ಈಗ ಚೀನಾ, ಅಮೆರಿಕ ಬಿಟ್ಟರೆ ಭಾರತವೇ!

2030ರ ಕಾಲ ಬರಲಿ, ಆಗ ನೋಡಿ, ಚೀನಾ, ಅಮೆರಿಕ ಬಿಟ್ಟರೆ ಭಾರತ ಎನ್ನುವ ಕಾಲ ಬಂದಿರುತ್ತದೆ. ಹಾಗಾದರೆ ಯುರೋಪ್ ಏನಾಗುತ್ತದೆ? ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಇತ್ಯಾದಿ ದೇಶಗಳೆಲ್ಲ ಏನಾಗಿರುತ್ತವೆ ಆಗ? ಆಗ ಅವು ಭಾರತದ ಬಾಲಂಗೋಚಿ ಆಗಿರುತ್ತವೆ, ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಇದೇ ಆಗಿರುತ್ತದೆ ಆಗಿನ ಸತ್ಯ.

2014ರಲ್ಲಿ ಹೀಗಿರಲಿಲ್ಲ. ಆಗ ಭಾರತ ಹತ್ತಕ್ಕಿಂತ ಮೇಲಿನ ದೇಶಗಳಲ್ಲಿ ಒಂದಾಗಿತ್ತು. ನಂಬರ್ 1, 2, 3 ಮಾತೇ ಇರಲಿಲ್ಲ. ಈಗ ಅದು 5ನೇ ಸ್ಥಾನಕ್ಕೆ ಬಂದಿದೆ. ಐದು ವರ್ಷಗಳಲ್ಲಿ ಭಾರತದ ಹೆಗ್ಗಳಿಕೆ ಹೆಚ್ಚಿದೆ. ಅಷ್ಟೇ ಅಲ್ಲ, ಅದು ಹೀಗೆಯೇ ಮುಂದುವರಿಯುತ್ತದೆ. ಮುಂದಿನ ದಶಕದ ಅಂತ್ಯಕ್ಕೆ ಅದು ನಂಬರ್ 3 ಪಟ್ಟಕ್ಕೆ ಬರುತ್ತದೆ. ಬಳಿಕ, ಏನಿದ್ದರೂ ಅದರ ಪೈಪೋಟಿ ಅಮೆರಿಕದ ಜತೆಗೆ. ನಂಬರ್ 1 ಸ್ಥಾನ ಚೀನಾದ್ದೆ. ಅದರ ಬಗ್ಗೆ ಎರಡು ಮಾತಿಲ್ಲ. ಎರಡನೇ ಸ್ಥಾನ ಭಾರತದ್ದೇ ಆದರೂ ಆಗಬಹುದು. ನೀವು ನಂಬಿ. ಆಗೇ ಆಗುತ್ತದೆ.

ಈಗ ಭಾರತದ ಜಿಡಿಪಿ 2.9 ಟ್ರಿಲಿಯನ್ ಡಾಲರ್ (ಸಹಸ್ರ ಬಿಲಿಯನ್- ಒಂದು ಟ್ರಿಲಿಯನ್). ನಾವು ಬ್ರಿಟನ್, ಫ್ರಾನ್ಸ್ ಗಿಂತ ಮುಂದೆ ಬಂದಿದ್ದೇವೆ. ಇಂಗ್ಲೆಂಡ್​ಗಿಂತಲೂ ನಾವೇ ಮುಂದೆ. ಅದೇನು ದೊಡ್ಡ ವಿಷಯವಲ್ಲ ಬಿಡಿ. ಏಕೆಂದರೆ, ಇಂಗ್ಲೆಂಡ್ ಈಗ ಮುಳುಗುತ್ತಿರುವ ಹಡಗು. ಭಾರತಕ್ಕೀಗ ನವಯೌವನ ಕಾಲ. ಅಷ್ಟೇ ಅಲ್ಲ, ಇಂಗ್ಲೆಂಡ್ ಎಂದೂ ದೊಡ್ಡದಾಗಿರಲಿಲ್ಲ ಎಂದರೆ ನಿಮಗೆ ಅಚ್ಚರಿ ಎನಿಸಬಹುದು. 1700ರಲ್ಲಿ ಇಂಗ್ಲೆಂಡಿನ ಜಿಡಿಪಿ ಪಾಲು ಅಂದರೆ ಅಲ್ಲಿನ ಉತ್ಪತ್ತಿಯು ಜಗತ್ತಿನಲ್ಲಿ ಶೇ.1.8 ಇತ್ತು. ಅಮೆರಿಕದ್ದು ಶೇ.0.02 ಇತ್ತು. 1870, ಬ್ರಿಟನ್ ತನ್ನ ಇತಿಹಾಸದಲ್ಲಿ ಅತ್ಯಂತ ಪರಾಕಾಷ್ಠೆ ಕಂಡ ಕಾಲ. ಆಗ ಜಗತ್ತಿನ ಜಿಡಿಪಿಯಲ್ಲಿ ಇಂಗ್ಲೆಂಡಿನ ಪಾಲು ಶೇ.9.1ರಷ್ಟು ಇತ್ತು. ಅಮೆರಿಕದ್ದು ಶೇ.8.9 ಇತ್ತು. ಇನ್ನು, ಫ್ರಾನ್ಸ್ ಹಾಗೂ ಜರ್ಮನಿ ಪಾಲು ತಲಾ ಶೇ.6.5 ಇತ್ತು. ಇಡೀ ಪಾಶ್ಚಿಮಾತ್ಯ ರಾಷ್ಟ್ರಗಳ ಸಮೂಹದಲ್ಲಿ ಎರಡಂಕಿ ಬಂದ ದೇಶ ಒಂದೂ ಇರಲಿಲ್ಲ. ಆ ಸಮಯದಲ್ಲಿ ಭಾರತದ ಪಾಲು ಎಲ್ಲ ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತ ದೊಡ್ಡದಾಗಿತ್ತು! ಜಗತ್ತಿನ ಜಿಡಿಪಿಯಲ್ಲಿ 1870ರಲ್ಲಿ ಭಾರತದ ಪಾಲು ಶೇ.12.2 ಆಗಿತ್ತು. ಬ್ರಿಟಿಷರ ಅಡಿಯಾಳಾಗಿದ್ದಾಗಲೂ ಭಾರತವು ಜಗತ್ತಿನಲ್ಲೇ ಬಲಿಷ್ಠವಾಗಿತ್ತು. ಇಂಥ ಇತಿಹಾಸ ಆರ್ಥಿಕ ಪ್ರಪಂಚದಲ್ಲಿ ಇರುವಾಗ ಭಾರತವು ಬಲಾಢ್ಯವೇ. ಈಗ ನಾವು ಬ್ರಿಟನ್​ಗಿಂತ ಮುಂದೆ ಇದ್ದೇವೆ ಅಂದರೆ ಅದು ದೊಡ್ಡ ವಿಷಯವಲ್ಲ ಎಂದು ಹೇಳಿದ್ದು ಇತಿಹಾಸದ ಈ ಸತ್ಯದ ಹಿನ್ನೆಲೆಯಲ್ಲಿ.

