More

  ಬದಲಾದ ಭಾರತ| ನಿರೀಕ್ಷಿತ ಆದಾಯವಿಲ್ಲದೆ ಬಾವಿಗೆ ಬಿದ್ದಿದೆ ಬೇಸಾಯ 

  ನಮಗೆಲ್ಲಾ ಅತ್ಯಂತ ಪ್ರಿಯವಾದ, ಆಪ್ಯಾಯಮಾನವಾದ ಕರ್ಣರಸಾಯನ ಎನಿಸುವ ಹಾಡೊಂದಿದೆ. ’ನೇಗಿಲು ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ’ ಈ ಸುಮಧುರ ಗೀತೆ. ರಾಷ್ಟ್ರಕವಿ ಕುವೆಂಪು ವಿರಚಿತ ವಾದ ಈ ಭಾವಗೀತೆಗೆ ದನಿ ನೀಡಿದ್ದು ಹಾಡಿನ ಗಾರುಡಿಗ ಸಿ ಅಶ್ವಥ್. ಗೀತೆಗೆ ಅವರು ಸುಮಧುರ ಗಾಯನ ಸಂಗೀತ ನೀಡಿ ಈ ಹಾಡು ನಮಗೆಲ್ಲರಿಗೂ ಇಷ್ಟವಾಗುವಂತೆ ಜನಪ್ರಿಯವಾಗುವಂತೆ ಮಾಡಿದ್ದಾರೆ. ಈ ಹಾಡು ನಾಡ ರಾಷ್ಟ್ರಗೀತೆಯ ಸ್ಥಾನಮಾನ ಪಡೆದುಕೊಂಡಿದೆ. ರಾಷ್ಟ್ರಕವಿ ಕುವೆಂಪು ಅವರು ಈ ಗೀತೆ ರಚಿಸಿದ್ದು 1930 ರಲ್ಲಿ. ಇಂದಿಗೂ ಹಾಡಿನ ಜನಪ್ರಿಯತೆ ಅಚ್ಚಳಿಯದೆ ಉಳಿದಿದೆ ನಮ್ಮ ಮನಸ್ಸಿನ ಆಳದಲ್ಲಿ. ಅತ್ಯಂತ ರಮಣೀಯ ಗೀತೆ ಇದು ಎಂಬುದು ನಿತ್ಯಸತ್ಯ

  ಇಷ್ಟೂ ಹಾಡಿನ ವಿಚಾರವಾಗಿತ್ತು. ಈಗೇನಾಗಿದೆ ನೋಡಿ. ನೇಗಿಲು ಹಿಡಿದು ಉಳುವಾ ಯೋಗಿ ಈಗಲೂ ನಮ್ಮ ಗ್ರಾಮೀಣ ಭಾಗದಲ್ಲಿ ಕಾಣಸಿಗುವರು. ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ನೇಗಿಲು ಹಿಡಿದ ಉಳುವಾ ಯೋಗಿಯು ನಮ್ಮಲ್ಲಿ ನೇಗಿಲು ಬಿಟ್ಟು ಟ್ರಾಕ್ಟರ್ ಹಿಡಿದಿರುವ ಪ್ರಸಂಗಗಳು ಕಾಣಸಿಗುವುದು ಉಂಟು. ಇದು ಇಲ್ಲೇ ನಿಲ್ಲುವುದಿಲ್ಲ. ಕಾರಿನ ಸ್ಟೇರಿಂಗ್ ಹಿಡಿದ, ದ್ವಿ ಚಕ್ರ ವಾಹನದ ಹ್ಯಾಂಡಲ್ ಹಿಡಿದ ನೇಗಿಲ ಯೋಗಿಗಳು ನಮ್ಮಲ್ಲಿ ಇದ್ದಾರೆ! ಇವರು ಕಾಣಸಿಗಬೇಕಾದರೆ ನಮ್ಮ ಬೆಂಗಳೂರಿಗೆ ಬರಬೇಕು. ಊಬರ್ – ಓಲಾ ಕಾರು ಓಡಿಸುವುದು ಅನೇಕ ರೈತಾಪಿ ಬಂಧುಗಳ ನೂತನ ಕಾಯಕ ಆಗಿದೆ.

  ಸ್ವಿಗಿ- ಜೋಮಟೋ ಇತ್ಯಾದಿಗಳನ್ನು ದ್ವಿಚಕ್ರವಾಹನದಲ್ಲಿ ಓಡಿಸುವವರಲ್ಲಿ ಈ ನಮ್ಮ ರೈತ ಬಂಧುಗಳು ಕಾಣುತ್ತಾರೆ. ನೇಗಿಲ ಪರಿವಾರದವರು ಜಮೀನಿದ್ದೂ ಬದುಕಲಾಗದೆ ಪಟ್ಟಣ ಸೇರಿರುವರು. ರೈತ ಬಾಂಧವರು ಬದುಕಿಗೆ ನೇಗಿಲು ಸಾಕಾಗದು ಎಂದು ಚಕ್ರವರ್ತಿಗಳಾಗಿ ಬೆಂಗಳೂರಿನಲ್ಲಿ ಚಕ್ರ ಓಡಿಸುತ್ತಿದ್ದಾರೆ! ಹಳ್ಳಿಯ ಹುಡುಗ- ಹುಡುಗಿಯರು ಬಿಗ್ ಬಜಾರ್ -ಮೋರ್ ಮೆಗಾಮಾರ್ಟ್ ಮೊದಲಾದ ಮಾಲ್ ಗಳಲ್ಲಿ ಕಾಣಸಿಗುವರು. ಬೆಂಗಳೂರು ಇರಲಿ ಮೈಸೂರು ಇರಲಿ ಯಾವುದೇ ನಗರಗಳಿಗೆ ಹೋದರೂ ಆಟೋರಿಕ್ಷಾ ಓಡಿಸುವ ಮಂದಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನಮ್ಮ ಮಾಜಿ ನೇಗಿಲಯೋಗಿಗಳು ಇದ್ದಾರೆ.

  ನೇಗಿಲ ಯೋಗಿಗೆ ಏಕೆ ಇಂತಹ ದುಃಸ್ಥಿತಿ? ರಾಷ್ಟ್ರಕವಿ ಕುವೆಂಪು ಅವರಿದ್ದಾಗ 1950ರ ದಶಕದಲ್ಲಿ ದೇಶದ ಉತ್ಪತ್ತಿಯಲ್ಲಿ ಶೇ. 54 ಭಾಗ ನೇಗಿಲಯೋಗಿಯ ಕೊಡುಗೆ ಆಗಿರುತ್ತಿತ್ತು. ಈಗ ಏನಾಗಿದೆ ? ಅದೊಂದು ದುರಂತ ಬಿಡಿ. ಅದು ಈಗ ಶೇ.10 ಬಳಿಗೆ ಬಂದು ನಿಂತಿದೆ ದೇಶದಲ್ಲಿ.! ಕರ್ನಾಟಕದ ಪರಿಸ್ಥಿತಿಯು ಇನ್ನೂ ಶೋಚನೀಯ. 2018- 19 ರ ಕರ್ನಾಟಕ ಆರ್ಥಿಕ ಸಮೀಕ್ಷೆಯ ಪ್ರಕಾರ ರಾಜ್ಯದ ಉತ್ಪತ್ತಿಯಲ್ಲಿ ನೇಗಿಲಯೋಗಿಯ ಕೊಡುಗೆ ಶೇ. 6.92 ರಷ್ಟು ಆಗಿ ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿದೆ.

  ಈಗ ಗೊತ್ತಾಯಿತೇ, ರಾಜ್ಯದ ನಗರಗಳಲ್ಲಿ ಬೆಂಗಳೂರು ಮಹಾನಗರಿಯಲ್ಲಿ ನಾನಾ ವಾಹನಗಳ ಡ್ರೖೆವರ್ ಗಳಾಗಿ ನಮ್ಮ ಹಳ್ಳಿಯ ಜನರು ಬದುಕು ಸಾಗಿಸುತ್ತಿದ್ದಾರೆ ಏಕೆ ಎಂದು? ರಾಜ್ಯದ ಉತ್ಪತ್ತಿಯಲ್ಲಿ ಕೃಷಿ ಬೆಳೆಗಳ ಪಾಲು ಶೇ.6.92 ಎಂದರೆ ಅದು ಅವಸಾನದ ಸಂಕೇತ. ಕರ್ನಾಟಕದಲ್ಲಿ ಕೃಷಿಯು ಅವಸಾನ ಕಂಡಿದೆ ಎಂಬುದು ನಿಜ. ಈ ಅವಸಾನದ ಫಲಶ್ರುತಿಯಾಗಿ ಹಳ್ಳಿಯ ಬದುಕಿನ ಬೇಗೆ ತಾಳಲಾರದೆ ರೈತಾಪಿ ವರ್ಗವು ನಗರ- ಮಹಾನಗರಗಳಲ್ಲಿ ವಾಹನಗಳ ಬಾಗಿಲು ಹಿಡಿದು ಅದನ್ನೇ ಭಾಗ್ಯದ ಬಾಗಿಲು ಎಂದು ಕನಸು ಕಾಣುತ್ತಿದೆ. ಇದು ದಯನೀಯ ಸಂಗತಿ.

  ನಮ್ಮ ದೇಶದಲ್ಲಿ ಶೇ. 45ರಷ್ಟು ರಾಷ್ಟ್ರೀಯ ಸಂಪತ್ತು ಕೇವಲ ಶೇ.1 ರಷ್ಟು ಜನರ ಕೈಯಲ್ಲಿದೆ ! ನಮ್ಮ ದೇಶದಲ್ಲಿ ಕಡುಬಡವರು ಬಡವರು ಶೇ. 50ರಷ್ಟು ಇದ್ದಾರೆ. ಆದರೆ ಸಂಪತ್ತಿನಲ್ಲಿ ಅವರ ಪಾಲು ಶೇ. 2.8 ಮಾತ್ರ ! ಇದು ನಮ್ಮ ರಾಜ್ಯದ ಸ್ಥಿತಿಯೂ ಆಗಿದೆ. ನಮ್ಮ ರಾಜ್ಯದಲ್ಲಿ ಶೇ. 67ರಷ್ಟು ಜಿಡಿಪಿಯು ಸೇವಾ ಕ್ಷೇತ್ರದಿಂದ ಬರುತ್ತದೆ ! ಅಂದರೆ ಮೂರನೇ ಎರಡು ಭಾಗ ಉತ್ಪತ್ತಿಯು ಸೇವಾ ಕ್ಷೇತ್ರದಲ್ಲಿದೆ. ರಾಜ್ಯದ ಮೂರನೇ ಒಂದು ಭಾಗದ ಉತ್ಪತ್ತಿಯು ರಿಯಲ್ ಎಸ್ಟೇಟ್ ಸಾಫ್ಟ್​ವೇರ್ ಇತ್ಯಾದಿ ಬಳಗದಿಂದ ಬರುತ್ತದೆ. ಅಲ್ಪ ಜನರು, ಅಪಾರ ಹಣ ಎಂಬುದು ಇಲ್ಲಿ ಸತ್ಯ. ಇದರ ಆರನೇ ಒಂದು ಭಾಗದಷ್ಟು ಮಾತ್ರ ನಮ್ಮ ಕೃಷಿಯ ಉತ್ಪತ್ತಿ ಆಗಿದೆ ಎಂದರೆ ಅದರ ಅರ್ಥ ಏನು? ಕೃಷಿ ಪೈರಿನ ಜಿಡಿಪಿ ಪಾಲು ಶೇ.6. 92 ರಷ್ಟಕ್ಕೆ ಕುಸಿದಿದ್ದರೆ ಅದು ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎಂದರ್ಥ. ರಾಜ್ಯದ ವ್ಯವಹಾರಕ್ಕೂ ಕೃಷಿಗೂ ತಾಳ-ಮೇಳ ಇಲ್ಲ ಎಂಬುದನ್ನು ಅದು ಸಾರುತ್ತದೆ.

  ರಾಜ್ಯದ ಸಂಪತ್ತು – ಸಂಭ್ರಮ ಎಲ್ಲಾ ಬೆಂಗಳೂರು-ಮಂಗಳೂರು ನಡುವೆ ಮಡುಗಟ್ಟಿದೆ. ಕರ್ನಾಟಕದ ಆರ್ಥಿಕ ಎಕ್ಸ್ ಪ್ರೆಸ್ ರೈಲು ಓಡುವುದು ಬೆಂಗಳೂರು ಮಂಗಳೂರು-ಉಡುಪಿ ನಡುವೆ ಮಾತ್ರ ಎಂಬುದು ಸತ್ಯ! ನಮ್ಮ ರಾಜ್ಯದಲ್ಲಿರುವ ಬೆಂಗಳೂರು ನಗರ ಜಿಲ್ಲೆಯ ವರಮಾನ 2016- 17 ರಲ್ಲಿ 3.34 ಲಕ್ಷ ಕೋಟಿ ರೂಪಾಯಿ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕೂಡ ಬೆಂಗಳೂರಿನ ಮುಂದೆ ತುಂಬಾ ಕಳಪೆ ! ಅದು ಆರು ಪಟ್ಟಿಗೂ ಕೆಳಗೆ 53,914 ಕೋಟಿ ರೂಪಾಯಿಯಲ್ಲಿದೆ! ಉಳಿದ ನಮ್ಮ ಜಿಲ್ಲೆಗಳ ಸ್ಥಿತಿ ನೋಡಿ: 30 ಜಿಲ್ಲೆಗಳ ಪೈಕಿ ಅತ್ಯಂತ ಕೆಳಗೆ ಇರುವ ಕೊಡಗು ಜಿಲ್ಲೆಯ ವರಮಾನ 5749 ಕೋಟಿ ರೂಪಾಯಿ. ಅಂದರೆ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಗೆ 10ಪಟ್ಟು ಕೆಳಗೆ! ಇನ್ನು ಬೆಂಗಳೂರು ನಗರದ ಲೆಕ್ಕಕ್ಕೆ ಹೋದರೆ ಎಲ್ಲಿಗೆ ಬಂದೀತು ಕೊಡಗು ಎಂಬುದನ್ನು ನೀವೇ ಲೆಕ್ಕ ಹಾಕಿ.

  ಇನ್ನು 29ನೇ ಸ್ಥಾನದಲ್ಲಿರುವ ಯಾದಗಿರಿ ಜಿಲ್ಲೆಯ ವರಮಾನ 9030 ಕೋಟಿ; ಕೊಪ್ಪಳ ಜಿಲ್ಲೆಯ ವರಮಾನ 10811 ಕೋಟಿ ; ಗದಗ ಜಿಲ್ಲೆಯ ವರಮಾನ 10,184 ಕೋಟಿ ಹಾಗೂ ಚಾಮರಾಜನಗರ ಜಿಲ್ಲೆಯ ವರಮಾನ 10, 872 ಕೋಟಿ ರೂಪಾಯಿ ಇದೆ. ಚಿಕ್ಕಬಳ್ಳಾಪುರ, ಬೀದರ್, ರಾಮನಗರ, ಬೆಂಗಳೂರು ಗ್ರಾಮಾಂತರ, ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಗಳ ವರಮಾನ 14,868 ಕೋಟಿ ರೂಪಾಯಿಗಿಂತ ಕೆಳಗಿದೆ.

  ಮೊದಲನೆಯ ಸ್ಥಾನದಲ್ಲಿರುವ ಬೆಂಗಳೂರು ನಗರ ಜಿಲ್ಲೆ ಯ 3.34 ಲಕ್ಷ ಕೋಟಿ ರೂಪಾಯಿ ಮುಂದೆ ಇವು ಕಳಾಹೀನ ಆಗಿವೆ. ಈ ಬಡ ಜಿಲ್ಲೆಗಳ ಜನರು ರಾಜ್ಯದಲ್ಲಿ ಬೆಳೆ ಉತ್ಪತ್ತಿ ಶೇ. 6.97 ಮಾತ್ರ ಎಂಬುದನ್ನು ತಿಳಿದುಕೊಳ್ಳಬೇಕಾದ ದುರಂತದ ಪರಿಸ್ಥಿತಿ ಇದೆ.

  ಬರಗಾಲದ ಬೀಡು ನಮ್ಮ ನಾಡು. ಕಳೆದ 18 ವರ್ಷಗಳಲ್ಲಿ 11 ವರ್ಷಗಳು ನಮಗೆ ಬರ ಬಡಿದಿದೆ. 2018ರ ಮುಂಗಾರಿನಲ್ಲಿ ಉತ್ತರ ಕರ್ನಾಟಕದ ಒಳನಾಡಿನಲ್ಲಿ ಮಳೆ ಕೊರತೆ ಉಗ್ರವಾಗಿತ್ತು. ರಾಯಚೂರು ಜಿಲ್ಲೆಯಲ್ಲಿ ಶೇ.55ರಷ್ಟು ಮಳೆ ಕೊರತೆ ಇತ್ತು. ಯಾದ್ಗೀರ್ ನಲ್ಲಿ ಶೇ.49, ಗದಗ್ ನಲ್ಲಿ ಶೇ.46,ವಿಜಯಪುರದಲ್ಲಿ ಶೇ.48, ಕಲ್ಬುರ್ಗಿ- ಬೀದರ್ ಗಳಲ್ಲಿ ಶೇ. 41 ಹಾಗೂ ಬಳ್ಳಾರಿಯಲ್ಲಿ ಶೇಕಡ 39 ಕೊರತೆ ಮುಂಗಾರಿನಲ್ಲಿ ಕಾಡಿತ್ತು. ಕೃಷಿಕರು ಕಂಗಾಲಾಗಿದ್ದರು.

  ನಮ್ಮ ರಾಜ್ಯದ ಬೆಳೆ ಉತ್ಪತ್ತಿ 100 ಲಕ್ಷ ಟನ್ನಿಗೆ 147 ಲಕ್ಷ ಟನ್ನಿಂದ ಕುಸಿದಿತ್ತು. ಮುಂಗಾರಿನಲ್ಲಿ 100 ತಾಲ್ಲೂಕುಗಳು ಹಾಗೂ ಹಿಂಗಾರಿನಲ್ಲಿ 156 ತಾಲೂಕು (ನಮ್ಮಲ್ಲಿ ಇರುವುದು 175 ತಾಲೂಕು ) ಜಲಕ್ಷಾಮದಿಂದ ನರಳಿದವು. ನಮ್ಮ ಜನರಿಗೆ ದೇವರೇ ಗತಿ ಎಂಬ ಸ್ಥಿತಿ ಅದು. ಏಕೆಂದರೆ ರಾಜ್ಯದಲ್ಲಿ ಅದು ಚುನಾವಣೆ ಪರ್ವಕಾಲ!

  ಈ ಬರದ ಸಮಸ್ಯೆ ನಿತ್ಯನಿರಂತರವಾಗಿದ್ದರೂ ನಮ್ಮಲ್ಲಿ ಅದಕ್ಕೆ ಸಮರ್ಪಕ ಉತ್ತರವಿಲ್ಲ. ಮಾಡಿರುವ ಪ್ರಯತ್ನವೂ ದೊಡ್ಡದೇ ಇರಬಹುದು. ಆದರೆ ಈ ರಾಕ್ಷಸ ಸಮಸ್ಯೆಯ ಮುಂದೆ ನರಮಾನವರ ಪ್ರಯತ್ನವು ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಹೀಗಾಗಿ ನೇಗಿಲಯೋಗಿ ಹೇಗೆ ಹಳ್ಳಿಯಲ್ಲಿ ಉಳಿದಾನು? ಉಳುವಾಯೋಗಿ ಹೊಲದಲ್ಲಿ ಹಾಡುತ ಹೇಗೆ ತಾನೆ ಬಾಳಿಯಾನು?

  ನಮ್ಮ ಕೃಷಿಯ ಘೊರ ಪರಿಸ್ಥಿತಿಯನ್ನು ನೀವು ಊಹಿಸಲು ಆರಿರಿ. ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಬಿತ್ತನೆ ಮಾಡಿ ಕೃಷಿ ಬೆಳೆ ತೆಗೆಯುವ ಜಮೀನು ಕೇವಲ ಶೇ.22 ಇದೆ. 2016- 17 ರಲ್ಲಿ 98.55 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಆಯಿತು. ಇದು ಮುಂಗಾರು ಬೆಳೆಯ ಪಾಲು. ಬಹುಬೆಳೆ ಪೈರಿನ ಜಮೀನು 19.24 ಲಕ್ಷ ಹೆಕ್ಟೇರು ಆಗಿತ್ತು. ಅಂದರೆ ಐದರಲ್ಲಿ ಒಬ್ಬ ರೈತ ಮಾತ್ರ ನಮ್ಮ ರಾಜ್ಯದಲ್ಲಿ ನೆಮ್ಮದಿಯಾಗಿ ಕೃಷಿ ಮಾಡಲು ಸಾಧ್ಯ!

  ಇನ್ನೂ ಒಂದು ದಿಗ್ಭ›ಮೆ ಮೂಡಿಸುವ ವಿಚಾರ ಇದೆ. ನಮ್ಮ ನಾಡಿನಲ್ಲಿ ಕೃಷಿಗೆ ನೀರಾವರಿಯು ವರ್ಷ ವರ್ಷವೂ ಕುಸಿಯುತ್ತಿದೆ. ಅಲ್ಲದೆ ಕರ್ನಾಟಕದಲ್ಲಿ ಬೇಸಾಯ ಬಾವಿಗೆ ಬಿದ್ದಿದೆ! ಇದು ನಿಜ ; ಇದು ಸತ್ಯ; ಇದು ಘೊರ ಪರಿಸ್ಥಿತಿ! ಸಾಕ್ಷಿ ಇಲ್ಲಿದೆ ನೋಡಿ: ನಮ್ಮ ಕೃಷಿಗೆ 2014 -15 ರಲ್ಲಿ ಬಾವಿಯಿಂದ 17.8 ಲಕ್ಷ ಹೆಕ್ಟೇರ್ ಗೆ ನೀರಾವರಿ ಆಯಿತು. ನಾಲೆ ಕೆರೆ ಇತ್ಯಾದಿ ಮೂಲಗಳ ನೀರು 18 ಲಕ್ಷ ಹೆಕ್ಟೇರ್ ಗೆ ಹರಿದಿದೆ. ಅಂದರೆ ನಮ್ಮ ನೀರಾವರಿ ಜಲಾಶಯದ ನೀರು ನಮ್ಮ ಕೃಷಿಗೆ ಅರ್ಧದಷ್ಟಕ್ಕೂ ಹರಿದು ಬರುತ್ತಿಲ್ಲ!

  ಇನ್ನು 2016-17 ರಲ್ಲಿ ಬಾವಿಯದೇ ರಾಜ್ಯಭಾರ. ಆಗ 17 ಲಕ್ಷ ಹೆಕ್ಟೇರ್ ಗೆ ಬಾವಿ ನೀರು ಹರಿದುಬಂದರೆ ನಾಲೆ ಇತ್ಯಾದಿ ನೀರು 14 ಲಕ್ಷ ಜಮೀನಿಗೆ ಮಾತ್ರ ಹರಿದುಬಂತು! ಅಂದರೆ ನಮ್ಮ ಕೃಷಿಗೆ ಬಾವಿಯೇ ಆಧಾರ. ಅದಕ್ಕೆ ನಾನು ಹೇಳಿದೆ- ಬಾವಿಗೆ ಬಿದ್ದಿದೆ ಬೇಸಾಯ ಎಂದು.

  ಈಚಿನ ವರ್ಷಗಳಲ್ಲಿ ಕೃಷಿಯು ಬಾಣಲೆಯಿಂದ ಬೆಂಕಿಗೆ ಬಿದ್ದುಬಿಟ್ಟಿದೆ. ಇದು ನೋಡಿ : 2014-15ರಲ್ಲಿ ರಾಜ್ಯದ ಕೃಷಿಯಲ್ಲಿ ನೀರಾವರಿಯ ಪಾಲು ಶೇ.34.2 ಇತ್ತು. 2016 -17 ರಲ್ಲಿ ಅದು ಶೇ. 30 ಕ್ಕೆ ಕುಸಿದಿದೆ. ಘೊರ ದುರಂತ ಇದು. ಮರಳುಗಾಡು ರಾಜ್ಯವಾದ ರಾಜಸ್ಥಾನದಲ್ಲಿ ಕೃಷಿಗೆ ನಮಗಿಂತ ಹೆಚ್ಚು ನೀರಾವರಿ ಇದೆ ! ಇದು ಕರ್ನಾಟಕದ ದುರಂತ ಅಲ್ಲವೇ? 2012ರಲ್ಲಿ ಸನ್ಮಾನ್ಯ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದರು. ಆಗ ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ನನ್ನ ’ಬದಲಾದ ಭಾರತ ’ ಸಂಪುಟ 2ರ ಬಿಡುಗಡೆ ಕಾರ್ಯಕ್ರಮ ನೆರವೇರಿತು. ಕರ್ನಾಟಕಕ್ಕಿಂತ ಹೆಚ್ಚು ನೀರಾವರಿ ಮರಳುಗಾಡು ರಾಜ್ಯವಾದ ರಾಜಸ್ಥಾನದಲ್ಲಿ ಎಂದು ಆಗಲೇ ಮುಖ್ಯಮಂತ್ರಿ ಪಕ್ಕದಲ್ಲೇ ಕುಳಿತು ಪರಿಸ್ಥಿತಿ ಹೇಳ್ತಾ ನಾನು ಕಣ್ಣೀರಿಟ್ಟಿದ್ದೆ. ಪರಿಸ್ಥಿತಿ ಈಗ ನೋಡಿ. ಅದು ಇನ್ನೂ ವಿಷಮಸ್ಥಿತಿಗೆ ಹೋಗಿದೆ.

  ಕೃಷಿಗೆ ನೀರು ಒಂದೇ ದೊಡ್ಡ ಸಮಸ್ಯೆ ಅಲ್ಲ. ಬೆಳೆದ ಬೆಳೆಗೆ ಹಲವು ಸಮಸ್ಯೆ ಇವೆ. ರೈತರ ಸರಕಿನ ಬೆಲೆಯಲ್ಲಿ ರೈತರಿಗೆ ಸಿಗುವ ಪಾಲು ಶೇ. 50ರಷ್ಟು ಎನ್ನುವಷ್ಟು ಕಡಿಮೆ. ಹೀಗೆ ಕೃಷಿ ಸಮಸ್ಯೆಗೆ ನಮ್ಮಲ್ಲಿ ಪರಿಹಾರ ಇಲ್ಲ. ಇದು ಕಣ್ಣಮುಂದಿರುವ ಸತ್ಯ. ಆದರೆ ಹಳ್ಳಿಯ ಬದುಕಿಗೆ ಆಶಾದಾಯಕವಾದ ಸಂಗತಿ ಒಂದಿದೆ. ಅದೆಂದರೆ ಪಶುಪಾಲನೆ. ರಾಜ್ಯದ ಉತ್ಪತ್ತಿಯ ಬೆಳೆ ಪಾಲು ಶೇ. 6.92 ಮಾತ್ರ ಇದೆ. ಅದರೆ ಪಶುಪಾಲನೆ ಪ್ಲಸ್ ಪಾಲು ಶೇ.3.19ರಷ್ಟು ಸೊಗಸಾಗಿದೆ ಇದೂ ಇಲ್ಲದಿದ್ದರೆ ನಮ್ಮ ಹಳ್ಳಿಗಳು ಸ್ಮಶಾನಸದೃಶವಾಗಿ ಬಿಡುತ್ತಿದ್ದವು!

  ಈ ಪಶುಪಾಲನೆಯನ್ನು ಸಾಕಿ ಬೆಳೆಸಿದರೆ ಕೃಷಿಯಿಂದ ಬಳಲಿ ಬೆಂಡಾದ ಹಳ್ಳಿಗಳಿಗೆ ಎಷ್ಟೋ ಭರವಸೆ ಮೂಡಿ ಊರುಗೋಲು ಸಿಕ್ಕೀತು. ನೋಡಿ, ಬೆಂಗಳೂರು ನಗರ ಜಿಲ್ಲೆ, ದಕ್ಷಿಣ ಕನ್ನಡ, ಧಾರವಾಡ, ಮೈಸೂರು ಜಿಲ್ಲೆಗಳಲ್ಲಿ ಶೇ. 95 ರಿಂದ ಶೇ. 41ರವರೆಗೆ ನಗರೀಕರಣ ಆಗಿದೆ. ಅದೇ ಯಾದಗಿರಿ, ಮಂಡ್ಯ, ಕೊಪ್ಪಳ, ಕೊಡಗು., ಚಾಮರಾಜ ನಗರಗಳಲ್ಲಿ ಶೇ.20 ಕ್ಕೂ ಕಡಿಮೆ ನಗರೀಕರಣ ಆಗಿದೆ.

  ತುಮಕೂರು, ಹಾವೇರಿ, ಹಾಸನ, ರಾಯಚೂರು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಳಗಾವಿ ಇರಲಿ, ಕೊನೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೂಡ ಶೇ.75ಕ್ಕೂ ಹೆಚ್ಚು ಹಳ್ಳಿಗಾಡಿದೆ. ಇಲ್ಲಿ ಪಶುಪಾಲನೆಯೇ ಆಧಾರ. ಇದೇ ಇವರಿಗೆ ಕೈಗೆ ಕ್ಯಾಶ್ ನೀಡುವಂತದ್ದು. ಹಾಲು ಉತ್ಪಾದನೆಯಲ್ಲಿ ತೊಡಗಿರುವ 23,759 ಹಳ್ಳಿಗಳು ನಮ್ಮಲ್ಲಿ ಇವೆ. 25 ಲಕ್ಷ ಹಾಲು ಉತ್ಪಾದಕರು ನಮ್ಮಲ್ಲಿದ್ದಾರೆ. ಹೀಗಾಗಿ ಪಶುಪಾಲನೆಯು ಹಳ್ಳಿಗಾಡಿನ ಜೀವನಾಡಿ.

  ಸುಭದ್ರವಾಗಿ ಅದನ್ನೇ ಬೆಳೆಸಿದರೆ ಹಳ್ಳಿಗಳು ಬೆಳೆಯಲು ಸಾಧ್ಯ. ಏಕೆಂದರೆ ರೈತರಿಗೆ ಶೇ. 80ರಷ್ಟು ಪ್ರತಿಫಲ ಸಿಗುವುದು ಹಾಲಿನಲ್ಲಿ ಮಾತ್ರ. ನೇಗಿಲ ಯೋಗಿಯು ಮತ್ತೆ ಉಳುವಾಯೋಗಿ ಆಗಿ ಹಾಡುವ ಸ್ಥಿತಿಗೆ ಬರಲು ಹಾಲಿನ ಹಾದಿಯೇ ಸುವರ್ಣಮಾರ್ಗ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts