ಕಾಫಿ ತೋಟ ಕೆಲಸದಲ್ಲಿ ಹಿನ್ನಡೆ

ಹಿರಿಕರ ರವಿ ಸೋಮವಾರಪೇಟೆ
ಏಪ್ರಿಲ್ ಕೊನೆ ವಾರದಲ್ಲಿ ಹಿಂಗಾರು ಮಳೆ ಉತ್ತಮವಾಗಿ ಬಿದ್ದು, ಕಾಫಿ ಗಿಡದ ಎಲೆಗಳು ಚಿಗುರಿ, ಎಲೆಚುಕ್ಕಿ ರೋಗ ಹತೋಟಿಗೆ ಬರಲು ಮೇ ಮೊದಲ ವಾರದಲ್ಲಿ ಶಿಲೀಂಧ್ರನಾಶಕವನ್ನು ಸಿಂಪಡಿಸಬೇಕು. ಆದರೆ, ಹಿಂಗಾರು ವಿಳಂಬದಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಈಗ ಅರ್ಧಂಬರ್ಧ ಚಿಗುರು ಬಂದ ಕಾಫಿ ತೋಟಗಳಿಗೆ ಸ್ಪ್ರೇ ಮಾಡುವ ಕೆಲಸ ನಡೆಯುತ್ತಿದೆ.

ಕಾಫಿ ಗಿಡಗಳಿಗೆ ರಾಸಾಯನಿಕ ಗೊಬ್ಬರ ಹಾಕುವುದು ಹಾಗೂ ಶಿಲೀಂಧ್ರನಾಶಕ ಸಿಂಪಡಣೆ ಕೆಲಸ ಮೇ ಮೊದಲ ವಾರದಲ್ಲಿ ಮುಕ್ತಾಯಗೊಂಡು, ಹಿಂಗಾರು ಮಳೆ ಉತ್ತಮವಾಗಿ ಬಿದ್ದರೆ, ಕಾಫಿ ಗಿಡಗಳಲ್ಲಿ ಚಿಗುರು ಬಂದು, ಕಾಫಿ ಕಾಯಿ ದಪ್ಪವಾಗುತ್ತದೆ. ಜೂನ್‌ನಲ್ಲಿ ಅಧಿಕ ಮಳೆ ಸುರಿದು, ಗಿಡಗಳು ಕೊಳೆರೋಗಕ್ಕೆ ತುತ್ತಾದರೂ ಕಾಫಿ ಕಾಯಿ ಉದುರುವುದಿಲ್ಲ ಎಂಬ ಕಾರಣದಿಂದ ಮೇ ಮೊದಲ ವಾರದಲ್ಲಿ ಕಾಫಿ ತೋಟದ ಕೆಲಸವನ್ನು ಮುಗಿಸುವ ಪ್ರಯತ್ನವನ್ನು ಬೆಳೆಗಾರರು ಮಾಡುತ್ತಾರೆ.

ಕಾಫಿ ಗಿಡದಲ್ಲಿ ಚಿಗುರು ಬರಬೇಕಾದರೆ ರಾಸಾಯನಿಕ ಗೊಬ್ಬರ ಹಾಕಲೇಬೇಕಾದ ಅನಿವಾರ್ಯತೆ ಒದಗಿದೆ. ಆದರೆ, ನಿಗದಿತ ಪ್ರಮಾಣದಲ್ಲಿ ಅಂದರೆ ನಾಲ್ಕೈದು ಇಂಚು ಮಳೆ ಬೀಳದ ಕಾರಣ ರಾಸಾಯನಿಕ ಗೊಬ್ಬರ ಹಾಕಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಈ ಬಾರಿಯೂ ಫಸಲು ನಷ್ಟ ಅನುಭವಿಸುವ ಆತಂಕ ಎದುರಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ಸೂಕ್ತ ಪ್ರದೇಶ ಹಾಗೂ ಉತ್ತಮ ಹವಾಮಾನ ಇರುವ ಹಿನ್ನೆಲೆಯಲ್ಲಿ ಕಾಫಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ರೋಬಸ್ಟಾ ಕಾಫಿಗೆ ಹೋಲಿಸಿದರೆ, ಅರೇಬಿಕಾ ಕಾಫಿಗೆ ಉತ್ಪಾದನಾ ವೆಚ್ಚ, ರೋಗಬಾಧೆ ಜಾಸ್ತಿ. ತೋಟ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ, ತೋಟಗಳು ರೋಗಪೀಡಿತವಾಗುತ್ತವೆ. ಈ ಕಾರಣದಿಂದ ಬೆಳೆಗಾರರು ಕಾಫಿ ತೋಟದ ನಿರ್ವಹಣೆಗೆ ಹೆಚ್ಚಿನ ಆಸಕ್ತಿ ತೋರುತ್ತಾರೆ.

ತಾಲೂಕಿನಲ್ಲಿ ಒಟ್ಟು 28,590 ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. 22,900 ಹೆ.ನಲ್ಲಿ ಅರೇಬಿಕಾ ಕಾಫಿ ಹಾಗೂ 5690 ಹೆ.ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ಕಾಫಿ ಮಂಡಳಿಯ ಪ್ರಕಾರ ತಾಲೂಕಿನಲ್ಲಿ ನಾಲ್ಕು ವಿಭಾಗಗಳಿದ್ದು, ಸೋಮವಾರಪೇಟೆಯಲ್ಲಿ 6,900 ಹೆಕ್ಟೇರ್‌ನಲ್ಲಿ ಅರೇಬಿಕಾ, 400 ಹೆ.ನಲ್ಲಿ ರೋಬಸ್ಟಾ ಸೇರಿ 7,300 ಹೆ.ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಶನಿವಾರಸಂತೆಯಲ್ಲಿ 6,740 ಹೆ.ನಲ್ಲಿ ಅರೇಬಿಕಾ, 270 ಹೆ.ನಲ್ಲಿ ರೋಬಸ್ಟಾ ಸೇರಿ 7,010, ಹೆ.ನಲ್ಲಿ ಕಾಫಿ ಬೆಳೆಯಲಾಗಿದೆ. ಸುಂಟಿಕೊಪ್ಪದಲ್ಲಿ 6,660 ಹೆ.ನಲ್ಲಿ ಅರೇಬಿಕಾ ಮತ್ತು 3,820 ಹೆ.ನಲ್ಲಿ ರೋಬಸ್ಟಾ, ಒಟ್ಟು 10,480 ಹೆ., ಮಾದಾಪುರದಲ್ಲಿ 2,600 ಹೆ. ಅರೇಬಿಕಾ ಮತ್ತು 1200 ಹೆ. ರೋಬಸ್ಟಾ ಸೇರಿ 3,800 ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಒಟ್ಟಿನಲ್ಲಿ ಹಿಂಗಾರು ವಿಳಂಬ ಅರೇಬಿಕಾ ಕಾಫಿ ಬೆಳೆಗಾರರ ನಿದ್ದೆಗೆಡಿಸಿದೆ.

ಎಲೆ ಚುಕ್ಕಿರೋಗಕ್ಕೆ ಮುಂಗಾರಿನ ಮುಂಚೆ ಸಿಲೀಂದ್ರನಾಶಕ ಸಿಂಪಡಿಸಿ. ಸೆಲೆಕ್ಷನ್ 9, ಕಟುವಾಯಿ, ಚಂದ್ರಗಿರಿ ತಳಿಗಳಿಗೆ ಒಂದು ಕೆ.ಜಿ. ಮೈಲುತುತ್ತು ಹಾಗೂ ಒಂದು ಕೆ.ಜಿ.ಸುಣ್ಣವನ್ನು, 200 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸೆಲೆಕ್ಷನ್ 6,795, ಕಾವೇರಿ ತಳಿಗಳಿಗೆ ಕಾಂಟಾಫ್, ಕಾಂಟಾಫ್ ಪ್ಲಸ್ ಶಿಲೀಂಧ್ರ ನಾಶಕವನ್ನು 200 ಲೀಟರ್ ನೀರಿಗೆ 400 ಮಿಲಿಯನ್ನು ವಿಶ್ರಣ ಮಾಡಿ ಎಲೆಯ ತಳಭಾಗಕ್ಕೆ ಸಿಂಪಡಿಸಬೇಕು.
ಮುರುಳಿಧರ್, ಹಿರಿಯ ಸಂಪರ್ಕಾಧಿಕಾರಿ, ಕಾಫಿ ಮಂಡಳಿ


ಕಾಫಿ ಕಾಯಿಗಳು ಬಲಿಯಬೇಕಾದರೆ, ಪೋಷಕಾಂಶಗಳ ಅವಶ್ಯಕತೆ ಇದೆ. ಮೇ ಮೊದಲ ವಾರದಲ್ಲಿ ಸ್ಪ್ರೇ ಕೆಲಸ ಮುಗಿಯಬೇಕು. ಎರಡನೇ ವಾರದಲ್ಲಿ ಗಿಡಗಳಿಗೆ ರಾಸಾಯನಿಕ ಗೊಬ್ಬರವನ್ನು ಹಾಕಬೇಕು. ಆದರೆ, ಹಿಂಗಾರು ವಿಳಂಬದಿಂದ ತೋಟದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕಳೆದ ಸಾಲಿನಲ್ಲಿ ಅತಿವೃಷ್ಟಿಯಿಂದ ಫಸಲು ಕಳೆದುಕೊಂಡಿದ್ದೇವೆ. ಸರ್ಕಾರದಿಂದ ಪರಿಹಾರವೂ ಸಿಕ್ಕಿಲ್ಲ. ಈ ವರ್ಷವೂ ಫಸಲು ನಷ್ಟದ ಭೀತಿಯಿದೆ.
ದಯಾನಂದ, ಕಾಫಿ ಬೆಳೆಗಾರ, ಮಸಗೋಡು ಗ್ರಾಮ