ಒಡಿಶಾದಲ್ಲಿ ಚಂಡಮಾರುತ ಹಾವಳಿ ಇಟ್ಟ ಸಂದರ್ಭದಲ್ಲೇ ಜನಿಸಿದ ಹೆಣ್ಣುಮಗುವಿಗೆ ಫೊನಿ ಎಂದು ನಾಮಕರಣ

ಭುವನೇಶ್ವರ: ಯಾವುದೋ ವಿಶೇಷ ಸಂದರ್ಭದಲ್ಲಿ ಮಗು ಜನಿಸಿದರೆ, ಆ ಮಗುವಿಗೆ ಆ ವಿಶೇಷ ಸಂದರ್ಭದ ಅಥವಾ ಯಾರಾದರೂ ಮಹಾತ್ಮರ ಜನ್ಮಶತಮಾನೋತ್ಸವ ಆಗಿದ್ದರೆ, ಆ ಮಹಾತ್ಮರ ಹೆಸರನ್ನು ನಾಮಕರಣ ಮಾಡುವುದು ಸಹಜ. ಒಡಿಶಾದಲ್ಲಿ ಈ ಪ್ರತೀತಿಯನ್ನು ಮುಂದುವರಿಸಿ, ಮೇನಲ್ಲಿ ವಿಶೇಷವಾಗಿ ರಾಜ್ಯಕ್ಕೆ ಅಪ್ಪಳಿಸಿದ ಚಂಡಮಾರುತದ ಹೆಸರನ್ನೇ ಮಗುವಿಗೆ ನಾಮಕರಣ ಮಾಡಲಾಗಿದೆ.

ಆಗಿದ್ದೇನೆಂದರೆ, ಮಂಚೇಶ್ವರದಲ್ಲಿರುವ ರೈಲ್ವೆ ಬೋಗಿ ದುರಸ್ತಿ ವರ್ಕ್​ಶಾಪ್​ನ ಉದ್ಯೋಗಿಯಾಗಿರುವ 32 ವರ್ಷದ ಮಹಿಳೆಯನ್ನು ಶುಕ್ರವಾರ ಬೆಳಗ್ಗೆ ಪ್ರಸವಕ್ಕಾಗಿ ಭುವನೇಶ್ವರದ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆ 11.03ಕ್ಕೆ ಆಕೆ ಹೆಣ್ಣುಮಗುವಿಗೆ ಜನ್ಮನೀಡಿದರು.

ಶಿಶು ಮತ್ತು ಬಾಣಂತಿ ಇಬ್ಬರೂ ಆರೋಗ್ಯವಾಗಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಒಡಿಶಾ ರಾಜ್ಯಕ್ಕೆ ವಿಶೇಷವಾಗಿ ಮೇನಲ್ಲಿ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆಯಲ್ಲಿ ಆ ಮಗುವಿಗೆ ಫೊನಿ ಎಂದು ನಾಮಕರಣ ಮಾಡಲು ನಿರ್ಧರಿಸಿದ್ದಾಗಿ ಬಾಣಂತಿಯ ಕುಟುಂಬ ವರ್ಗದವರು ತಿಳಿಸಿದ್ದಾರೆ. (ಏಜೆನ್ಸೀಸ್​)