More

    ಹಿತ್ತಲಲ್ಲಿ ಹಾವು ಸಾಕಿದ ಪಾಕಿಸ್ತಾನ

    ಹಿತ್ತಲಲ್ಲಿ ಹಾವು ಸಾಕಿದ ಪಾಕಿಸ್ತಾನಇಂದು ಪಾಕಿಸ್ತಾನದ ಭವಿಷ್ಯವನ್ನು ಬರೆಯುವ ಕೈಂಕರ್ಯವನ್ನು ಕೈಗೆತ್ತಿಕೊಂಡಿರುವುದು ಪಾಕ್ ತಾಲಿಬಾನ್ (ಟಿಟಿಪಿ), ಅಫ್ಘನ್ ತಾಲಿಬಾನ್ ಮತ್ತು ಅಫ್ಘನ್ ತಾಲಿಬಾನ್. ಅವುಗಳ ಜತೆ ಕೈಗೂಡಿಸಿ ತಮ್ಮ ಭವಿಷ್ಯವನ್ನು ಬರೆದುಕೊಳ್ಳಲು ಹವಣಿಸುತ್ತಿರುವುದು ಇಮ್ರಾನ್ ಖಾನ್ ಮತ್ತು ಫೈಜ್ ಹಮೀದ್. ಇವರೆಲ್ಲರ ಕಾರ್ಯಯೋಜನೆಗಳನ್ನು ವಿಫಲಗೊಳಿಸಲು ಹೊರಟಿರುವಂತೆ ಕಾಣುತ್ತಿರುವ ಜ. ಆಸಿಮ್ ಮುನೀರ್ ಮತ್ತು ಶೆಹ್​ಬಾಜ್ ಶರೀಫ್ ಸರ್ಕಾರ ಆ ಮೂಲಕ ಸಾಧಿಸಬಯಸುವುದೇನು ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ. ಆದರೆ ಅದು ಪಾಕ್ ಜನತೆಯ ಉದ್ಧಾರವೇನಲ್ಲ ಎನ್ನುವುದು ಮಾತ್ರ ನಿಜ. ಹೀಗೆ ಪಾಕಿಸ್ತಾನವನ್ನು ವಿಭಿನ್ನ ಹಾದಿಗಳಿಗೆ ಎಳೆಯುತ್ತಿರುವ ಈ ಆರು ಶಕ್ತಿಗಳ ಗುರಿಗಳನ್ನು ಒಂದೊಂದಾಗಿ ವಿಶ್ಲೇಷಿಸಿ ಪಾಕಿಸ್ತಾನದ ಭವಿಷ್ಯದ ಕುರಿತಾದ ಒಂದು ಚಿತ್ರಣವನ್ನು ಪಡೆದುಕೊಳ್ಳಲು ಪ್ರಯತ್ನಿಸೋಣ. ಆ ಚಿತ್ರ ಭಾರತದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಒಂದು ಸ್ಥೂಲ ಕಲ್ಪನೆ ಮಾಡಿಕೊಳ್ಳಲು ನಮಗೆ ಸಹಾಯಕವಾಗಬಹುದು.

    ಒಂದೂಕಾಲು ಶತಮಾನದ ಹಿಂದೆ ಝಾರಿಸ್ಟ್ ರಶಿಯಾ ಮತ್ತು ಬ್ರಿಟಿಷ್ ಸಾಮ್ರಾಜ್ಯ ಅಫ್ಘಾನಿಸ್ತಾನದ ಸ್ಪಷ್ಟ ಗಡಿಗಳನ್ನು ನೀಡಿದಾಗ ಆ ದೇಶದ ಜನತೆ ಉತ್ತರ ಮತ್ತು ದಕ್ಷಿಣದ ಎರಡೂ ಬೃಹತ್ ಸಾಮ್ರಾಜ್ಯಗಳಲ್ಲಿ ಹಂಚಿಹೋದರು. ಉತ್ತರದಲ್ಲಿ ತಾಜಿಕರು, ಉಜ್ಬೇಗರು ಮತ್ತು ತುರ್ಕ್​ವುನ್ನರು ರಶಿಯಾ ಮತ್ತು ಅಫ್ಘಾನಿಸ್ತಾನಗಳ ನಡುವೆ ಹರಿದು ಹಂಚಿಹೋದರೆ ದಕ್ಷಿಣದಲ್ಲಿ ಪಖ್ತೂನಿಗಳು ಅಥವಾ ಪಠಾಣರು ಅಫ್ಘಾನಿಸ್ತಾನ ಮತ್ತು ಭಾರತಗಳ ನಡುವೆ ಹಂಚಿಹೋದರು. ಹೀಗೆ ಸೃಷ್ಟಿಯಾದ ಅಫ್ಘಾನಿಸ್ತಾನದಲ್ಲಿ ಶೇ..60 ಇದ್ದ ಪಠಾಣರು ಸಹಜವಾಗಿಯೇ ಅಲ್ಲಿನ ರಾಜಕೀಯ ಅಧಿಕಾರವನ್ನು ಕೈಗೆ ತೆಗೆದುಕೊಂಡರು. ತಂತಮ್ಮ ಪಾಲಿನ ಅಧಿಕಾರಕ್ಕಾಗಿ ಇನ್ನುಳಿದವರು ಆಗ ಆರಂಭಿಸಿದ ಹೋರಾಟ ಇಂದಿಗೂ ನಡೆಯುತ್ತಲೇ ಇದೆ.

    ಅಫ್ಘಾನಿಸ್ತಾನದ ಮೇಲೆ ಬ್ರಿಟಿಷರು ಹೇರಿದ ಡ್ಯೂರಾಂಡ್ ರೇಖೆಯಿಂದಾಗಿ ಭಾರತಕ್ಕೆ ಬಂದ ಪಠಾಣ ಪ್ರದೇಶಗಳಲ್ಲಿ ಮೂರನೆಯ ಎರಡು ಭಾಗ ನಾರ್ತ್ ವೆಸ್ಟರ್ನ್ ಫ್ರಾಂಟಿಯರ್ ಪ್ರಾವಿನ್ಸ್ (ಎನ್​ಡಬ್ಲ್ಯುಎಫ್​ಪಿ, ವಾಯವ್ಯ ಗಡಿನಾಡು ಪ್ರಾಂತ್ಯ) ಎಂಬ ಹೊಸ ಪ್ರಾಂತ್ಯವಾದರೆ ಉಳಿದ ಮೂರನೆಯ ಒಂದು ಭಾಗ ಬಲೂಚಿಸ್ತಾನಕ್ಕೆ ಸೇರಿಹೋಯಿತು. ಅಫ್ಘಾನಿಸ್ತಾನದಲ್ಲಿ ಪ್ರಾಬಲ್ಯ ಗಳಿಸಿಕೊಂಡ ಪಠಾಣರು ತಮ್ಮನ್ನು ವಿಭಜಿಸಿದ ಡ್ಯೂರಾಂಡ್ ಗಡಿರೇಖೆಯನ್ನು ಸಂದರ್ಭದ ಒತ್ತಡದಿಂದಾಗಿ ಒಪ್ಪಿಕೊಂಡರೂ ಅದರ ದಕ್ಷಿಣಕ್ಕಿದ್ದ ಪಠಾಣ ಪ್ರದೇಶಗಳನ್ನು ಮರೆಯಲಿಲ್ಲ. ಅವುಗಳನ್ನು ಮತ್ತೆ ಪಡೆದುಕೊಂಡು ತಮಗಾದ ಅನ್ಯಾಯವನ್ನು ಸರಿಪಡಿಸಿಕೊಳ್ಳಬೇಕೆಂಬ ಬಯಕೆ ಅವರಲ್ಲಿ ಜಾಗೃತವಾಗಿಯೇ ಉಳಿಯಿತು. ಪಠಾಣ ಜನಾಂಗದ ವೈಶಿಷ್ಟ್ಯವೆಂದರೆ ಪ್ರತೀಕಾರದ ಮನೋಭಾವ ಮತ್ತದನ್ನು ಸಾಧಿಸಲು ಅದೆಷ್ಟು ಸಮಯವಾದರೂ ಕಾಯಬಲ್ಲ ಅವರ ತಾಳ್ಮೆ. ಇದಕ್ಕೆ ಅವರು ನೂರು ವರ್ಷಗಳನ್ನು ತೆಗೆದುಕೊಂಡರೆ ಅದು ಕನಿಷ್ಟ ಅವಧಿಯಂತೆ!

    ಭಾರತದಲ್ಲಿ ಬ್ರಿಟಿಷರು ಇರುವವರೆಗೂ ಕಳೆದುಹೋದ ಪ್ರದೇಶಗಳನ್ನು ಮರಳಿ ಪಡೆಯುವುದು ಸುಲಭವಲ್ಲ ಎಂದರಿತಿದ್ದ ಅಫ್ಘನ್ ಪಠಾಣರಿಗೆ ಅಂತಹ ಅವಕಾಶ ಗೋಚರವಾದದ್ದು 1947ರಲ್ಲಿ ಭಾರತದ ವಿಭಜನೆಯಾದಾಗ. ಪಠಾಣ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರಿಹೋಗುತ್ತಿದ್ದುದನ್ನು ಕಂಡ ಅಫ್ಘಾನಿಸ್ತಾನದ ಅರಸ ಝುರೀರ್ ಶಾ ಆ ಕಾರಣದಿಂದಲೇ ಪಾಕಿಸ್ತಾನವನ್ನು ಒಂದು ದೇಶವಾಗಿ ಮಾನ್ಯ ಮಾಡಲು ನಿರಾಕರಿಸಿದರು. ಆ ವರ್ಷ ವಿಶ್ವಸಂಸ್ಥೆಯ ಸದಸ್ಯತ್ವಕ್ಕಾಗಿ ಪಾಕಿಸ್ತಾನ ಅರ್ಜಿ ಹಾಕಿದಾಗ ಅದನ್ನು ಸಾಮಾನ್ಯ ಸಭೆಯಲ್ಲಿ ವಿರೋಧಿಸಿದ ಏಕೈಕ ರಾಷ್ಟ್ರ ಅಫ್ಘಾನಿಸ್ತಾನ! ಬ್ರಿಟಿಷರೂ ತೊರೆದುಹೋದ, ಭಾರತದಿಂದಲೂ ಬೇರೆಯಾದ ಪಾಕಿಸ್ತಾನ ಸಹಜವಾಗಿಯೇ ಬಲಹೀನವಾಗಿರುತ್ತದೆ, ತಮ್ಮ ಕಳೆದುಹೋದ ಪ್ರದೇಶಗಳನ್ನು ಅದರಿಂದ ಕಿತ್ತುಕೊಳ್ಳುವುದು ಸುಲಭ ಎಂದು ಅಫ್ಘನ್ನರು ಭಾವಿಸಿದರು. ನಮಗೆ ಸೇನೆಯ ಅಗತ್ಯವೇ ಇಲ್ಲ ಎಂದು ವಾದಿಸುತ್ತಿದ್ದ ಜವಾಹರ್​ಲಾಲ್ ನೆಹರೂರಂತಹ ವ್ಯಕ್ತಿಯೇನಾದರೂ ಪಾಕಿಸ್ತಾನದ ನಾಯಕನಾಗಿದ್ದರೆ ಅಫ್ಘನ್ನರ ಹಂಚಿಕೆ ಸಫಲವಾಗುತ್ತಿದ್ದು ನಿಶ್ಚಿತ. ಆದರೆ ಅವರ ದುರದೃಷ್ಟಕ್ಕೆ ಪಾಕಿಸ್ತಾನದಲ್ಲಿ ರಾಜಕೀಯ ನಾಯಕತ್ವಕ್ಕಿಂತ ಸೇನೆಯೇ ಹೆಚ್ಚು ಅಧಿಕಾರಗಳನ್ನು ಗಳಿಸಿಕೊಂಡದ್ದಲ್ಲದೇ ಅಮೆರಿಕಾದ ಆಶೀರ್ವಾದ ಪಡೆದುಕೊಂಡು ಬಲಾಢ್ಯವಾಗಿ ಬೆಳೆದು ನಿಂತಿತು. ಅದನ್ನು ಎದುರಿಸುವ ಸಾಮರ್ಥ್ಯ ತಮಗಿಲ್ಲ ಎಂದು ಅಫ್ಘನ್ನರು ನಿರಾಶರಾದರು. ಆದರೂ ಹತಾಶೆಯನ್ನು ಅವರು ಹೊರಹಾಕಿದ್ದು ತಮ್ಮ ನೆಲದಲ್ಲಿ ಪಾಕಿಸ್ತಾನಿ ಹಿತಾಸಕ್ತಿಗಳಿಗೆ ಧಕ್ಕೆಯಾಗುವಂತಹ ನಿರ್ಣಯಗಳನ್ನು ಮತ್ತೆಮತ್ತೆ ತೆಗೆದುಕೊಂಡದ್ದು. 1955ರಲ್ಲಿ ಅದೆಷ್ಟು ವಿಕೋಪಕ್ಕೆ ಹೋಯಿತೆಂದರೆ ಉದ್ರಿಕ್ತ ಅಫ್ಘನ್ ಜನರು ಕಾಬೂಲ್​ನಲ್ಲಿದ್ದ ಪಾಕಿಸ್ತಾನಿ ರಾಯಭಾರ ಕಚೇರಿಗೆ ನುಗ್ಗಿ ದಾಂಧಲೆ ಎಬ್ಬಿಸಿದರು. 1961ರಲ್ಲಂತೂ ಗಡಿಯಲ್ಲಿ ಯುದ್ಧದ ಅಪಾಯ ಕಾಣಿಸಿಕೊಂಡಿತ್ತು.

    ಅಫ್ಘನ್ ಪಠಾಣರ ಪಾಕ್-ದ್ವೇಷ ತಹಬಂದಿಗೆ ಬಂದದ್ದು 1979-88ರಲ್ಲಿ ಸೋವಿಯೆತ್ ಸೇನೆಯ ವಿರುದ್ಧ ಹೋರಾಡಲು ಅವರಿಗೆ ಪಾಕಿಸ್ತಾನದ ಸಹಾಯ ಬೇಕಾದಾಗ. ಒಮ್ಮೆ ಸೋವಿಯೆತ್ ಸೇನೆ ಹೊರಹೋಗಿ ಅಫ್ಘಾನಿಸ್ತಾನ ಮತ್ತೆ ಅಫ್ಘನ್ನರ ಕೈಗೇ ಬಂದಾಗ ಅವರು ಮತ್ತೆ ತನ್ನ ವಿರುದ್ಧ ತಿರುಗಬಹುದೆಂದೂ, ಅದು ತನ್ನ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರಬಹುದೆಂದೂ ಸಂದೇಹಿಸಿದ ಪಾಕಿಸ್ತಾನ ಆ ನೆರೆನಾಡನ್ನು ತನ್ನ ಸ್ನೇಹವಲಯದಲ್ಲೇ ಇಟ್ಟುಕೊಳ್ಳುವ ಇರಾದೆಯಿಂದ ಮೂರು ದಶಕಗಳ ಹಿಂದೆ ತಾಲಿಬಾನ್ ಅನ್ನು ಸೃಷ್ಟಿಸಿ ಅದನ್ನು ಕಾಬೂಲ್​ನಲ್ಲಿ ಪಟ್ಟಕ್ಕೇರಿಸಿತು. ಇದನ್ನು ಮಾಡಿದ್ದು ಕುಖ್ಯಾತ ಐಎಸ್​ಐ ಮತ್ತು ಬೆನಜೀರ್ ಭುಟ್ಟೋ ಸರ್ಕಾರ ಒಟ್ಟುಗೂಡಿ.

    ಅಫ್ಘಾನಿಸ್ತಾನ ಅಥವಾ ಅದರ ನೆಲದ ಬಗ್ಗೆ ಪಾಕ್ ಆಸಕ್ತಿಗೆ ಸಾಮರಿಕ ಕಾರಣವೊಂದಿದೆ. 1971ರ ಯುದ್ಧದ ಹೀನಾಯ ಸೋಲು ಮತ್ತು ಬಾಂಗ್ಲಾದೇಶ ಕೈಬಿಟ್ಟುಹೋದ ನಂತರ ಪಾಕ್ ಸೇನೆಯನ್ನು ಕಾಡತೊಡಗಿದ ದುಃಸ್ವಪ್ನವೆಂದರೆ ಭಾರತದೊಂದಿಗೆ ಇನ್ನೊಂದು ಯುದ್ಧವಾದರೆ ಭಾರತೀಯ ಸೇನೆ ತನ್ನ ಇಡೀ ಗಮನವನ್ನು ಪಂಜಾಬ್​ನತ್ತಲೇ ಕೇಂದ್ರೀಕರಿಸುತ್ತದೆ ಮತ್ತು ತಾನು ನೆಲೆ ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದು. ಹಾಗಾದ ಪಕ್ಷದಲ್ಲಿ ತಾನು ಅಫ್ಘಾನಿಸ್ತಾನದಲ್ಲಿ ನೆಲೆನಿಂತು ಭಾರತೀಯ ಸೇನೆಯನ್ನು ಎದುರಿಸಬೇಕೆಂದು. ಈ ಬಗೆಯ ಚಿಂತನೆಗೆ ಪ್ರೇರಕವಾದದ್ದು ಅಫ್ಘಾನಿಸ್ತಾನದ ಐತಿಹಾಸಿಕ ಅಭೇದ್ಯತೆ. ಇತಿಹಾಸದುದ್ದಕ್ಕೂ ಯಾವುದೇ ಹೊರಗಿನ ಸೇನೆ ಅಫ್ಘನ್ ನೆಲದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲಾಗಿಲ್ಲ. ಗ್ರೀಕರು, ಮಂಗೋಲರು, ಮೊಘಲರು, ಬ್ರಿಟಿಷರು ಮತ್ತು ಈಗಷ್ಟೇ ರಶಿಯನ್ನರು ಅಲ್ಲಿ ಸೋತು ಹೊರಬಂದದ್ದಕ್ಕೆ ಜಗತ್ತು ಸಾಕ್ಷಿಯಾಗಿದೆ. ಹೀಗಾಗಿ ಭಾರತೀಯ ಸೇನೆಗೂ ಅಲ್ಲಿ ಪ್ರವೇಶ ಸಾಧ್ಯವಾಗುವುದಿಲ್ಲ ಎಂದು ಪಾಕ್ ಸೇನೆಯ ಸಾಮರಿಕ ತಜ್ಞರು ಲೆಕ್ಕ ಹಾಕಿದರು. ಆದರೆ ಭಾರತ-ದ್ವೇಷದಲ್ಲಿ ಅವರು ವಾಸ್ತವಕ್ಕೆ ಅದೆಷ್ಟು ಕುರುಡಾಗಿದ್ದರೆಂದರೆ ಅಫ್ಘನ್ ನೆಲಕ್ಕೆ ತಾವೂ ಸಹಾ ವಿದೇಶೀಯರೇ, ತಮ್ಮನ್ನು ಅಲ್ಲಿ ನೆಲೆಗೊಳ್ಳಲು ಅಫ್ಘನ್ನರು ಬಿಡುವುದಿಲ್ಲ ಎನ್ನುವುದನ್ನೂ ಮರೆತುಬಿಟ್ಟರು.

    ಪಾಕ್ ಸೇನೆ 1996ರಲ್ಲಿ ಕಾಬೂಲ್​ನಲ್ಲಿ ಅಧಿಕಾರಕ್ಕೇರಿಸಿದ ತಾಲಿಬಾನ್ ತನ್ನ ಭಯೋತ್ಪಾದಕ ಕೃತ್ಯಗಳಿಂದಾಗಿ ಅಮೆರಿಕಾ, ಭಾರತ, ರಶಿಯಾ ಸೇರಿದಂತೆ ಹಲವು ರಾಷ್ಟ್ರಗಳ ವಿರೋಧ ಕಟ್ಟಿಕೊಂಡು ಕೊನೆಗೆ ಅಮೆರಿಕಾದ ಕೆಂಗಣ್ಣಿಗೆ ಗುರಿಯಾದದ್ದು ನಿಮಗೆ ತಿಳಿದೇ ಇದೆ. ಆಗ ತಾಲಿಬಾನ್ ಮತ್ತು ಅಲ್-ಖಯೀದಾ ವಿರುದ್ಧದ ತನ್ನ ಯುದ್ಧದಲ್ಲಿ ಪಾಕಿಸ್ತಾನವನ್ನು ಅಮೆರಿಕಾ ಬಲವಂತವಾಗಿ ಸೇರಿಕೊಂಡಾಗ ಪಾಕ್ ಸೇನೆಯೇನೋ ಅತ್ತ ಬೇಟೆನಾಯಿಯ ಜತೆಗೂ, ಇತ್ತ ಮೊಲದ ಜತೆಗೂ ಓಡುವ ಇಬ್ಬಂದಿ ಆಟವನ್ನಾಡಿದರೂ ಅಫ್ಘಾನಿಸ್ತಾನದ ಮೇಲೆ ಆಕ್ರಮಣವೆಸಗಲು ಅಮೆರಿಕನ್ನರಿಗೆ ತನ್ನ ನೆಲವನ್ನು ನೆಲೆಯಾಗಿ ಬಳಸಿಕೊಳ್ಳಲು ಪಾಕಿಸ್ತಾನ ಅವಕಾಶ ಮಾಡಿಕೊಟ್ಟದ್ದನ್ನೇ ಮಿತ್ರದ್ರೋಹ ಎಂದು ತಾಲಿಬಾನ್ ಬಗೆಯಿತು. ಅಲ್ಲಿಗೆ ಅಫ್ಘನ್ನರನ್ನು ತನ್ನ ಬುಟ್ಟಿಯಲ್ಲಿಟ್ಟುಕೊಳ್ಳಲು ಕಳೆದ ಎರಡು ದಶಕಗಳಿಂದಲೂ ಪಾಕಿಸ್ತಾನ ಆಡಿದ್ದ ಎಲ್ಲ ನಾಟಕಗಳೂ ವೈಫಲ್ಯ ಕಂಡವು. ಅಫ್ಘನ್ ತಾಲಿಬಾನಿಗಳ ಸಕ್ರಿಯ ಸಹಕಾರ ಮತ್ತು ನಿರ್ದೇಶನದಲ್ಲಿ ಪಾಕ್ ಪಠಾಣರೂ ತಮ್ಮದೇ ತಹ್ರೀಕ್-ಎ-ತಾಲಿಬಾನ್ ಕಟ್ಟಿಕೊಂಡು ಪಾಕ್ ಸೇನೆಯ ವಿರುದ್ಧ ಸಂಘರ್ಷಕ್ಕಿಳಿದರು. ಅದರ ರಕ್ತಸಿಕ್ತ ಇತಿಹಾಸವನ್ನು ಲೇಖನದ ಹಿಂದಿನ ಭಾಗದಲ್ಲಿ ಹೇಳಿಯೇ ಇದ್ದೇನೆ. ಇಮ್ರಾನ್ ಖಾನ್ ಸರ್ಕಾರದ ಬೆಂಬಲ ಮತ್ತು ಫೈಜ್ ಹಮೀದ್ ನೇತೃತ್ವದ ಐಎಸ್​ಐನ ಸಕ್ರಿಯ ಸಹಕಾರದಿಂದ ಆಗಸ್ಟ್ 15, 2021ರಂದು ಅಫ್ಘನ್ ತಾಲಿಬಾನ್ ಕಾಬೂಲ್​ನಲ್ಲಿ ಅಧಿಕಾರ ಗಳಿಸಿಕೊಂಡಿತಷ್ಟೆ. ಆದರೆ ಪಾಕ್ ಸೇನೆ ಮೊದಲಿಗೆ ನವೆಂಬರ್ 2021ರಲ್ಲಿ ಫೈಜ್ ಹಮೀದ್​ರನ್ನೂ, ಐದು ತಿಂಗಳ ನಂತರ ಇಮ್ರಾನ್ ಖಾನ್​ರನ್ನೂ ಅವರವರ ಸ್ಥಾನಗಳಿಂದ ಹೊರಗಟ್ಟಿದಾಗ ಎರಡೂ ತಾಲಿಬಾನ್​ಗಳ ಪಾಕ್-ಪ್ರೇಮ ಅಂತ್ಯಗೊಂಡಿತು. ಅಫ್ಘನ್ ತಾಲಿಬಾನ್ ಸೈನಿಕರು ಪಾಕ್ ಗಡಿಯಲ್ಲಿನ ವಿವಾದಿತ ಪ್ರದೇಶಗಳಲ್ಲಿ ಪಾಕ್ ಸೇನಾ ಠಿಕಾಣೆಗಳ ಮೇಲೆ ದಾಳಿಗಳನ್ನಾರಂಭಿಸಿದರು. ಪಾಕಿಸ್ತಾನದಲ್ಲಿರುವ ಎಲ್ಲ ಪಠಾಣ ಪ್ರದೇಶಗಳನ್ನೂ ಅಫ್ಘಾನಿಸ್ತಾನದೊಳಕ್ಕೆ ತರುವುದು ಅಫ್ಘನ್ನರ ಐತಿಹಾಸಿಕ ಗುರಿ ಹಾಗೂ ಜವಾಬ್ದಾರಿ ಎಂಬ ಹೇಳಿಕೆಗಳು ಅಫ್ಘನ್ ತಾಲಿಬಾನ್ ನಾಯಕರಿಂದ ಬರತೊಡಗಿದವು. ಅಮಾನುಲ್ಲಾ ಖಾನ್ ಅಥವಾ ಝುಹೀರ್ ಶಾರಂತಹ ಅರಸರೇ ಆಗಲಿ, ನೂರ್ ಮಹಮದ್ ತರಾಕಿ ಅಥವಾ ಹಫೀಜುಲ್ಲಾ ಅಮೀನ್​ರಂತಹ ಪರಸ್ಪರ ವಿರೋಧಿ ಕಮ್ಯೂನಿಸ್ಟರಾಗಲೀ, ಪಾಕಿಸ್ತಾನವೇ ಸಾಕಿ ಕೊಬ್ಬಿಸಿದ ತಾಲಿಬಾನಿ ಮುಲ್ಲಾ ಒಮರ್ ಅಥವಾ ಮುಲ್ಲಾ ಯಾಕೂಬ್ ಆಗಲಿ ಪಠಾಣರು ಪಠಾಣರೇ, ತಮಗಾದ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ನೂರಾರು ವರ್ಷಗಳು ಕಾಯುವವರೇ ಎಂಬ ಸತ್ಯ ಪಾಕ್ ಸೇನೆಯ ಎದೆಗೆ ಈಗ ಗಢಾರಿಯಂತೆ ಘಟ್ಟಿಸತೊಡಗಿದೆ, ಪಾಕಿಸ್ತಾನ ನಲವತ್ತೆರಡು ವರ್ಷಗಳ ಅವಾಸ್ತವಿಕ ಕನಸಿನಿಂದ ಹೊರಬಂದಿದೆ.

    ಇದಕ್ಕೆ ಪಾಕ್ ಸೇನೆಯ ಪ್ರತಿಕ್ರಿಯೆ ಏನು? ತಾಲಿಬಾನ್ ಸೈನಿಕರು ‘ಗಡಿ’ ದಾಟಿ ಬಾರದಂತೆ ತಡೆಯಲು ಪಾಕ್ ಸೇನೆ ನಿರ್ವಿುಸಿದ/ನಿರ್ವಿುಸುತ್ತಿರುವ ಕಬ್ಬಿಣದ ಕಂಬಗಳು ಮತ್ತು ತಂತಿಬೇಲಿಗಳನ್ನು ಅಫ್ಘನ್ನರು ಕಿತ್ತು ಹೊತ್ತೊಯ್ಯುತಿದ್ದಾರೆ, ತಡೆಯಲು ಬರುವ ಪಾಕ್ ಸೈನಿಕರನ್ನು ಕೊಲ್ಲುತ್ತಿದ್ದಾರೆ. ಸಾವುನೋವುಗಳಿಗೆ ತಾಲಿಬಾನಿಗಳು ತಯಾರಾಗಿಯೇ ಇದ್ದಾರೆ! ಇಂತಹ ಕೃತ್ಯಗಳನ್ನು ನಿಲ್ಲಿಸಿ ಎಂದು ಕೇಳಿಕೊಳ್ಳಲು ಕಾಬೂಲ್​ಗೆ ಹೋದ ಪಾಕ್ ಉಪ ವಿದೇಶ ಮಂತ್ರಿ ಹೀನಾ ರಬ್ಬಾನಿಯವರನ್ನು ಭೇಟಿಯಾಗಲು ಅಫ್ಘನ್ ರಕ್ಷಾಮಂತ್ರಿ ಮುಲ್ಲಾ ಯಾಕೂಬ್ ನಿರಾಕರಿಸಿದ್ದಾರೆ. ಈ ಯಾಕೂಬ್ ತಾಲಿಬಾನ್​ನ ಸ್ಥಾಪಕ ನೇತಾರ, ಪಾಕಿಗಳ ಕಣ್ಮಣಿ ಮುಲ್ಲಾ ಒಮಾರ್​ನ ಮಗ!

    ಅಫ್ಘನ್ ತಾಲಿಬಾನ್​ನ ಎಲ್ಲ ಕೃತ್ಯಗಳಿಗೂ ಪಾಕ್ ತಾಲಿಬಾನ್​ನ ಸಕ್ರಿಯ ಸಹಕಾರವಿದೆ ಮತ್ತು ಪಾಕ್ ತಾಲಿಬಾನ್​ಗೆ ಆಶ್ರಯ, ಶಸ್ತ್ರಾಸ್ತ್ರಗಳು ಹಾಗೂ ಇನ್ನಿತರ ಅಗತ್ಯ ಸಾಮಗ್ರಿಗಳನ್ನು ಅಫ್ಘಾನ್ ತಾಲಿಬಾನ್ ಪೂರೈಸುತ್ತಿದೆ. ಹೇಗೂ ಅಮೆರಿಕನ್ನರು ಬಿಟ್ಟುಹೋದದ್ದು ಮತ್ತು ಐಎಸ್​ಐ ಉಡುಗೊರೆ ಕೊಟ್ಟದ್ದು ಸಾಕಷ್ಟಿದೆಯಲ್ಲ!

    ಇದೆಲ್ಲದಕ್ಕೆ ಕಲಶವಿಟ್ಟಂತಹ ಹೆಜ್ಜೆಯನ್ನು ಪಾಕ್ ತಾಲಿಬಾನ್ ಇಟ್ಟದ್ದು ನವೆಂಬರ್ 29ರಂದು. ಪಾಕ್ ಸೇನೆಯ ದಂಡನಾಯಕರಾಗಿ ಜ. ಆಸಿಮ್ ಮುನೀರ್ ಅಧಿಕಾರ ವಹಿಸಿಕೊಂಡ ಆ ದಿನ ಪಾಕ್ ಸೇನೆಯೊಂದಿಗಿನ ಕದನವಿರಾಮವನ್ನು ಪಾಕ್ ತಾಲಿಬಾನ್ ರದ್ದುಮಾಡಿತು. ಅದರ ಹಿಂದಿರುವುದು ಅಫ್ಘನ್ ತಾಲಿಬಾನ್​ನ ಆಶೀರ್ವಾದ.

    ಇದೆಲ್ಲದರಿಂದ ರೋಸಿಹೋದ ಹೊಸ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅಫ್ಘಾನಿಸ್ತಾನದ ವಿರುದ್ಧ ಸೇನಾ ಕಾರ್ಯಾಚರಣೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದರೆ ಪ್ರಶ್ನೆ ಇಷ್ಟೇ- ಬ್ರಿಟಿಷರು, ರಶಿಯನ್ನರು ಮತ್ತೀಗ ಅಮೆರಿಕನ್ನರು ಮಣ್ಣುಮುಕ್ಕಿದೆಡೆ ಪಾಕಿಸ್ತಾನಿ ಸೇನೆ ಯಶಸ್ವಿಯಾಗುವುದೇ? ಗಡಿಯಲ್ಲಿ ಅಫ್ಘನ್ ತಾಲಿಬಾನ್, ದೇಶದೊಳಗೆ ಪಾಕ್ ತಾಲಿಬಾನ್ ಒಟ್ಟಿಗೆ ಎರಗಿದರೆ ಅದನ್ನು ಎದುರಿಸುವ ಸಾಮರ್ಥ್ಯ ಈಗಾಗಲೇ ಒಂದಕ್ಕಿಂತ ಹೆಚ್ಚು ಬಗೆಯ ಒಡಕು ಅನುಭವಿಸುತ್ತಿರುವ ಪಾಕ್ ಸೇನೆಗೆ ಇಲ್ಲ ಎನ್ನುವುದು ಸಾರ್ವತ್ರಿಕ ಅಭಿಪ್ರಾಯ. ಪಾಕ್ ತಾಲಿಬಾನ್ (ಟಿಟಿಪಿ) ಅಂತೂ ಡಿಸೆಂಬರ್ 25ರಂದು ಉತ್ತರದ ಸ್ವಾತ್ ಕಣಿವೆಯಲ್ಲಿ ತನ್ನ ಧ್ವಜವನ್ನು ಹಾರಿಸಿಯಾಗಿದೆ. ‘ನೀವು ನಿಮ್ಮ ಹಿತ್ತಲಲ್ಲಿ ಹಾವುಗಳನ್ನು ಸಾಕಿ, ಅವು ನಿಮ್ಮ ನೆರೆಯವರನ್ನು ಮಾತ್ರ ಕಚ್ಚುತ್ತವೆ ಎಂದು ತಿಳಿದರೆ ಅದು ಮೂರ್ಖತನವಷ್ಟೇ’ ಎಂಬರ್ಥದ ಮಾತಿನಿಂದ ಅಮೆರಿಕನ್ ರಾಜಕಾರಣಿ ಹಿಲರಿ ಕ್ಲಿಂಟನ್ ಹದಿನಾಲ್ಕು ವರ್ಷಗಳ ಹಿಂದೆ ಪಾಕಿಸ್ತಾನವನ್ನು ಎಚ್ಚರಿಸಿದ್ದು ಇಂತಹ ಸನ್ನಿವೇಶವನ್ನು ಮುಂಗಂಡೇ.

    ಸರಿ, ಪಾಕ್ ತಾಲಿಬಾನ್​ಗೆ ಸೇನೆಯನ್ನು ಎದುರಿಸುವ ಸಾಮರ್ಥ್ಯ ಬಂದದ್ದಾದರೂ ಹೇಗೆ? ಇದಕ್ಕೆ ಉತ್ತರ ಹುಡುಕಹೊರಟರೆ ನಮ್ಮೆದುರು ನಿಲ್ಲುವುದು ಫೈಜ್ ಹಮೀದ್. ಇಂದು ಪಾಕಿಸ್ತಾನದ ಹಣೆಬರಹ ಬರೆಯುತ್ತಿರುವುದರಲ್ಲಿ ಪ್ರಮುಖರಾದ ಅವರ ಕೃತ್ಯಗಳನ್ನು ಮುಂದಿನವಾರ ವಿಶ್ಲೇಷಿಸೋಣ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts