ಮಹೋನ್ನತಿ ಸಾರಿದ ಧರ್ಮಸಂಸ್ಕೃತಿ ಸಂಗಮ

| ರವೀಂದ್ರ ಎಸ್. ದೇಶಮುಖ್

ಕಗ್ಗೋಡು (ವಿಜಯಪುರ): ಮತಿ (ಬುದ್ಧಿ), ಭಕ್ತಿ, ಕೃತಿ ಮತ್ತು ಪ್ರಕೃತಿಗಳ ಸಮನ್ವಯವೇ ಸಂಸ್ಕೃತಿ. ನಮ್ಮ ಧರ್ಮ, ನಮ್ಮ ಸಂಸ್ಕೃತಿ ಎಂಬುದು ಅಭಿಮಾನದ ದ್ಯೋತಕ. ಹಾಗಾಗಿ, ಈ ಮೌಲ್ಯಗಳು ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಖ್ಯಾತ ಯೋಗಗುರು ಬಾಬಾ ರಾಮದೇವ್ ಹೇಳಿದರು.

ಭಾರತೀಯ ಸಂಸ್ಕೃತಿ ಉತ್ಸವದ ಕೊನೆಯ ದಿನವಾದ ಸೋಮವಾರ ನಡೆದ ಧರ್ಮ ಮತ್ತು ಸಂಸ್ಕೃತಿ ಸಂಗಮದಲ್ಲಿ ಅವರು ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದ ಈಗಾಗಲೇ ಸಾಕಷ್ಟು ಹಾನಿ ಅನುಭವಿಸಿದ್ದೇವೆ. ಸ್ವದೇಶಿ ಜೀವನಶೈಲಿ ಅಳವಡಿಸಿಕೊಂಡು ವ್ಯಷ್ಟಿ, ಸಮಷ್ಟಿಯನ್ನು ಮತ್ತೆ ಬಲಶಾಲಿಯಾಗಿಸುವ ಮೂಲಕ ಭಾರತವನ್ನು ವಿಶ್ವಗುರುವಾಗಿಸುವ ಸಂಕಲ್ಪಕ್ಕೆ ಇದು ಸಕಾಲ ಎಂದರು.

ದೇಶದ ಪ್ರಧಾನಿಯೇ ಸಮಯ ಮಾಡಿಕೊಂಡು ಯೋಗ ಮಾಡಿ, ದಿನಕ್ಕೆ 18 ಗಂಟೆ ಕೆಲಸ ಮಾಡುವಾಗ ಸಾಮಾನ್ಯ ಜನರಿಗೆ ಯೋಗ ಅಳವಡಿಸಿಕೊಳ್ಳಲು ಏನು ಸಮಸ್ಯೆ? ಕರ್ನಾಟಕವನ್ನು ಯೋಗಮಯವನ್ನಾಗಿ ಮಾಡಲು ಮುಂಬರುವ ದಿನಗಳಲ್ಲಿ ಪತಂಜಲಿ ಪೀಠ ವಿಶೇಷ ಅಭಿಯಾನ ನಡೆಸಲಿದೆ ಎಂದರು. ನಮಗಾಗಿ ಬದುಕುವುದು ಪ್ರಕೃತಿ, ಬೇರೆಯವರದ್ದನ್ನು ಕಿತ್ತುಕೊಂಡು ಬದುಕೋದು ವಿಕೃತಿ. ತ್ಯಾಗ ಮನೋಭಾವದಿಂದ ಇತರರ ಕ್ಷೇಮಕ್ಕೆ, ಸೌಖ್ಯಕ್ಕೆ ಶ್ರಮಿಸುವುದು ನಿಜವಾದ ಸಂಸ್ಕೃತಿ ಎಂದು ಪೇಜಾವರ ಶ್ರೀವಿಶ್ವೇಶ ತೀರ್ಥರು ನುಡಿದರು. ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಮಾತನಾಡಿ, ಧರ್ಮ ಮಾರ್ಗದಲ್ಲಿ ನಡೆಯದಿದ್ದರೆ ಅರ್ಥ, ಕಾಮ, ಮೋಕ್ಷಗಳೂ ಲಭಿಸುವುದಿಲ್ಲ. ಹಿರಿಯರು ನಡೆದ ದಾರಿಯಲ್ಲಿ ಸಾಗುವುದೇ ಧರ್ಮ. ವೈಯಕ್ತಿಕ ಔನ್ನತ್ಯದ ಜತೆ ಜಗತ್ತಿಗೂ ಒಳ್ಳೆಯದನ್ನು ಮಾಡುವುದು ಧರ್ಮದ ನಡೆ ಎಂದರು. ಮಹಾರಾಷ್ಟ್ರದ ಸಹಕಾರ ಸಚಿವ ಸುಭಾಷ್ ದೇಶಮುಖ್, ಭಾರತ ವಿಕಾಸ ಸಂಗಮದ ಸಂಸ್ಥಾಪಕ ಕೆ.ಎನ್. ಗೋವಿಂದಾಚಾರ್ಯ, ವೀರಣ್ಣ ಚರಂತಿಮಠ ಹಾಜರಿದ್ದರು.

ಆಂತರ್ಯದ ರಕ್ಷಣೆಯೇ ನಿಜವಾದ ಧರ್ಮ, ನಮ್ಮೊಳಗಿನ ವಿಸ್ತಾರವೇ ದೇವರು. ನಮ್ಮ ಮನೆಯನ್ನು ಹೇಗೆ ಜತನದಿಂದ ಕಾಯ್ದುಕೊಳ್ಳುತ್ತೇವೆಯೋ ಅದೇ ರೀತಿ ಧರ್ಮವನ್ನು ರಕ್ಷಿಸಬೇಕಿದೆ. ಕೃತಿ ಮತ್ತು ಮತಿ ಸಮ್ಯಕವಾದರೆ ಸಂಸ್ಕೃತಿಯೂ ಉಳಿದುಕೊಳ್ಳುತ್ತದೆ.

| ವೀಣಾ ಬನ್ನಂಜೆ, ಅಧ್ಯಾತ್ಮ ಚಿಂತಕಿ

ದೇಶಭಕ್ತಿಗೆ ಬರಗಾಲವಿಲ್ಲ

ನಮ್ಮಲ್ಲಿ ಮಳೆ ಅಭಾವದಿಂದ ಬರಗಾಲ ಸೃಷ್ಟಿಯಾಗಬಹುದು. ಆದರೆ, ಹಿಂದಿನಿಂದ ಇಂದಿನವರೆಗೂ ದೇಶಭಕ್ತಿ ವಿಷಯದಲ್ಲಿ ಮಾತ್ರ ಬರಗಾಲ ಉದ್ಭವಿಸಿದ್ದೇ ಇಲ್ಲ. ಇದು ಈ ನೆಲದ ಶ್ರೇಷ್ಠತೆ-ಸಂಸ್ಕೃತಿಯ ಮಹತ್ವ ಮನದಟ್ಟು ಮಾಡಿಕೊಡುತ್ತದೆ. ಧರ್ಮ ಈ ದೇಶಕ್ಕೆ ತಾಯಿಬೇರು ಇದ್ದಂತೆ. ಹಾಗಾಗಿ ಧರ್ಮದ ಅಸ್ತಿತ್ವ ಉಳಿಸುತ್ತ, ಬೆಳೆಸುವುದರಲ್ಲೇ ಸಾರ್ಥಕತೆ ಇದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿ ಎಂದರು.