More

    ಸೌಹಾರ್ದ ಸಮಾಜಕ್ಕೆ ಜೈನ ಪರಂಪರೆ ಪರ್ಯಾಯ; ದೇಶಿ ಉತ್ಪನ್ನ ಬಳಕೆ ಮಾಡಲು ಬಾಬಾ ರಾಮದೇವ್ ಸಲಹೆ 

    ಹುಬ್ಬಳ್ಳಿ:  ಶ್ರೀ ಶ್ವೇತಾಂಬರ ಜೈನ ತೇರಾಪಂಥದಿಂದ ಇಲ್ಲಿನ ಕೇಶ್ವಾಪುರದ ಸಂಸ್ಕಾರ ಶಾಲೆ ಪಕ್ಕದ ಮೈದಾನದಲ್ಲಿ ಏರ್ಪಡಿಸಿರುವ ಅತ್ಯಂತ ಪವಿತ್ರ ವಿರಾಟ್ ಮರ್ಯಾದಾ ಮಹೋತ್ಸವಕ್ಕೆ ಆಚಾರ್ಯ ಶ್ರೀ ಮಹಾಶ್ರಮಣಜಿ, ಯೋಗ ಗುರು ಬಾಬಾ ರಾಮದೇವ್, ಜೈನ ಸಾಧು-ಸಾಧಿ್ವುರ ಉಪಸ್ಥಿತಿಯಲ್ಲಿ ಗುರುವಾರ ವಿಧ್ಯುಕ್ತ ಚಾಲನೆ ದೊರೆಯಿತು.

    ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಬಾಬಾ ರಾಮದೇವ್, ವ್ಯಾಪಾರ ವ್ಯವಹಾರವನ್ನೇ ಕಸುಬನ್ನಾಗಿಸಿಕೊಂಡಿರುವ ಜೈನ ಸಮುದಾಯದವರು ದೇಶದ ಆರ್ಥಿಕ ಸುಧಾರಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಅಹಿಂಸಾವಾದಿಗಳಾದ ಇವರು ಜೈನ ಪರಂಪರೆ ಹಾಗೂ ಉನ್ನತ ಸಂಸ್ಕೃತಿಯನ್ನು ಬೆಳೆಸುವತ್ತ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಜೈನ ಪರಂಪರೆ ಪಾಲನೆಯಿಂದ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯ ಎಂದರು.

    ಜೈನ ಸಮಾಜದವರು ಯಶಸ್ವಿ ಉದ್ಯಮಿಗಳು. ತೆರಿಗೆ ಕಟ್ಟುವವರಲ್ಲಿ ಹೆಚ್ಚಿನವರು ಜೈನ ಉದ್ಯಮಿಗಳಿದ್ದಾರೆ. ಆದರೆ ಗುಟ್ಖಾದಂಥ ತಂಬಾಕು ಪದಾರ್ಥಗಳ ಉತ್ಪಾದನೆ ಮತ್ತು ಮಾರಾಟ ಕೈಬಿಡುವುದು ಒಳಿತು. ಆದಾಯದಲ್ಲಿ ಒಂದಿಷ್ಟು ಕೊರತೆಯಾದರೂ ಪರವಾಗಿಲ್ಲ, ನಶೆಯುಕ್ತ ಪದಾರ್ಥಗಳ ವ್ಯವಹಾರ ಬೇಡ ಎಂದು ಸಲಹೆ ನೀಡಿದರು.

    ಪ್ರತಿಯೊಂದು ಧರ್ಮಕ್ಕೂ ಒಂದೊಂದು ಸಂಕೇತ ಇರುತ್ತದೆ. ಆದರೆ ಎಲ್ಲ ಧರ್ಮದ ಮೂಲ ಇರುವುದು ಆಚರಣೆಯಲ್ಲಿ. ಅಹಿಂಸೆ ಎಲ್ಲ ಧರ್ಮದ ಪ್ರಮುಖ ತತ್ವ. ಸತ್ಯ, ಅಹಿಂಸೆ, ಅಪರಿಗ್ರಹ ತೇರಾಪಂಥದ ಮೂಲ ಸಿದ್ಧಾಂತ ಎಂದ ರಾಮ್​ದೇವ್, ಪ್ರತಿಯೊಬ್ಬರೂ ಅಂತರಾಳದಲ್ಲಿ ಶಾಂತತೆ ಕಾಪಾಡಿಕೊಳ್ಳಬೇಕು.

    ಬಹಿರಂಗದಲ್ಲಿ ಕ್ರಿಯಾಶೀಲರಾಗಿರಬೇಕು. ಸನ್ಮಾರ್ಗದಲ್ಲಿ ನಡೆಯಬೇಕು. ಸಂಯಮ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದರು. ಆಚಾರ್ಯ ಶ್ರೀ ಮಹಾಶ್ರಮಣಜಿ ಮರ್ಯಾದಾ ವ್ಯವಸ್ಥಾ ಸಮಿತಿ ಅಧ್ಯಕ್ಷ ಸೋಹನಲಾಲ ಕೊಠಾರಿ, ಹುಬ್ಬಳ್ಳಿ ಘಟಕದ ಶ್ರೀ ಜೈನ್ ಶ್ವೇತಾಂಬರ ತೇರಾಪಂಥದ ಮುಖ್ಯ ಕಾರ್ಯದರ್ಶಿ ಕೇಶ್ರಿಚಂದ ಗೊಲಾಚ್ಚಾ, ತೇರಾಪಂಥ ಮಹಿಳಾ ಮಂಡಳದ ಅಧ್ಯಕ್ಷೆ ಪ್ರೇಮಾಬಾಯಿ ವೇದಮುಥ್, ತೇರಾಪಂಥ ಯುವಕ ಪರಿಷತ್ ಅಧ್ಯಕ್ಷ ವಿನೋದ ವೇದಮುಥ್, ಪತಂಜಲಿ ಯೋಗಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಮತ್ತಿತರರಿದ್ದರು.

    ಆನಂದ ಸಂಕೇಶ್ವರರಿಗೆ ಸನ್ಮಾನ

    ಮರ್ಯಾದಾ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರನ್ನು ಸನ್ಮಾನಿಸಲಾಯಿತು. ಮರ್ಯಾದಾ ಮಹೋತ್ಸವದ ಮುಖ್ಯ ಸಲಹೆಗಾರ ಮಹೇಂದ್ರ ಸಿಂಘಿ, ಹುಬ್ಬಳ್ಳಿ ಘಟಕದ ಶ್ರೀ ಜೈನ್ ಶ್ವೇತಾಂಬರ ತೇರಾಪಂಥ ಸಭಾ ಅಧ್ಯಕ್ಷ ಮಹೇಂದ್ರ ಪಾಲಗೋತಾ ಅವರು ಆನಂದ ಸಂಕೇಶ್ವರ ಅವರನ್ನು ಸನ್ಮಾನಿಸಿ, ದೇಶದ ನಂ.1 ಲಾಜಿಸ್ಟಿಕ್ಸ್ ಕಂಪನಿಯಾಗಿರುವ ವಿಆರ್​ಎಲ್ ಜೈನ ಸಮುದಾಯದೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದು ಪ್ರಶಂಸಿಸಿದರು.

    ಸ್ವದೇಶಿ ಬಳಸಿ

    ದೇಶದ ಅರ್ಥ ವ್ಯವಸ್ಥೆಯನ್ನು 12 ಲಕ್ಷ ಕಂಪನಿಗಳು ನಿಯಂತ್ರಿಸುತ್ತಿವೆ. 50 ಲಕ್ಷ ಕೋಟಿ ರೂ. ವಿದೇಶಿ ಬಂಡವಾಳ ದೇಶದಲ್ಲಿದೆ. ಇದರಿಂದಾಗಿ ದೇಶದ ಹಣ ಹೊರದೇಶಕ್ಕೆ ಹೋಗುತ್ತಿದೆ. ಇದನ್ನು ತಡೆಯಲು ಪ್ರತಿಯೊಬ್ಬರೂ ಸ್ವದೇಶಿ ಉತ್ಪನ್ನಗಳನ್ನು ಉಪಯೋಗಿಸಬೇಕು. ಪತಂಜಲಿ ಉತ್ಪನ್ನಗಳು ದೇಶೀಯವಾಗಿದ್ದು, ಅವುಗಳ ಬಳಕೆಯಿಂದ ಆರೋಗ್ಯ ಸುಧಾರಿಸುತ್ತದೆ ಎಂದು ಬಾಬಾ ರಾಮದೇವ್ ತಿಳಿಸಿದರು.

    ಸೇವೆಯಿಂದ ಆತ್ಮಕಲ್ಯಾಣ

    ಸೇವಾ ಮನೋಭಾವ ಪರಸ್ಪರರನ್ನು ಜೋಡಿಸುತ್ತದೆ ಎಂದು ಆಚಾರ್ಯ ಶ್ರೀ ಮಹಾಶ್ರಮಣಜಿ ಹೇಳಿದರು. ಸೇವೆ ಪಡೆಯುವುದಕ್ಕಿಂತ ಸೇವೆ ನೀಡುವುದು ಶ್ರೇಷ್ಠವಾದದ್ದು. ಪಡೆ ಯುವ ಸೇವೆ ಕನಿಷ್ಠವಾಗಿರಬೇಕು ಎಂದು ಸಲಹೆ ನೀಡಿದರು. ಸೇವೆಯಿಂದ ಆತ್ಮಕಲ್ಯಾಣ ವಾಗುತ್ತದೆ. ಸೇವಾ ಮನೋಭಾವ ಹೊಂದಿರುವ ವ್ಯಕ್ತಿ ನೆಮ್ಮದಿಯ ಜೀವನ ನಡೆಸುತ್ತಾನೆ. ಆಧ್ಯಾತ್ಮಿಕ ಸೇವೆಯಿಂದ ಧರ್ಮದ ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದರು.

    ಕೋಟ್ಯಂತರ ಜನರು ಮಾಂಸಾಹಾರ ಸೇವಿಸುವುದನ್ನು ಬಿಡಿಸಿ, ಸಸ್ಯಾಹಾರಿಗಳನ್ನಾಗಿ ಮಾಡಿದ್ದೇನೆ. ಮಾಂಸಾಹಾರ ಸೇವನೆಯಿಂದ ಕ್ಯಾನ್ಸರ್​ನಂತಹ ಮಾರಕ ರೋಗಗಳು ಬರುತ್ತವೆ. ಮೊಟ್ಟೆ ಮಾಂಸಾಹಾರವಲ್ಲವೆಂಬುದು ಕೆಲವರ ವಾದ. ಆದರೆ ಅದು ಸಹ ಅಭಕ್ಷವಾದುದು.

    | ಬಾಬಾ ರಾಮದೇವ್ ಗುರೂಜಿ ಯೋಗಗುರು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts