More

  ಜಾತಿ ಗಣತಿ ವರದಿ ಬಿಡುಗಡೆ ಮಾಡಿ: ಹಿಂದುಳಿದ ಜಾತಿಗಳ ಜಿಲ್ಲಾ ಒಕ್ಕೂಟ ಆಗ್ರಹ

  ಮಂಡ್ಯ: ನ್ಯಾಯವಾದಿ ಎಚ್.ಕಾಂತರಾಜು ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಜಾತಿ ಗಣತಿಯನ್ನು ರಾಜ್ಯ ಸರ್ಕಾರ ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಹಿಂದುಳಿದ ಜಾತಿಗಳ ಜಿಲ್ಲಾ ಒಕ್ಕೂಟ ಒತ್ತಾಯಿಸಿದೆ.
  ನಗರದ ಕನಕಭವನದಲ್ಲಿ ಒಕ್ಕೂಟದಿಂದ ಆಯೋಜಿಸಿದ್ದ ವಿವಿಧ ಶೋಷಿದ ಸಮುದಾಯದ ಮುಖಂಡರ ಸಭೆಯಲ್ಲಿ ಜಾತಿ ಗಣತಿಯನ್ನು ಶೀಘ್ರವೇ ರಾಜ್ಯಸರ್ಕಾರ ಸ್ವೀಕರಿಸಿ ಅನುಷ್ಠಾನಗೊಳಿಸಬೇಕು. ಎಲ್.ಜೆ.ಹಾವನೂರು ವರದಿಯ ನಂತರ ಹಿಂದುಳಿದ ವರ್ಗಗಳು ಮತ್ತು ಶೋಷಿತ ಸಮುದಾಯಗಳ ಏಳಿಗೆಗಾಗಿ ಹಲವು ಆಯೋಗಗಳು ಸಿದ್ಧಪಡಿಸಿರುವ ವರದಿಯನ್ನು ಈ ಹಿಂದಿನ ಸರ್ಕಾರಗಳು ಸಮರ್ಥವಾಗಿ ಅನುಷ್ಠಾನಗೊಳಿಸಿಲ್ಲ. ಇದರಿಂದಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅನ್ಯಾಯವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
  ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಜಾತಿ ಗಣತಿಯನ್ನು ಜಾರಿಗೊಳಿಸುವುದರ ಮೂಲಕ ಎಲ್ಲ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಕೊಡಬೇಕಾಗಿದೆ. ತಳ ಸಮುದಾಯಗಳಿಂದ ಆಯ್ಕೆಯಾದವರು ಮತ್ತು ಶೋಷಿತರಿಂದ ಮತಪಡೆದ ಎಲ್ಲ ಸಮುದಾಯದ ಜನಪ್ರತಿನಿಧಿಗಳು ಜಾತಿ ಗಣತಿ ಅನುಷ್ಠಾನಕ್ಕೆ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.
  ಒಕ್ಕೂಟದ ಅಧ್ಯಕ್ಷ ಕೆ.ಎಚ್.ನಾಗರಾಜು ಮಾತನಾಡಿ, ರಾಷ್ಟ್ರದಲ್ಲಿ ಮೀಸಲಾತಿ ವಂಚಿತ ಜಾತಿಗಳಿಗೆ ಮೀಸಲಾತಿ ನೀಡಿ ಸಾಮಾಜಿಕ ಸಮಾನತೆಯನ್ನು ಕಲ್ಪಿಸುವ ಪ್ರಯತ್ನವನ್ನು ಹಲವು ರಾಜ್ಯಗಳು ಮಾಡಿದೆ. ಅದರಂತೆ ಕರ್ನಾಟಕವೂ ಹಲವು ಪ್ರಯೋಗ ನಡೆಸಿದೆ. ಎಚ್.ಕಾಂತರಾಜು ನೇತೃತ್ವದ ಆಯೋಗದ ವೈಜ್ಞಾನಿಕ ಸಮೀಕ್ಷೆ ನಡೆಸಿದ್ದು, ಅದನ್ನು ಸ್ವೀಕರಿಸಿ ಅನುಷ್ಠಾನಗೊಳಿಸಬೇಕು. ಆದರೆ, ಸ್ವೀಕರಿಸುವ ಮುನ್ನವೇ ವರದಿಯ ಬಗ್ಗೆ ಅಪಸ್ವರವನ್ನು ಎತ್ತಿರುವುದು ಸರಿಯಲ್ಲ ಎಂದರು.
  ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಜಾತಿಗಣತಿ ಅನುಷ್ಠಾನದಿಂದ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿಯಲ್ಲಿ ಯಾವುದೇ ವ್ಯತ್ಯವಾಗುವುದಿಲ್ಲ. ಬದಲಿಗೆ ಎಲ್ಲ ಸಮುದಾಯಗಳಿಗೆ ಮೀಸಲಾತಿ ಪ್ರಮಾಣವನ್ನು ಶೇ. 50ಕ್ಕಿಂತ ಹೆಚ್ಚು ಮಾಡಲು ಗಣತಿಯ ವರದಿ ಅಗತ್ಯವಾಗಿದೆ. ಸಮ ಸಮಾಜದ ಪರಿಕಲ್ಪನೆ ಇರುವ ಸಂವಿಧಾನದ ಆಶಯಗಳಿಗೆ ಬದ್ಧರಾಗಿರುವ ಯಾರೂ ಸಹ ಜಾತಿ ಗಣತಿಯ ವರದಿಯನ್ನು ವಿರೋಧಿಸುವುದಿಲ್ಲ ಎಂದರು.
  ಶೋಷಿತ ಸಮುದಾಯದ ಮುಖಂಡರಾದ ಪ್ರೊ.ಚಂದ್ರಶೇಖರ್, ಅಮ್ಜದ್‌ಪಾಷ, ವಿಜಯಲಕ್ಷ್ಮೀ ರಘುನಂದನ್, ಎನ್.ದೊಡ್ಡಯ್ಯ, ಜೆ.ಬಿ. ಚಾರ್ಲ್ಸ್, ಸುಂಡಹಳ್ಳಿ ಮಂಜುನಾಥ್, ಸಾತನೂರು ಕೃಷ್ಣ, ಎಂ.ಎಸ್. ರಾಜಣ್ಣ, ಎಚ್.ಎಸ್.ಹನುಮಂತಯ್ಯ, ನಾಗರತ್ನ, ಶಕುಂತಲಾ, ಚನ್ನಬಸವಣ್ಣ, ಬಿ.ರಮೇಶ್, ಬಿ.ಲಿಂಗಯ್ಯ, ಪ್ರದೀಪ್, ಮಂಚಶೆಟ್ಟಿ, ಮಹೇಶ್, ರಾಜಣ್ಣ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts