ನಾಲಗೆಹುಣ್ಣು ಶಮನಕ್ಕೆ ಶೀಥಲಿ ಪ್ರಾಣಾಯಾಮ

| ನನಗೆ ಸುಮಾರು ಆರು ತಿಂಗಳುಗಳಿಂದ ನಾಲಗೆಯಲ್ಲಿ ಹುಣ್ಣು ಇದೆ. ಅಲೋಪತಿ ಉಪಚಾರದಲ್ಲಿ ಕಡಿಮೆಯಾಗಿಲ್ಲ. ಪರಿಹಾರ ತಿಳಿಸಿ.

| ಶ್ರೀನಿವಾಸಮೂರ್ತಿ, ಬೆಂಗಳೂರು

ನಾಲಗೆಯ ಹುಣ್ಣಿನ ಸಮಸ್ಯೆ ಕಡಿಮೆಯಾಗಲು ಶೀತಲೀ ಪ್ರಾಣಾಯಾಮ, ಶೀತ್ಕಾರೀ ಪ್ರಾಣಾಯಾಮಗಳ ಅಭ್ಯಾಸ ನಡೆಸಿ. ಸಾಕಷ್ಟು ನೀರು ಸೇವಿಸಿ. ಬಾಯಿ ಸ್ವಚ್ಛವಾಗಿಟ್ಟುಕೊಳ್ಳಿ. ಪದೇಪದೆ ಟೂತ್​ಪೇಸ್ಟ್ ಬದಲಿಸಬೇಡಿ.

ಸೂಚಿತ ಆಸನ, ಮುದ್ರೆ, ಪ್ರಾಣಾಯಾಮ

ಪಾದ ಹಸ್ತಾಸನ, ಪ್ರಸಾರಿತ ಪಾದೋತ್ಥಾನಾಸನ, ಶಶಾಂಕಾಸನ, ಸರ್ವಾಂಗಾಸನ, ಸೇತುಬಂಧ ಸರ್ವಾಂಗಾಸನ, ಶಲಭಾಸನ, ಶವಾಸನ. ಖೇಚರೀ ಮುದ್ರೆ, ವರುಣ ಮುದ್ರೆ, ಕಾಕೀ ಮುದ್ರೆ. ಶೀತಲೀ ಪ್ರಾಣಾಯಾಮದ ಅಭ್ಯಾಸದಿಂದ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ದೊರಕುತ್ತದೆ.

ಶೀಥಲಿ ಪ್ರಾಣಾಯಾಮ ಕ್ರಮ

ಯಾವುದಾದರೊಂದು ಸುಖಕರ ಆಸನದಲ್ಲಿ ಬೆನ್ನು, ಕುತ್ತಿಗೆ ನೇರ ಮಾಡಿ ಕುಳಿತುಕೊಳ್ಳಿ. ಕೈಗಳು ಚಿನ್ಮುದ್ರೆಯಲ್ಲಿರಲಿ. ನಾಲಗೆಯನ್ನು ಹೊರಗೆ ಚಾಚಿ ಅದರ ಪಕ್ಕಗಳನ್ನು ಮಡಚಿ ಕೊಳವೆಯಾಕಾರ ಮಾಡಿ. ನಂತರ ನಿಧಾನವಾಗಿ, ದೀರ್ಘವಾಗಿ ಗಾಳಿಯನ್ನು ನಾಲಗೆಯ ಮೂಲಕ ಒಳಕ್ಕೆಳೆದುಕೊಂಡು (ಪೂರಕ) ಕೆಲವು ಸೆಕೆಂಡುಗಳ ಕಾಲ ಗಾಳಿಯನ್ನು ಒಳಗೆ ಹಿಡಿದಿಡಿ. ನಂತರ ಮೂಗಿನ ಮೂಲಕ ನಿಧಾನವಾಗಿ ಉಸಿರನ್ನು ಹೊರಕ್ಕೆ ಬಿಡಿ (ರೇಚಕ). ಈ ರೀತಿ ಮೂರರಿಂದ ಆರು ಅಥವಾ ಒಂಬತ್ತು ಬಾರಿ ಅಭ್ಯಾಸ ಮಾಡಿ.

ಈ ಪ್ರಾಣಾಯಾಮದ ಮುಖ್ಯ ಉದ್ದೇಶ ದೇಹದ ಅಧಿಕ ಉಷ್ಣಾಂಶವನ್ನು ಕಡಿಮೆಗೊಳಿಸುವುದು. ಇದು ದೇಹವನ್ನು ತಂಪನ್ನಾಗಿಸುತ್ತದೆ. ನಾಲಗೆಯಲ್ಲಿ ಹುಣ್ಣು, ಹೈಪರ್ ಆಸಿಡಿಟಿ ಮತ್ತು ಅಲ್ಸರ್​ನವರಿಗೆ ಪರಿಣಾಮಕಾರಿಯಾಗಿದೆ. ನಿರ್ನಾಳ ಗ್ರಂಥಿಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಸ್ನಾಯುಗಳಲ್ಲಿ ಸಡಿಲತೆ ಉಂಟುಮಾಡುತ್ತದೆ. ಬಾಯಾರಿಕೆ, ಹಸಿವು ನಿಯಂತ್ರಣವಾಗಲು ಸಹಾಯವಾಗುತ್ತದೆ. ಜ್ವರ ಮತ್ತು ಅಜೀರ್ಣಕ್ಕೆ ಸಹಾಯಕ. ಹೆಚ್ಚಿನ ರಕ್ತದ ಒತ್ತಡ ನಿಯಂತ್ರಣವಾಗಲು ಸಹಕಾರಿಯಾಗುತ್ತದೆ. ಮನಸ್ಸಿನ ಒತ್ತಡ, ಗೊಂದಲಗಳನ್ನು ನಿವಾರಿಸಲು ಇದು ಉಪಯುಕ್ತ. ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರವಾಗಲು ಸಹಕಾರಿ.

ನೀವೂ ಪ್ರಶ್ನೆ ಕೇಳಿ

ಯೋಗದ ಮೂಲಕ ಹಲವು ರೋಗಗಳಿಗೆ ಪರಿಹಾರವಿದೆ. ಅನೇಕರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಯೋಗ ಅಂಕಣಕಾರರು ಉತ್ತರ ನೀಡಲಿದ್ದಾರೆ. ಆಸಕ್ತರು ವಯಸ್ಸು, ಸಮಸ್ಯೆ, ಅದರ ತೀವ್ರತೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧೋಪಚಾರ ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಬಹುದು. ಆದ್ಯತೆ ಮೇರೆಗೆ ನಮ್ಮ ಯೋಗ ಅಂಕಣಕಾರರು ಸಲಹೆ, ಸೂಚನೆ ನೀಡಲಿದ್ದಾರೆ.

ವಿಳಾಸ: ಸಂಪಾದಕರು, ಯೋಗಕ್ಷೇಮ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ. 24, ಸಾಯಿರಾಂ ಟವರ್ಸ್, ಮೊದಲ ಮಹಡಿ, ಐದನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18.