ನಿನ್ನ ಮಿತಿ ಮೀರಬೇಡ ಎಂದು ಪಾಕ್​ ಕ್ರಿಕೆಟಿಗನಿಂದ ಟಿವಿ ಆ್ಯಂಕರ್​ಗೆ ಖಡಕ್​ ವಾರ್ನಿಂಗ್​

ನವದೆಹಲಿ: ಪಾಕಿಸ್ತಾನದ ಯುವ ಆಟಗಾರ ಬಾಬರ್​ ಅಜಾಮ್​ ತನ್ನ ಮೊದಲ ಟೆಸ್ಟ್​ ಶತಕದ ಸಂಭ್ರಮದಲ್ಲಿದ್ದಾರೆ. ಈ ಬಗ್ಗೆ ವ್ಯಂಗ್ಯವಾಗಿ ಕಾಮೆಂಟ್​ ಮಾಡಿದ ಪಾಕಿಸ್ತಾನಿ ಆ್ಯಂಕರ್​ ವಿರುದ್ಧ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಬಾಬರ್​ ಅಜಾಮ್​ರನ್ನು ಪಾಕಿಸ್ತಾನ ತಂಡದ ಕೋಚ್​ ಮಿಕ್ಕಿ ಅರ್ಥರ್​ ಮಗನೆಂದು ಉಲ್ಲೇಖಿಸಿ ಪಾಕಿಸ್ತಾನಿ ಆ್ಯಂಕರ್​ ಜೈನಾಬ್​ ಅಬ್ಬಾಸ್​ ಅವರು ಬಾಬರ್​ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನ್ಯೂಜಿಲೆಂಡ್​ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯ ಮೊದಲ ಇನ್ನಿಂಗ್ಸ್​ನಲ್ಲಿ ಉತ್ತಮ ಪ್ರದರ್ಶನ ತೋರಿದ ಪಾಕಿಸ್ತಾನ 5 ವಿಕೆಟ್​ ನಷ್ಟಕ್ಕೆ 418 ರನ್​ ಗಳಿಸಿ ಭಾನುವಾರ ಡಿಕ್ಲೇರ್ ಘೋಷಿಸಿತ್ತು. ತಂಡದ ಪರ ಹ್ಯಾರಿಸ್​ ಸೋಹೈಲ್​(147) ಹಾಗೂ ಬಾಬರ್​ ಅಜಾಮ್​(127*) ರನ್​ ಗಳಿಸಿದ್ದರು.​

ಬಾಬರ್​ ಪಾಕ್​ ತಂಡದ ಬಹು ನಿರೀಕ್ಷಿತ ಆಟಗಾರನಾಗಿದ್ದು, ಕೋಚ್​ ಅರ್ಥರ್​ ಬಾಬರ್​ನನ್ನು ವಿರಾಟ್​ ಕೊಹ್ಲಿಗೆ ಹೋಲಿಸಿ, ಈ ಹಿಂದೆಯೇ ಪ್ರಶಂಸೆ ವ್ಯಕ್ತಪಡಿಸಿದ್ದರು. ಕೇವಲ 54 ಏಕದಿನ ಪಂದ್ಯಗಳಲ್ಲಿ 8 ಶತಕ ಹಾಗೂ ಅರ್ಧಶತಕವನ್ನು ಗಳಿಸಿರುವ ಬಾಬರ್​ ಇದುವರೆಗೂ ಟೆಸ್ಟ್​ನಲ್ಲಿ ಒಂದು ಶತಕವನ್ನು ಸಿಡಿಸಿರಲಿಲ್ಲ. ಅದು ಭಾನುವಾರ ನ್ಯೂಜಿಲೆಂಡ್​ ವಿರುದ್ಧ ಸಾಧ್ಯವಾಯಿತು. ಇದನ್ನು ಪಾಕ್​ನ ಅನೇಕ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಆದರೆ, ಪಾಕಿಸ್ತಾನಿ ಆ್ಯಂಕರ್​ ಜೈನಬ್ ಅಬ್ಬಾಸ್ ಒಳ್ಳೆಯ ಆಟವಾಗಿದ್ದು, ಕೋಚ್​ ಮಿಕ್ಕಿ ಅರ್ಥರ್​ ತಮ್ಮ ಮಗನ ಶತಕವನ್ನು ಸಂಭ್ರಮಿಸುತ್ತಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಾಬರ್​ ನಿನ್ನ ಮಿತಿಯನ್ನು ಮೀರುವ ಪ್ರಯತ್ನ ಮಾಡಬೇಡ ಎಂದು ಕಿಡಿಕಾರಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ​ ಎರಡನೇ ಟೆಸ್ಟ್​ ಪಂದ್ಯದಲ್ಲಿ 5 ವಿಕೆಟ್​ಗೆ 418 ರನ್​ ಗಳಿಸಿ ಡಿಕ್ಲೇರ್​ ತೆಗೆದುಕೊಂಡಿದ್ದು, ಮೊದಲ ಇನ್ನಿಂಗ್ಸ್​ನಲ್ಲಿ ನ್ಯೂಜಿಲೆಂಡ್​ 90 ರನ್​ಗೆ​ ಸರ್ವಪತನ ಕಂಡು ಫಾಲೋ ಆನ್​ ಭೀತಿಯಲ್ಲಿದೆ. ಸದ್ಯ ಎರಡನೇ ಇನ್ನಿಂಗ್ಸ್​ನಲ್ಲಿ 2 ವಿಕೆಟ್​ಗೆ 131 ರನ್​ ಗಳಿಸಿ ಕ್ರೀಸ್​ ಕಾಯ್ದುಕೊಂಡಿದೆ. ನ್ಯೂಜಿಲೆಂಡ್​ 1-0 ಅಂತರದಲ್ಲಿ ಟೆಸ್ಟ್​ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. (ಏಜೆನ್ಸೀಸ್​)