ಇಷ್ಟು ಇಂಗ್ಲೆಂಡಿನ ಮಾತು. ಯುರೋಪಿನಲ್ಲಿದ್ದರೂ ಇಂಗ್ಲೆಂಡ್ ಬೇರೆಯೇ. ಯುರೋ ಕರೆನ್ಸಿ ಇದ್ದರೂ ಪೌಂಡ್ ಇರಬೇಕು ಎಂಬುದು ಬ್ರಿಟನ್​ನ ಒಣಪ್ರತಿಷ್ಠೆ. 19ನೇ ಶತಮಾನದಲ್ಲಿ ಲಂಡನ್ ಮನಿ ಮಾರ್ಕೆಟ್ ಪರಾಕಾಷ್ಠೆಯಲ್ಲಿ ಇತ್ತು. ಅದು ಆಗ ಜಗತ್ತಿನ ಹಣಶಕ್ತಿ ಕೇಂದ್ರವಾಗಿತ್ತು. 1870ರಲ್ಲೇ ಈ ಪಾಯಿಂಟ್ ಪರಾಕಾಷ್ಠೆಯಲ್ಲಿತ್ತು. ಜಗತ್ತಿನ ಜಿಡಿಪಿಯಲ್ಲಿ ಬ್ರಿಟನ್​ನ ಅತಿದೊಡ್ಡ ಪಾಲು 1870ರಲ್ಲೇ ಶೇ.9.1ರಲ್ಲಿತ್ತು. ಬಳಿಕ ಅದರದ್ದು ಇಳಿಮುಖ ಪರ್ವ. ಭಾರತಕ್ಕೆ ಶ್ರೀಲಂಕಾ ಇದ್ದಂತೆ ಯುರೋಪ್​ಗೆ ಬ್ರಿಟನ್ ಇದೆ. ಅದು ಪ್ರತ್ಯೇಕ ದ್ವೀಪ. ಫ್ರಾನ್ಸಿನ ಪಕ್ಕದಲ್ಲಿದೆ. ಜರ್ಮನಿ, ಫ್ರಾನ್ಸ್ ನೆರೆಹೊರೆಯ ರಾಷ್ಟ್ರಗಳು. ಇವುಗಳಲ್ಲೇ ಪೈಪೋಟಿ. ಇದನ್ನು ಬಳಸಿಕೊಂದು ಜರ್ಮನಿಯ ಮೇಲೆ ಹರಿಹಾಯುವುದು ಬ್ರಿಟನ್​ನ ಚಾಳಿ. ಎರಡು ಮಹಾಯುದ್ಧಗಳನ್ನು ಜರ್ಮನಿ ಮೇಲೆ ನಡೆಸಲು ಇಂಗ್ಲೆಂಡಿನ ಈ ಮತ್ಸರವೇ ಮುಖ್ಯ ಕಾರಣ. ಜರ್ಮನಿಯು ತನ್ನಷ್ಟಕ್ಕೆ ತಾನು ಆರ್ಥಿಕ ಶಕ್ತ ರಾಷ್ಟ್ರ. ಮೊದಲ ಮಹಾಯುದ್ಧದ ಕಾಲದಲ್ಲಿ ಜರ್ಮನಿಯ ಜಗತ್ತಿನ ಜಿಡಿಪಿ ಪಾಲು ಶೇ.8.8ರಲ್ಲೇ ಪರಾಕಾಷ್ಠೆ ಮುಟ್ಟಿತು. ಬಳಿಕ ಇಳಿಮುಖವಾಯಿತು. ಈಗಲೂ ಜರ್ಮನಿಯು ಉಳಿದೆಲ್ಲ ಐರೋಪ್ಯ ರಾಷ್ಟ್ರಗಳಿಗಿಂತ ಮುಂದೆ ಇದೆ. ಈಗ ಭಾರತವು ಈ ಜರ್ಮನಿಯನ್ನು ಮಾತ್ರ ಹಿಂದೆ ಹಾಕಬೇಕು, ಅಷ್ಟೆ. ಉಳಿದೆಲ್ಲ ಐರೋಪ್ಯ ರಾಷ್ಟ್ರಗಳು ಭಾರತಕ್ಕಿಂತ ಹಿಂದಿವೆ.

ಯುರೋಪಿನ ನಂತರ ಬರುತ್ತದೆ ಅಮೆರಿಕದ ಮಾತು. 20ನೇ ಶತಮಾನದ ತುಂಬ ಜಗತ್ತಿನಲ್ಲಿ ಇದರದ್ದೇ ಮಾತು. 2ನೇ ಮಹಾಯುದ್ಧದ ಬಳಿಕ ಪೌಂಡ್ ಸಾಮ್ರಾಜ್ಯ ಕಳಚಿ ಬಿತ್ತು. ಡಾಲರ್ ಸಾಮ್ರಾಜ್ಯ ಬಂತು. 1950ರಲ್ಲಿ ಅಮೆರಿಕದ ಜಗತ್ತಿನ ಜಿಡಿಪಿ ಪಾಲು ಅತ್ಯಂತ ಗರಿಷ್ಠ ಮಟ್ಟ ಶೇ.27.3 ಆಗಿತ್ತು. ಸಹಸ್ರಮಾನದ ವೇಳೆಗೆ ಈ ಯುರೋಪ್, ಅಮೆರಿಕದ ಪೌರುಷವೆಲ್ಲ ಇಳಿಮುಖವಾಯಿತು. ಈಗೇನಿದ್ದರೂ ಹಿಮಾಲಯ ಪರ್ವ. ಅತ್ತ ಚೀನಾ, ಇತ್ತ ಭಾರತ. ಇವೇ ಆರ್ಥಿಕ ಪ್ರಪಂಚದ ರಥದ ಜೋಡಿಗಾಲಿಗಳು.

ಇದನ್ನು ನಂಬಬೇಕಾದರೆ ನೀವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್)ಯ ಮಾಹಿತಿ ನೋಡಬೇಕು. 1998ರಲ್ಲಿ ಜಗತ್ತಿನ ಜಿಡಿಪಿಯಲ್ಲಿ (ಪಿಪಿಪಿ) ಅನ್ವಯ, ಪಶ್ಚಿಮ ಯುರೋಪಿನ ಪಾಲು ಶೇ.20.6, ಅಮೆರಿಕದ ಪಾಲು ಶೇ.21.9 ಹಾಗೂ ರಷ್ಯಾದ ಪಾಲು ಶೇ.37.2ಕ್ಕೆ ಬಂದಿತ್ತು. ಇದು 1870ರ ಸ್ಥಿತಿ. ಆಗ ಏಷ್ಯಾದ ಪಾಲು ಶೇ.36 ಇತ್ತು. ಅಂದರೆ, 130 ವರ್ಷಗಳ ಬಳಿಕ ಜಗತ್ತಿನ ಅರ್ಥವ್ಯವಸ್ಥೆಯು ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಬಿಟ್ಟು ಮತ್ತೆ ಏಷ್ಯಾಕ್ಕೆ ಬಂದಿದೆ. ಏಷ್ಯಾ ಖಂಡವು ಇತಿಹಾಸದುದ್ದಕ್ಕೂ ಆರ್ಥಿಕವಾಗಿ ಸೂಪರ್ ಪವರ್ ಆಗಿತ್ತು. ಕ್ರಿಸ್ತಶಕದ ಆರಂಭದಲ್ಲಿ ಜಗತ್ತಿನ ಜಿಡಿಪಿಯಲ್ಲಿ ಶೇ.75 ಪಾಲು ಇಲ್ಲಿತ್ತು. ಅದರಲ್ಲೂ ಭಾರತದ ಪಾಲು ಶೇ.32.9 ಇತ್ತು. ಅದೇ ನಂ.1 ಆಗಿತ್ತು. ಚೀನಾ ಶೇ.26.2 ಇದ್ದು, ನಂಬರ್ 2 ಆಗಿತ್ತು. ಸಹಸ್ರಮಾನದ ಬಳಿಕ ಇದೇ ಕಾಲ ಬರುತ್ತಿದೆ. ಹಿಮಾಲಯದ ರಾಷ್ಟ್ರಗಳು ಜಗತ್ತಿನ ಆರ್ಥಿಕ ಕ್ಷೇತ್ರದ ಕೇಂದ್ರಬಿಂದು ಆಗಿವೆ. ಇನ್ನು, ಯುರೋಪ್-ಅಮೆರಿಕಗಳು ಮುಳುಗುತ್ತಿರುವ ಹಡಗುಗಳು. ಇದು ಗೊತ್ತಾಗಬೇಕಾದರೆ ಈ ಮಾಹಿತಿ ನೋಡಿ.

ಐಎಂಎಫ್ ವರದಿ ಪ್ರಕಾರ (ಪಿಪಿಪಿ ಲೆಕ್ಕದಲ್ಲಿ) 2000ನೇ ಇಸವಿಯಲ್ಲಿ ಶೇ.30.1 ಜಿಡಿಪಿ ಪಾಲು ಜಪಾನಿನಿಂದ ಭಾರತದವರೆಗಿನ ರಾಷ್ಟ್ರಗಳಲ್ಲಿ ಇತ್ತು. ಅದು 2017ರಲ್ಲಿ ಶೇ.42.6ಕ್ಕೆ ಏರಿದೆ. ಅಮೆರಿಕದ ಪಾಲು ಶೇ.6.8 ಹಾಗೂ ಯುರೋಪಿನ ಪಾಲು ಶೇ.47 ತಗ್ಗಿದೆ. ಈ ಇಳಿಕೆಯೆಲ್ಲ ಏಷ್ಯಾಕ್ಕೆ ಬಂದಿದೆ. ಇನ್ನೊಂದು ಮಾತು, ಅಮೆರಿಕ, ಯುರೋಪ್ ಬಿಟ್ಟರೆ ಜಪಾನಿನದೇ ದೊಡ್ಡ ಹೆಸರು. ಅದೇ ಆರ್ಥಿಕವಾಗಿ ಪ್ರಬಲ ರಾಷ್ಟ್ರ. 2ನೇ ಮಹಾಯುದ್ಧದ ನಂತರ, ಅದೂ ಕೂಡ ಸಹಸ್ರಮಾನದ ಬಳಿಕ ಮಂಕಾಗಿದೆ. ರಷ್ಯಾದ ಜಿಡಿಪಿಯಲ್ಲಿ ಜಪಾನಿನ ಪಾಲು ಶೇ.23.1 ಇದ್ದುದು 17 ವರ್ಷಗಳಲ್ಲಿ 2017ರಲ್ಲಿ ಶೇ.10.2ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಚೀನಾದ ಪಾಲು ಶೇ.25.1ರಿಂದ ಶೇ.42.77ಕ್ಕೆ ಕೊಬ್ಬಿದೆ. ಜಪಾನಿನ ನಷ್ಟವೆಲ್ಲ ಚೀನಾಕ್ಕೆ ಲಾಭವಾಗಿದೆ. ಭಾರತದ ಪಾಲು ಏಷ್ಯಾದಲ್ಲಿ ಜಪಾನಿಗಿಂತ ಜಾಸ್ತಿ ಶೇ.17.2ರಲ್ಲಿದೆ.

ಅಂದರೆ, ಭಾರತವು ಒಂದೊಂದೇ ರಾಷ್ಟ್ರವನ್ನು ಹಿಂದಿಕ್ಕಿ ಜಗತ್ತಿನಲ್ಲಿ ಅಗ್ರಸಾಲಿಗೆ ಬರುತ್ತಿದೆ. 2014ರಲ್ಲಿ ಜಗತ್ತಿನ ಬಲಾಢ್ಯ ರಾಷ್ಟ್ರಗಳಲ್ಲಿ 11ನೇ ಸ್ಥಾನದಲ್ಲಿ ಭಾರತ ಇತ್ತು, ಅದು ಈಗ ಐದನೇ ಸ್ಥಾನಕ್ಕೆ ಬಂದಿದೆ. ಉಳಿದಿರುವುದು ಜರ್ಮನಿ ಜಪಾನ್​ಗಳು. ಅದು ಬಿಡಿ, ಪಿಪಿಪಿ ಲೆಕ್ಕದಲ್ಲಿ ಕೊಟ್ಟಿರುವ ಮಾಹಿತಿ ಇಲ್ಲಿದೆ ನೋಡಿ.

ಏನಿದು ಪಿಪಿಪಿ?

ಜಿಡಿಪಿಯನ್ನು ವಿದೇಶಿ ವಿನಿಮಯ ದರದ ಲೆಕ್ಕದಲ್ಲಿ ಕೊಡುವುದು ಉಂಟು. ಇದು ಸಾಮಾನ್ಯ ಪದ್ಧತಿ. ಇನ್ನೊಂದು,ಜೀವನದ ಮಟ್ಟ ಆಧರಿಸಿದ ಪವರ್ ಪರ್ಚೇಸಿಂಗ್ ಪ್ಯಾರಿಟಿ -ಪಿಪಿಪಿ. ಬೆಂಗಳೂರಿನ ಬಸವನಗುಡಿಯಲ್ಲಿ ಮಸಾಲೆ ದೋಸೆ ಬೆಲೆ 45 ರೂಪಾಯಿ. ಅದೇ ಅಮೆರಿಕದಲ್ಲಿ ಸುಮಾರು 5 ಡಾಲರ್ ಅಂದರೆ 350 ರೂಪಾಯಿ. ಈ ವ್ಯತ್ಯಾಸವನ್ನು ಹೊಂದಿಕೆ ಮಾಡಿ ಜೀವನಮಟ್ಟದಲ್ಲಿ ಕೊಳ್ಳುವ ಶಕ್ತಿಯನ್ನು ಆಧರಿಸಿ ಲೆಕ್ಕ ಹಾಕುವ ಪದ್ಧತಿ ಈ ಪಿಪಿಪಿ. ಈಗ ಮಾಮೂಲಿ ಜಿಡಿಪಿ ಲೆಕ್ಕದಲ್ಲಿ ಭಾರತವು ಬಲಾಢ್ಯ ಎನಿಸಿ ಜರ್ಮನಿ, ಜಪಾನ್ ಅನ್ನು ಹಿಂದಕ್ಕೆ ಹಾಕುವುದು ಬಾಕಿ ಇದೆ. ಆದರೆ, ಪಿಪಿಪಿ ಲೆಕ್ಕಕ್ಕೆ ಬಂದರೆ ಭಾರತ ಈಗಾಗಲೇ ನಂ.3 ಆಗಿದೆ! ಐಎಂಎಫ್​ನ 2019ರ ಪಿಪಿಪಿ ಲೆಕ್ಕದ ಜಿಡಿಪಿಯಲ್ಲಿ ಚೀನಾದ ಜಿಡಿಪಿ 27.4 ಟ್ರಿಲಿಯನ್ ಡಾಲರ್ ಇದ್ದರೆ, ಅಮೆರಿಕದ್ದು 21.4 ಟ್ರಿಲಿಯನ್ ಡಾಲರ್. 3ನೇ ಸ್ಥಾನದಲ್ಲಿ ನಾವು! ನಮ್ಮ ಪಾಲು 11.4 ಟ್ರಿಲಿಯನ್ ಡಾಲರ್​ಗಳು. ನಮ್ಮ ಮುಂದೆ ಜಪಾನ್-ಜರ್ಮನಿ ದೇಶಗಳು. ಜಪಾನ್ ಪಾಲು 5.8 ಟ್ರಿಲಿಯನ್ ಡಾಲರ್, ಜರ್ಮನಿಯದ್ದು 4.5 ಟ್ರಿಲಿಯನ್ ಡಾಲರ್. ಈಗ ಹೇಳಿ, ಭಾರತ್ ಮಾತಾ ಕೀ ಜೈ.

One Reply to “ಈಗ ಚೀನಾ, ಅಮೆರಿಕ ಬಿಟ್ಟರೆ ಭಾರತವೇ!”

  1. ಜಗತ್ತಿನ ಈ೩ ದೇಶಗಳ (ಚೀನಾ‌,ಅಮೆರಿಕಾ,ಭಾರತ) ಬೌಗೋಲಿಕ ವಿಸ್ತೀರ್ಣ, ಜನಸಂಖ್ಯಾಸಾಂದ್ರತೆ ಇವನ್ನೆಲ್ಲಾ ಹೋಲಿಸಿದಾಗಭಾರತದ ಸಾಧನೆ ಸಾಕಷ್ಟಿದೆ ಇದು ೫/೬ ವರ್ಷದ ಸಾಧನೆ. ಇಲ್ಲೀ ತನಕ ಇದಕ್ಕೆಅಡ್ಡಿಯಾಗಿದ್ದು “ಪರದೇಶದಿಂದ ಬಂದು ಈದೇಶದ ರಾಜಕೀಯ/ಆಡಳಿತವಲಯಕ್ಕೆ ಪಾಶ್ಚಿಮಾತ್ಯರಿಗೆ ದೂರನಿಯಂತ್ರಣವಾಗಿ ವರ್ತಿಸುವ”ಇಟ್ಟಗಿಇಜ್ಜಲಿಯಂತಹಾ ದೇಶಹೆಸರುದುರ್ಬುದ್ಧಿಯ ಜನಗಳಂತಹವರಾ?..?

Comments are closed.