ಹರಿಹರ: ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನಿಯಮ ಬಾಹಿರವಾಗಿ ಕಳೆದ 8 ವರ್ಷಗಳಿಂದ ಸೇವಾ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರೂಪ್-ಡಿ ನೌಕರರನ್ನು ಸೇವೆಯಿಂದ ಕೈಬಿಡಲು ಆಗ್ರಹಿಸಿ ಜೈ ಕರುನಾಡು ರಕ್ಷಣಾ ಸಂಘವು ಅಪರ ಜಿಲ್ಲಾಧಿಕಾರಿ ಲೋಕೇಶ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಸರ್ಕಾರಿ ಆದೇಶದನ್ವಯ ಸೇವಾ ಗುತ್ತಿಗೆ ಆಧಾರದಲ್ಲಿ ಕೇವಲ 7 ತಿಂಗಳು ಮಾತ್ರ ಸೇವೆ ಸಲ್ಲಿಸಲು ಅವಕಾಶವಿದೆ. ಆದರೆ ಮಂಜುನಾಥ ಸಾಬಳ್ಳಿ ಎಂಬುವವರು ಕಳೆದ 7 ವರ್ಷಗಳಿಂದ ಅಲ್ಲಿಯೆ ಠಿಕಾಣಿ ಹೂಡಿದ್ದಾರೆ. ಇದೇ ವ್ಯಕ್ತಿಯನ್ನು 10 ಬಾರಿ ಮುಂದುವರೆಸಿರುವ ಮರ್ಮ ಏನೆಂಬುದು ತಿಳಿಯದಾಗಿದೆ.
ವಿದ್ಯಾರ್ಥಿ ವೇತನದ ಪರಿಶೀಲನೆಗೆ ಕಚೇರಿಗೆ ಬರುವ ವಿದ್ಯಾರ್ಥಿ, ಪಾಲಕರಿಂದ ಹಾಗೂ ಸರ್ಕಾರಿ ನೌಕರಿಗೆ ಆಯ್ಕೆಯಾದ ಅಭ್ಯರ್ಥಿಗಳ ಸಿಂಧುತ್ವ ಮಾಡಿಸಿಕೊಡುತ್ತೇನೆಂದು ಹಣ ಪಡೆಯುತ್ತಾರೆಂಬ ಆರೋಪವೂ ಇವರ ಮೇಲಿದೆ.
ಬೇರೆ ಜಿಲ್ಲೆಯ ಈ ವ್ಯಕ್ತಿಯನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸಿ ನಿಯಮಾವಳಿ ಪಾಲನೆ ಮಾಡಿ ಇನ್ನೊಬ್ಬ ಸೂಕ್ತ ಸ್ಥಳೀಯ ಅಭ್ಯರ್ಥಿಯನ್ನು ನೇಮಿಸಿಕೊಳ್ಳಬೇಕು. ತಪ್ಪಿದಲ್ಲಿ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಕೊಡ್ಲಿ ತಿಳಿಸಿದರು.
ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಕಚೇರಿ ವ್ಯವಸ್ಥಾಪಕ ಎಚ್.ಎಂ. ತಿಪ್ಪೇಸ್ವಾಮಿ ಇವರಿಗೂ ಮನವಿ ನೀಡಲಾಯಿತು. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮೆಹಬೂಬ್ ಅಲಿ ಅದ್ವಾನಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಜಿಲಾನಿ, ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದ ರಾಜು ಇದ್ದರು.