ಕಾವೇರಿ ನದಿ ದಡದಲ್ಲಿ ದುರ್ವಾಸನೆ

ಎಂ.ಎ.ಅಜೀಜ್ ಸಿದ್ದಾಪುರ
ಕಾವೇರಿ ನದಿ ಪ್ರವಾಹಕ್ಕೆ ತುತ್ತಾಗಿದ್ದ ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಭಾಗದ ಬಹುತೇಕ ಮನೆಗಳು ಜಲಾವೃತಗೊಂಡಿದ್ದರಿಂದ ಕೆಲ ಮನೆಗಳ ಶೌಚಗೃಹಗಳಿಗೂ ನೀರು ನುಗ್ಗಿದ್ದು, ಶೌಚಗೃಹದ ಇಂಗುಗುಂಡಿಯ ತ್ಯಾಜ್ಯ ನದಿ ಪಾಲಾಗಿದೆ. ಇದರಿಂದ ನದಿ ದಡದಲ್ಲಿ ದುರ್ವಾಸನೆ ಬೀರುತ್ತಿದೆ.

ಬೆಟ್ಟದಕಾಡು, ಕರಡಿಗೋಡು, ಗುಹ್ಯ, ಕೂಡುಗದ್ದೆ, ಕುಂಬಾರಗುಂಡಿ ಸೇರಿದಂತೆ ನದಿ ತಟದಲ್ಲಿ ವಾಸವಿದ್ದ ಮನೆಗಳ ಶೌಚಗೃಹದ ಇಂಗುಗುಂಡಿ ನದಿಯ ಬದಿಯಲ್ಲಿಯೇ ನಿರ್ಮಾಣವಾಗಿವೆ. ನೀರಿನ ರಭಸಕ್ಕೆ ಕೆಲ ಮನೆಗಳ ಹಿಂಬದಿ ಕುಸಿಯಲಾರಂಭಿಸಿದ್ದು, ಅದರೊಂದಿಗೆ ಇಂಗುಗುಂಡಿಯೂ ಕುಸಿದು ತ್ಯಾಜ್ಯ ಕಾವೇರಿ ನೀರಿನೊಂದಿಗೆ ಮಿಶ್ರಣಗೊಂಡಿದೆ.

ಮನೆಯೊಳಗೆ ದುರ್ನಾತ: ಪ್ರವಾಹ ತಗ್ಗಿದ ಬಳಿಕ ಯುವಕ ಸಂಘಗಳು, ಸ್ವಯಂ ಸೇವಕರು, ಗ್ರಾಮಸ್ಥರು ಸೇರಿ ಮನೆಯ ಶುಚಿತ್ವ ಕಾರ್ಯ ಕೈಗೊಂಡಿದ್ದರು. ಕೆಲ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಶೌಚ ತುಂಬಿದ ಕೋಣೆಯಿಂದ ದುರ್ನಾತ ಬೀರುತ್ತಿದ್ದರಿಂದ ಅತ್ತ ಕಡೆ ಯಾರೂ ಸುಳಿಯುತ್ತಿರಲಿಲ್ಲ. 2-3 ದಿನ ಕಳೆದ ಬಳಿಕ ಕೆಲ ಮನೆಗಳ ಶುಚಿತ್ವ ಕಾರ್ಯ ಮಾಡಲಾಗಿದೆ. ಅಷ್ಟರ ಮಟ್ಟಿಗೆ ಶೌಚಗೃಹದ ತ್ಯಾಜ್ಯ ಮನೆಯನ್ನು ಆವರಿಸಿಕೊಂಡಿತ್ತು.

ಯುವಕರಿಂದ ಜಾಗೃತಿ: ಕಳೆದ ವರ್ಷದ ಪ್ರವಾಹ ಸಂದರ್ಭದಲ್ಲಿ ತ್ಯಾಜ್ಯ ನೀರು ನದಿ ಪಾಲಾಗುತ್ತಿರುವುದನ್ನು ಅರಿತ ನೆಲ್ಯಹುದಿಕೇರಿ ಮುತ್ತಪ್ಪ ಯುವಕಲಾ ಸಂಘದ ಸದಸ್ಯರು ಬೆಟ್ಟದಕಾಡು, ಕುಂಬಾರಗುಂಡಿ ಭಾಗದ 300ಕ್ಕೂ ಅಧಿಕ ಮನೆಗಳಿಗೆ ತೆರಳಿ ಕೊಳಚೆ ನೀರನ್ನು ನೇರವಾಗಿ ಹೊಳೆಗೆ ಬಿಡಬಾರದು. ಇಂಗುಗುಂಡಿ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯಲ್ಲಿ ಅನುದಾನಗಳಿವೆ. ಅದನ್ನು ಬಳಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ಮಾತ್ರವಲ್ಲ ಗ್ರಾಮ ಪಂಚಾಯಿತಿಯಿಂದ ಇಂಗುಗುಂಡಿ ನಿರ್ಮಿಸಿ ಕೊಡುವಂತೆ ಕೋರುವ ಅರ್ಜಿಯನ್ನೂ ಅವರಿಗೆ ಉಚಿತವಾಗಿ ನೀಡಿದ್ದರು.

ಆದರೆ ಯಾರೂ ಮನವಿಗೆ ಪ್ರತಿಕ್ರಿಯೆ ನೀಡಲೇ ಇಲ್ಲ ಎಂದು ಸಂಘದ ಕಾರ್ಯದರ್ಶಿ ಪ್ರಮೋದ್ ವಿಜಯವಾಣಿಗೆ ತಿಳಿಸಿದ್ದಾರೆ. ಈ ಪ್ರವಾಹದಿಂದ ಬಹುತೇಕ ಮನೆಯ ಶೌಚ ಗುಂಡಿ ಶುಚಿಯಾಗಿದೆ. ಅದರಲ್ಲಿದ್ದ ತ್ಯಾಜ್ಯ ನದಿ ಪಾಲಾಗಿದೆ. ಅದೇ ನೀರನ್ನು ಲಕ್ಷಾಂತರ ಜನರು ಕುಡಿಯಲು ಬಳಸುತ್ತಿದ್ದಾರೆ. ಇನ್ನಾದರೂ ನದಿ ದಡದ ನಿವಾಸಿಗಳು ಎಚ್ಚೆತ್ತುಕೊಳ್ಳಬೇಕಿದೆ.

ಹೊಳೆಗೆ ತ್ಯಾಜ್ಯ: ಮನೆಯೊಳಗೆ ನೀರು ನುಗ್ಗಿದ್ದ ಪರಿಣಾಮ ಮನೆಯೊಳಗಿದ್ದ ಮಂಚ, ಹಾಸಿಗೆ, ಪ್ಲಾಸ್ಟಿಕ್ ತ್ಯಾಜ್ಯ, ಬಟ್ಟೆ ಮತ್ತಿತರ ವಸ್ತುಗಳನ್ನು ಮತ್ತೆ ಹೊಳೆಗೆ ಎಸೆಯಲಾಗುತ್ತಿದೆ. ಇದರಿಂದ ಕಾವೇರಿ ಮತ್ತಷ್ಟು ಕಲುಷಿತಗೊಳ್ಳುತ್ತಿದೆ. ನದಿ ದಡದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಬ್ಲೀಚಿಂಗ್ ಪೌಡರ್ ಕೂಡಾ ಸುರಿಯಲಾಗಿದೆ. ಎಲ್ಲವೂ ಸೇರಿ ನದಿ ದಡದಲ್ಲಿ ದುರ್ನಾತ ಬೀರಲಾರಂಭಿಸಿದೆ.

ಕಾವೇರಿ ನದಿ ನೀರು ದಿನದಿಂದ ದಿನಕ್ಕೆ ಕಲುಷಿತಗೊಳ್ಳುತ್ತಿದೆ. ಪ್ರವಾಹದಿಂದ ಶೌಚಗೃಹದ ನೀರು, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ನದಿ ನೀರಿಗೆ ಸೇರಿದೆ. ಬೇಸಿಗೆಯಲ್ಲಿ ನೀರು ತಗ್ಗಿದ ಬಳಿಕ ನದಿಯ ಹರಿವು ಇಲ್ಲದಾಗಿ ಅಲ್ಲಲ್ಲಿ ನೀರು ನಿಂತುಕೊಳ್ಳುತ್ತಿದೆ. ಆ ಸಂದರ್ಭ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ.
> ಶೌಕತ್‌ಆಲಿ, ಅಧ್ಯಕ್ಷ, ಡೋಮಿನೋಸ್ ಯುವಕ ಸಂಘ ನೆಲ್ಯಹುದಿಕೇರಿ.

ಕೆಲವು ಕಡೆ ಇಂಗುಗುಂಡಿ ಒಡೆದು ಹೋಗಿದೆ. ಆದರೆ ಅದನ್ನು ಸರಿಪಡಿಸಲು ಯಾವುದೇ ವ್ಯವಸ್ಥೆ ತುರ್ತಾಗಿ ಮಾಡಿಲ್ಲ. ಮನೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ವೇ ಕಾರ್ಯ ಮಾಡುತ್ತಿದ್ದೇನೆ. ಸರ್ವೇ ಮುಗಿದ ತಕ್ಷಣ ಇಂಗುಗುಂಡಿ, ಶೌಚಗೃಹಗಳ ದುರಸ್ತಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
> ಎಚ್.ಅನಿಲ್ ಕುಮಾರ್, ಪಿಡಿಒ ನೆಲ್ಯಹುದಿಕೇರಿ.

Leave a Reply

Your email address will not be published. Required fields are marked *