ಘಟಪ್ರಭಾ: ಹುಬ್ಬಳ್ಳಿ ಮೂರುಸಾವಿರ ಮಠದ ಪೀಠಕ್ಕೆ ಉತ್ತರಾಧಿಕಾರಿಯಾಗಿ ಬೇರೆಯವರನ್ನು ತರಲು ಕೆಲವರು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಅದು ಎಂದಿಗೂ ಸಾಧ್ಯವಿಲ್ಲ. ಹಿಂದೆ ಡಾ. ಮೂಜಗಂ ಗುರುಗಳು ಮಲ್ಲಿಕಾರ್ಜುನ ಶ್ರೀಗಳನ್ನು ಉತ್ತಾರಾಧಿಕಾರಿಯಾಗಿ ನೇಮಿಸಿ ಬರೆದಿರುವ ಪತ್ರ ಇನ್ನೂ ಇದೆ. ಒಂದು ವೇಳೆ ಬೇರೆಯವರನ್ನು ಉತ್ತರಾಧಿಕಾರಿಯಾಗಿ ಮಾಡಿದರೆ ಮತ್ತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಘಟಪ್ರಭಾ ಭಕ್ತರು ಎಚ್ಚರಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಶ್ರೀಗಳನ್ನು ಮೂರುಸಾವಿರ ಮಠಕ್ಕೆ ಉತ್ತಾರಾಧಿಕಾರಿಯಾಗಿ ತರಲು ಗುರುವಾರ ಸಭೆ ನಡೆಸಿದ ಬಗ್ಗೆ ಚರ್ಚಿಸಲು ಶುಕ್ರವಾರ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದಲ್ಲಿ ಸಭೆ ಜರುಗಿತು. ಸಭೆಯಲ್ಲಿ ಗ್ರಾಮದ ಹಿರಿಯ ಮುಖಂಡ ಸುಭಾಸ ಹುಕ್ಕೇರಿ ಮಾತನಾಡಿ, ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಯೊಬ್ಬರನ್ನು ಉತ್ತರ ಕರ್ನಾಟಕದ ಪ್ರತಿಷ್ಠಿತ ಹುಬ್ಬಳ್ಳಿ ಮೂರು ಸಾವಿರಮಠಕ್ಕೆ ತರಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.
ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಈಗಿನ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಶ್ರೀಗಳ ಸಮ್ಮುಖದಲ್ಲಿಯೇ ಹಿಂದೆ ಲಿಂಗೈಕ್ಯ ಡಾ. ಮೂಜಗಂ ಗುರುಗಳು ಮಲ್ಲಿಕಾರ್ಜುನ ಶ್ರೀಗಳನ್ನು ಮೂರು ಸಾವಿರ ಮಠಕ್ಕೆ ಉತ್ತರಾಧಿಕಾರಿಯಾಗಿಸಿ ಪತ್ರ ತಯಾರಿಸಿ ಮೂರು ಸಾವಿರ ಮಠದ ನಿಯಮದ ಪ್ರಕಾರ ನೋಂದಣಿ ಮಾಡಿಸಿದ ದಾಖಲೆಗಳಿವೆ. ಅದಕ್ಕೆ ಸಾಕ್ಷಿಯಾಗಿ ಸಹಿ ಮಾಡಿದ ಹಲವಾರು ಇನ್ನೂ ಇದ್ದಾರೆ ಎಂದರು. ಮಠಕ್ಕೆ ಬೇರೆಯವರನ್ನು ಉತ್ತರಾಧಿಕಾರಿ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಉತ್ತರಾಧಿಕಾರಿಯನ್ನಾಗಲಿ ಅಥವಾ ಕಿರಿಯ ಸ್ವಾಮೀಜಿಗಳನ್ನು ನೇಮಿಸಿಕೊಳ್ಳುವುದಾದರೆ ಮಲ್ಲಿಕಾರ್ಜುನ ಶ್ರೀಗಳನ್ನೇ ನೇಮಿಸಬೇಕು. ಈ ಪ್ರಕರಣ ನ್ಯಾಯಾಲಯದಲ್ಲಿದೆ. ಆ ಬಗ್ಗೆ ಈಗ ಚರ್ಚೆ ಅಪ್ರಸ್ತುತ ಎಂದರು.
ಮಲ್ಲಿಕಾರ್ಜುನ ಶ್ರೀಗಳು ಸಂಪೂರ್ಣವಾಗಿ ನಶಿಸಿ ಹೋಗುತ್ತಿದ್ದ ಘಟಪ್ರಭಾ ಗುಬ್ಬಲಗುಡ್ಡ ಮಠಕ್ಕೆ ಬಂದು ಕೇವಲ 8 ವರ್ಷದಲ್ಲಿ ಉತ್ತಮ ಬದಲಾವಣೆ ಮಾಡಿದ್ದಾರೆ. ಆದ್ದರಿಂದ ಮುಂದೆ ಮಲ್ಲಿಕಾರ್ಜುನ ಶ್ರೀಗಳನ್ನೇ ಹುಬ್ಬಳ್ಳಿ ಮೂರುಸಾವಿರ ಮಠಕ್ಕೆ ಪೀಠಾಧಿಕಾರಿಯಾಗಿ ಮಾಡಿದರೆ, ಮಠದ ಗತವೈಭವ ಮರಳಿ ಕಾಣಲು ಸಾಧ್ಯ. ಶೀಘ್ರದಲ್ಲಿಯೇ ಸುತ್ತಮುತ್ತಲಿನ ಗ್ರಾಮದ ಒಂದು ಸಾವಿರಕ್ಕೂ ಹೆಚ್ಚು ಜನರು ಹುಬ್ಬಳ್ಳಿಗೆ ತೆರಳಿ ಜಗದ್ಗುರುಗಳನ್ನು ಭೇಟಿ ಮಾಡುತ್ತೇವೆ ಎಂದು ಸುಭಾಸ ಹುಕ್ಕೇರಿ ತಿಳಿಸಿದರು.
ಗ್ರಾಮದ ಮುಖಂಡರಾದ ಶಂಕರಪ್ಪ ಹತ್ತರವಾಟ, ಡಿ.ಎಂ.ದಳವಾಯಿ, ಗಂಗಾಧರ ಬಡಕುಂದ್ರಿ, ಕೆಂಪಣ್ಣ ಕಾಡದವರ, ಗೋವಿಂದ ತುಕ್ಕಾನಟ್ಟಿ, ಈಶ್ವರ ಮಟಗಾರ, ಎಸ್.ಐ.ಬೆನವಾಡಿ, ಕಾಡಪ್ಪ ಕಾರೋಶಿ, ಪರಶುರಾಮ ಕಲಕುಟಗಿ, ಭೀಮಶಿ ಕಮತ, ಮಾರುತಿ ವಿಜಯನಗರ, ರಾಜು ವಾಲಿಕರ, ವಿಠಲ ಭಂಗಿ, ಶಿವಪ್ಪ ಕಮತ (ಗೌಡರ), ಗುರುಲಿಂಗ ಮಲ್ಲಾಪುರೆ, ಭೀಮಗೌಡ ಪಾಟೀಲ ಹಾಗೂ ಘಟಪ್ರಭಾ, ಮಲ್ಲಾಪುರ, ಧುಪದಾಳ, ಪಾಮಲದಿನ್ನಿ, ಬಡಿಗವಾಡ, ಗುಡಸ, ಶಿರಢಾಣ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.