ಕನ್ನಡ ಶಾಲೆಗಳಿಗೆ ಮುಳುವಾದ ಇಂಗ್ಲಿಷ್ ವ್ಯಾಮೋಹ

ಮೂಡಿಗೆರೆ: ಸರ್ಕಾರಿ ಶಾಲೆ ಪ್ರದೇಶದಲ್ಲಿ ವಸತಿ ನಿಲಯ ಅಗತ್ಯವಿದ್ದರೆ ಅಧಿಕಾರಿಗಳು ಸರ್ವೆ ನಡೆಸಿ ವರದಿ ನೀಡಿದರೆ ಹಾಸ್ಟೆಲ್ ನಿರ್ವಿುಸಲು ಸರ್ಕಾರ ಬದ್ಧವಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ತಿಳಿಸಿದರು.

ಬೆಟ್ಟಗೆರೆ ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಬೆಳ್ಳಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾಸಿರಿ ಯೋಜನೆಯಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ಸಹಾಯಧನ ಸೇರಿ ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಅನುದಾನಗಳನ್ನು ಸಮರ್ಪಕವಾಗಿ ಒದಗಿಸಲು ಸಿದ್ಧವಿದೆ. ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಸಹಾಯಧನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ರಾಜಕಾರಣದಲ್ಲಿ ಸುಳ್ಳು, ಭ್ರಷ್ಟಾಚಾರ ಮಿತಿಮೀರಿದೆ. ವಿದ್ಯೆ ಆಧುನಿಕತೆ ಕಡೆಗೆ ತಿರುಗಿದಂತೆ ಭ್ರಷ್ಟಾಚಾರವೂ ಹೆಚ್ಚುತ್ತಿದೆ. ಕನ್ನಡ ಶಿಕ್ಷಣಕ್ಕೆ ಭ್ರಷ್ಟಾಚಾರ ಮತ್ತು ಸುಳ್ಳಿನ ರಾಜಕಾರಣ ತೊಲಗಿಸುವ ಶಕ್ತಿ ಇದೆ. ಪಾಲಕರು ಕನ್ನಡ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಕನ್ನಡ ಉಳಿವಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಈ ವೇಳೆ ಬೆಳ್ಳಿ ಬೆಳಕು ಸ್ಮರಣ ಸಂಚಿಕೆ ಮತ್ತು ಶಾಲಾ ಲಾಂಛನ ಬಿಡುಗಡೆ ಮಾಡಲಾಯಿತು. ಶಾಸಕ ಎಂ.ಪಿ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸಂಸದ ಡಿ.ಬಿ.ಚಂದ್ರೇಗೌಡ, ಮಾಜಿ ಸಚಿವೆ ಮೋಟಮ್ಮ, ವಿಶ್ರಾಂತ ಕುಲಪತಿ ಡಾ. ಆರ್.ಎನ್.ಶ್ರೀನಿವಾಸ್ ಗೌಡ, ಕೃಷಿ ವಿಜ್ಞಾನ ಕೇಂದ್ರದ ವಿಶ್ರಾಂತ ಕುಲಪತಿ ಡಾ. ಎಚ್.ಶಿವಣ್ಣ, ಎಂಎಲ್​ಸಿ ಎಂ.ಕೆ.ಪ್ರಾಣೇಶ್, ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಸದಸ್ಯರಾದ ಜಸಿಂತ ಅನಿಲ್​ಕುಮಾರ್, ಕೆ.ಆರ್.ಪ್ರಭಾಕರ್, ಸುಧಾ ಯೋಗೇಶ್, ಶಾಮಣ್ಣ, ನಿಕಿಲ್ ಚಕ್ರವರ್ತಿ, ಅಮಿತಾ ಮುತ್ತಪ್ಪ, ತಾಪಂ ಅಧ್ಯಕ್ಷ ಕೆ.ಸಿ.ರತನ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್​ಕುಮಾರ್, ಬೆಟ್ಟಗೆರೆ ಗ್ರಾಪಂ ಅಧ್ಯಕ್ಷೆ ಮಮತಾ ರಾಜ್ ಮೋಹನ್, ಉಪಾಧ್ಯಕ್ಷೆ ಪೂರ್ಣಿಮಾ, ತಾಪಂ ಸದಸ್ಯರಾದ ದೇವರಾಜು, ರಂಜನ್ ಅಜಿತ್​ಕುಮಾರ್, ಎಸ್​ಡಿಎಂಸಿ ಅಧ್ಯಕ್ಷ ಬಿ.ಎಂ.ಮಂಜುನಾಥ್, ತಹಸೀಲ್ದಾರ್ ಪದ್ಮನಾಭ ಶಾಸ್ತ್ರಿ, ಇಒ ವೆಂಕಟೇಶ್, ಬಿಇಒ ತಾರನಾಥ್, ಮುಖ್ಯಶಿಕ್ಷಕ ರಾಜ್​ಕುಮಾರ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜು, ಬೆಳ್ಳಿಹಬ್ಬದ ಮಹಾ ಪೋಷಕ ಸುಬ್ಬೇಗೌಡ ಮತ್ತಿತರರು ಇದ್ದರು.

51 ಶಾಲೆಗೆ ಬೀಗ: ತಾಲೂಕಿನಲ್ಲಿ 51 ಕನ್ನಡ ಸರ್ಕಾರಿ ಶಾಲೆಗಳು ಮುಚ್ಚಿವೆ ಎಂದು ಬೆಳ್ಳಿ ಹಬ್ಬ ಆಚರಣಾ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು. ಸರ್ಕಾರಿ ಶಾಲೆಗಳೆಲ್ಲ ಮುಚ್ಚುವ ಸ್ಥಿತಿ ಬಂದರೆ ಕನ್ನಡ ಭಾಷೆ ಉಳಿಸುವುದು ಹೇಗೆ? ಕೇರಳದಲ್ಲಿ ಮಲೆಯಾಳಂ, ಮಂಗಳೂರಿನಲ್ಲಿ ತುಳು ಭಾಷೆ ಮೇಲೆ ಅಲ್ಲಿನವರಿಗೆ ಪ್ರೀತಿ ಇರುವುದರರಿಂದ ಆ ಭಾಷೆ ಉಳಿದಿದೆ. ಆದರೆ ಕನ್ನಡದ ಮೇಲೆ ಕನ್ನಡಿಗರಿಗೇ ಪ್ರೀತಿ ಇಲ್ಲದಂತೆ ವರ್ತಿಸಬಾರದು. ಬೆಂಗಳೂರಿನಂತಹ ಮಹಾನಗರದಲ್ಲಿ ಕನ್ನಡ ಭಾಷೆ ತೀವ್ರ ಸಂಕಷ್ಟದ ಪರಿಸ್ಥಿತಿಗೆ ತಲುಪಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಗಳನ್ನು ಉಳಿಸಲು ಕನ್ನಡಿಗರು ಮುಂದಾಗಬೇಕು. ಬೆಟ್ಟಗೆರೆ ಶಾಲಾ ಕಟ್ಟಡ ಮತ್ತಿತರ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.