ರೈತರ ಮೆಟ್ರಿಕ್ ಟನ್ ಕಬ್ಬಿಗೆ 2300 ರೂ. ನಿಗದಿ

ವಿಜಯಪುರ: ಜಿಲ್ಲೆ ಪ್ರತಿಷ್ಠಿತ ಕಾರ್ಖಾನೆಗಳಲ್ಲೊಂದಾದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 2300 ರೂ. ದರ ಘೊಷಣೆ ಮಾಡಲಾಯಿತು.

2018-19ನೇ ಸಾಲಿಗೆ ಕಾರ್ಖಾನೆಗೆ ಪೂರೈಕೆಯಾಗುವ ಕಬ್ಬಿಗೆ ಸಾರಿಗೆ ಮತ್ತು ಕಟಾವು ಹೊರತುಪಡಿಸಿ ಮೊದಲ ಕಂತು 2300 ರೂ. ನೀಡುವುದಾಗಿ ಅಧ್ಯಕ್ಷ ಶಶಿಕಾಂತಗೌಡ ಬಿ. ಪಾಟೀಲ ಘೊಷಿಸಿದರು.

ಮಂಗಳವಾರ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಕಬ್ಬು ಬೆಳೆಗಾರರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ವರ್ಷ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಕಬ್ಬು ಬೆಳೆಗಾರರಿಗೆ ಮಾದರಿ ಬೆಲೆ ನೀಡಲಾಗುತ್ತಿದೆ. ಅದೇ ರೀತಿ ಈ ಬಾರಿ ಸಹ ಸಮರ್ಪಕ ಬೆಲೆ ನಿಗದಿ ಮಾಡುತ್ತಿರುವುದಾಗಿ ತಿಳಿಸಿದರು.

ಆಡಳಿತ ಮಂಡಳಿ ನಿರ್ದೇಶಕರು ಕಬ್ಬಿನ ಬಿಲ್ ಪಾವತಿಸುವ ಹಾಗೂ ಕಬ್ಬು ಪೂರೈಕೆ ಕುರಿತು ಸಭಾಧ್ಯಕ್ಷರ ಗಮನ ಸೆಳೆದರು. ವ್ಯವಸ್ಥಾಪಕ ನಿರ್ದೇಶಕ ರಾಜಗೋಪಾಲ್ ಮಾತನಾಡಿ, ಈ ಭಾಗದ ರೈತರು ಹಾಗೂ ಹಿರಿಯರು ಕಬ್ಬಿನ ಬೆಲೆ ಪಾವತಿಸುವ ಪೂರ್ವದಲ್ಲಿ ಆಡಳಿತ ಮಂಡಳಿಯವರ ಜೊತೆ ಸಮಾಲೋಚಿಸಬೇಕು. ಕಾರ್ಖಾನೆಯ ಅಭಿವೃದ್ಧಿ ಪರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ರೈತರು ಸಹ ಅಭಿವೃದ್ಧಿಗೆ ತಮ್ಮ ಕಬ್ಬಿನ ಬಿಲ್​ನಲ್ಲಿ ಹಣ ನೀಡುತ್ತಿರುವುದರಿಂದ ಕಾರ್ಖಾನೆ ಪ್ರಗತಿ ಪಥದತ್ತ ಸಾಗಲು ಸಹಕಾರಿಯಾಗಿದೆ ಎಂದರು.

ರೈತರಿಗೆ ಕಬ್ಬಿನ ಬಿಲ್ ಸಮರ್ಪಕವಾಗಿ ನೀಡಬೇಕೆಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ದೇಸಾಯಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಶಶಿಕಾಂತಗೌಡ, 2018-19 ನೇ ಸಾಲಿಗೆ ಕಾರ್ಖಾನೆಗೆ ಪೂರೈಕೆಯಾಗುತ್ತಿರುವ ಕಬ್ಬಿಗೆ ಮೊದಲನೇ ಬಿಲ್ 2,300 ರೂ.ಗಳಂತೆ ಸಂದಾಯ ಮಾಡಲಾಗುವುದು. ಇದರಲ್ಲಿ 100 ರೂ. ನಿಯೋಜಿತ ವಿಸ್ತರಣಾ ಯೋಜನೆಯ ಠೇವು ತೆಗೆದುಕೊಳ್ಳಲಾಗುವುದು. ಈ ಮೊತ್ತವು ಕಬ್ಬು ಕಟಾವು ಮತ್ತು ಸಾರಿಗೆ ಹೊರತುಪಡಿಸಿ ಇರುವುದಾಗಿ ತಿಳಿಸಿದರು.

ಮುಖಂಡರಾದ ಸಿ.ಬಿ. ಕೋರಡ್ಡಿ, ಆರ್.ಟಿ. ಪಾಟೀಲ, ಲಕ್ಷ್ಮಣ ದೊಡಮನಿ, ವೆಂಕನಗೌಡ ಪಾಟೀಲ, ಭೀಮಶಿ ಜೀರಗಾಳ, ರಾಚಪ್ಪ ಕಾಳಪ್ಪಗೋಳ, ಪುಟ್ಟು ಗಡದಾನ, ಸುರೇಶ ಕೊಡಬಾಗಿ, ಉಪಾಧ್ಯಕ್ಷ ತಿಮ್ಮಣ್ಣ ಅಮಲಝುರಿ, ನಿರ್ದೇಶಕ ಎಚ್.ಆರ್. ಬಿರಾದಾರ, ರಮೇಶ ಶೇಬಾಣಿ, ಜಿ.ಕೆ. ಕೋನಪ್ಪನವರ, ವಿ.ಎಚ್. ಬಿದರಿ, ರಮೇಶ ಜಕರಡ್ಡಿ, ಸಿದ್ದಣ್ಣ ದೇಸಾಯಿ, ಹಣಮಂತ ಕೊಣ್ಣೂರ, ಆನಂದ ಮಂಗಳವೇಡೆ, ಶೇಖರ ಕೊಪ್ಪದ, ಹಣಮಂತ ಕಡಪಟ್ಟಿ, ಗೋಪಾಲ ನಾಯ್ಕರ, ರಾಮಪ್ಪ ಹರಿಜನ, ಲತಾ ವೆಂಕನಗೌಡ ಬಿರಾದಾರಪಾಟೀಲ, ಸುರೇಖಾ ಬಿ. ನಿಡೋಣಿ ಮತ್ತು ಪಿ.ಜಿ. ಘಾಳಿ, ಸುಭಾಸ ಪಾಟೀಲ ಇತರರಿದ್ದರು.