು ವರ್ಷಗಳಲ್ಲಿ ಹೀಗೆ ಕೇಂದ್ರ ಬ್ಯಾಂಕುಗಳು ಐದು ಸಹಸ್ರ ಟನ್ ಚಿನ್ನ ಖರೀದಿಸಿವೆ.

  ಅದರ ಹಿಂದಿನ ಹತ್ತು ವರ್ಷಗಳನ್ನು ನೋಡಿ. ಆಗ ಕೇಂದ್ರ ಬ್ಯಾಂಕುಗಳು 4300 ಟನ್ ಚಿನ್ನ ಮಾರಿದ್ದವು. ಅದಕ್ಕೆ 2005ರಲ್ಲಿ ಚಿನ್ನದ ಬೆಲೆ ವಿಶ್ವ ಪೇಟೆಯಲ್ಲಿ 252 ಡಾಲರ್ ಕುಸಿದಿತ್ತು. ಈಗ ಒಂದೇ ವರ್ಷದಲ್ಲಿ 250 ಡಾಲರ್ ಏರಿದೆ; ಅಂದರೆ ಚಿನ್ನಕ್ಕೆ ಈಗ ಸುವರ್ಣ ಕಾಲ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts