More

  ಶಿಶು ಮಾರಾಟ ಜಾಲ ಇನ್ನಷ್ಟು ವಿಸ್ತಾರ; ಸಿಸಿಬಿ ಬಲೆಗೆ ನಕಲಿ ವೈದ್ಯ, ಏಜೆಂಟ್

  ಬೆಂಗಳೂರು: ರಾಜ್ಯದಲ್ಲಿ ಬೆಳಕಿಗೆ ಬಂದಿರುವ ನವಜಾತ ಶಿಶುಗಳ ಮಾರಾಟ ಜಾಲ ಬಗೆದಷ್ಟೂ ಆಳಕ್ಕೆ ಹೋಗುತ್ತಿದೆ. ಪ್ರಕರಣದ ಕಾರ್ಯಾಚರಣೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ನಕಲಿ ವೈದ್ಯ ಸೇರಿ ಇನ್ನಿಬ್ಬರನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತ ಆರೋಪಿಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದ್ದು, ಮತ್ತಷ್ಟು ಜನರ ಬಂಧನವಾಗುವುದು ನಿಶ್ಚಿತವಾಗಿದೆ. ರಾಜಾಜಿನಗರದ ಕೆವಿನ್ ಮತ್ತು ಮಾಗಡಿ ರಸ್ತೆಯ ರಮ್ಯಾ ಬಂಧಿತರು. ಆರೋಪಿಗಳಿಂದ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ನವಜಾತ ಶಿಶು ಮಾರಾಟ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳ ವಿಚಾರಣೆ ವೇಳೆ ಲಭ್ಯವಾದ ಮಾಹಿತಿ ಆಧರಿಸಿ ಈ ಇಬ್ಬರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಡಿಸಿಪಿ ಶ್ರೀನಿವಾಸ ಗೌಡ ಮಾಹಿತಿ ನೀಡಿದ್ದಾರೆ.

  ವೈದ್ಯಕೀಯ ಶಿಕ್ಷಣ (ಎಂಬಿಬಿಎಸ್) ಅರ್ಧಕ್ಕೇ ಮೊಟಕುಗೊಳಿಸಿದ್ದ ಕೆವಿನ್, ವೈದ್ಯರೊಬ್ಬರ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ನಂತರ ರಾಜಾಜಿನಗರ 6ನೇ ಬ್ಲಾಕ್ ಭುವನೇಶ್ವರನಗರದಲ್ಲಿ ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿದ್ದ. ಹಲವು ವರ್ಷಗಳಿಂದ ಈತನಿಗೆ ನವಜಾತ ಶಿಶು ಮಾರಾಟ ಜಾಲದ ಜತೆ ಸಂಪರ್ಕ ಬೆಳೆದಿತ್ತು. ದಂಧೆಯಲ್ಲಿ ನಕಲಿ ಜನನ ಪ್ರಮಾಣ ಪತ್ರ ಪಡೆಯಲು ದಂಧೆಕೋರರಿಗೆ ಕೆವಿನ್ ನೆರವಾಗಿದ್ದ. ಜನನ ಪ್ರಮಾಣ ಪತ್ರಕ್ಕೆ ಸಲ್ಲಿಸುವ ಅರ್ಜಿಗೆ ವೈದ್ಯನೆಂದು ಸಹಿ ಮಾಡುತ್ತಿದ್ದ.

  ಈ ದಾಖಲೆ ಆಧರಿಸಿ ಬಿಬಿಎಂಪಿ ಮತ್ತು ಕಂದಾಯ ಇಲಾಖೆಗೆ ಮಗುವಿನ ಹೆಸರಿನಲ್ಲಿ ಅರ್ಜಿ ಸಲ್ಲಿಸಿ ಜನನ ಪ್ರಮಾಣ ಪತ್ರವನ್ನು ದಂಧೆಕೋರರು ಪಡೆದು ಶಿಶು ಖರೀದಿ ಮಾಡುತ್ತಿದ್ದವರಿಗೆ ನೀಡುತ್ತಿದ್ದರು. ಒಂದು ಪ್ರಮಾಣ ಪತ್ರಕ್ಕೆ ಸಹಿ ಮಾಡಿದರೆ 30 ರಿಂದ 50 ಸಾವಿರ ರೂ. ಪಡೆಯುತ್ತಿದ್ದ.

  ರಾಜರಾಜೇಶ್ವರಿನಗರದಲ್ಲಿ ನವಜಾತ ಶಿಶು ಮಾರಾಟಕ್ಕೆ ಯತ್ನಿಸಿದ್ದಾಗ ತಮಿಳುನಾಡಿನ ಗ್ಯಾಂಗ್ ಅನ್ನು ಬಂಧಿಸಲಾಗಿತ್ತು. ಬಂಧಿತ ಎಂಟು ಆರೋಪಿಗಳು ವಿಚಾರಣೆ ವೇಳೆ ಮಾರಾಟ ಮಾಡಿದ ಮಕ್ಕಳಿಗೆ ಜನನ ಪ್ರಮಾಣ ಪತ್ರ ಪಡೆಯಲು ನೆರವಾಗಿದ್ದ ಕೆವಿನ್ ಮತ್ತು ಗಂಡು ಶಿಶು ಮಾರಾಟ ಮಾರಾಟದಲ್ಲಿ ಏಜೆಂಟ್ ಆಗಿದ್ದ ರಮ್ಯಾಳ ಕುರಿತು ಬಾಯ್ಬಿಟ್ಟಿದ್ದರು. ಈ ಸುಳಿವು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

  ಗಂಡು ಮಗು 2.30 ಲಕ್ಷಕ್ಕೆ ಸೇಲ್: ರಮ್ಯಾಳ ದೂರದ ಸಂಬಂಧಿ ಯುವತಿ, ಅಕ್ರಮ ಸಂಬಂಧದಲ್ಲಿ ಗರ್ಭವತಿಯಾಗಿದ್ದಳು. ಆಕೆ ಗರ್ಭಪಾತಕ್ಕೆ ಮುಂದಾಗಿದ್ದಳು. ಈ ಸಂಗತಿ ತಿಳಿದ ರಮ್ಯಾ, ಆ ಯುವತಿಯನ್ನು ಸಂರ್ಪಸಿ ನಾಜೂಕಿನ ಮಾತಿನ ಮೂಲಕ ಹಣದಾಸೆ ತೋರಿಸಿ ಆಕೆಯನ್ನು ಒಲೈಸಿಕೊಂಡಿದ್ದಳು. ಬಳಿಕ ತನ್ನ ಆಶ್ರಯದಲ್ಲಿ 9 ತಿಂಗಳು ಆರೈಕೆ ಮಾಡಿದ್ದಳು. ಆ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಮಗುವನ್ನು ತಮಿಳುನಾಡಿನ ಈರೋಡ್​ನ ರಾಧಾ ಗ್ಯಾಂಗ್​ಗೆ ಮಾರಾಟ ಮಾಡಿ 2.30 ಲಕ್ಷ ರೂ. ಪಡೆದುಕೊಂಡಿದ್ದಳು. ಬಂದ ಹಣದಲ್ಲಿ ಯುವತಿಗೆ ಒಂದಿಷ್ಟು ಹಣ ಕೊಟ್ಟು ಸುಮ್ಮನಾಗಿಸಿದ್ದಳು.

  ಶಿಶು ಮಾರಾಟ ಜಾಲ ಇನ್ನಷ್ಟು ವಿಸ್ತಾರ; ಸಿಸಿಬಿ ಬಲೆಗೆ ನಕಲಿ ವೈದ್ಯ, ಏಜೆಂಟ್

  ತನ್ನ ಮಗುವನ್ನೇ ಮಾರಿದ್ದಳು!: ನವಜಾತ ಶಿಶು ಮಾರಾಟ ದಂಧೆಯಲ್ಲಿ ಏಜೆಂಟ್ ಆಗಿ 10 ವರ್ಷಗಳಿಂದ ರಮ್ಯಾ ಸಕ್ರಿಯ ಆಗಿದ್ದಾಳೆ. ಈ ಹಿಂದೆ ರಮ್ಯಾ, ಬಾಡಿಗೆ ತಾಯ್ತನದಲ್ಲಿ ಗಂಡು ಮಗುವನ್ನು ಹೆತ್ತು ಮಾರಾಟ ಮಾಡಿದ್ದಳು. ಆನಂತರ ಇತರ ಸಹಚರರೊಂದಿಗೆ ಸೇರಿಕೊಂಡು ಏಜೆಂಟ್ ಕೆಲಸ ಮಾಡುತ್ತಿದ್ದಳು.

  ಮೈಸೂರು, ಮಂಡ್ಯದಲ್ಲಿ ತನಿಖೆ ಚುರುಕು: ಭ್ರೂಣಲಿಂಗ ಪತ್ತೆ ಹಾಗೂ ಭ್ರೂಣಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಭ್ರೂಣಹತ್ಯೆ ತಡೆ ಕಾಯ್ದೆಯ ರಾಜ್ಯ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಬುಧವಾರ ಮೈಸೂರು ಹಾಗೂ ಮಂಡ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ಮಕ್ಕಳು ಮತ್ತು ಸಂತಾನೋತ್ಪತ್ತಿ ಯೋಜನಾ ನಿರ್ದೇಶಕ ಡಾ. ಶ್ರೀನಿವಾಸ್ ನೇತೃತ್ವದ ತಂಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ಅವರಿಂದ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿತು. ಮಂಡ್ಯ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೂ ಡಾ.ಶ್ರೀನಿವಾಸ್ ಚರ್ಚೆ ನಡೆಸಿದರು. ಬಳಿಕ ವಿಡಿಯೋ ಕಾನ್ಪರೆನ್ಸ್ ಮೂಲಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಮಾಹಿತಿ ಹಂಚಿಕೊಂಡರು.

  ಹೆಣ್ಣುಭ್ರೂಣ ಹತ್ಯೆ ಪ್ರಕರಣ ಅಮಾನವೀಯ ಘಟನೆ. ಇದರಲ್ಲಿ ಆಡಳಿತ ವ್ಯವಸ್ಥೆಯ ವೈಫಲ್ಯ ಎದ್ದು ಕಾಣುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾಗಿ ರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮುಂದೆ ಈ ರೀತಿ ಆಗಬಾರದು ಪಾಲಕರಿಗೂ ಮನವಿ ಮಾಡುತ್ತೇನೆ.

  | ಎಚ್.ಡಿ. ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts