ಉಪ್ಪಿನಂಗಡಿಯ ನಚಿಕೇತ್‌ಗೆ ಬಾಲಶಕ್ತಿ ಪುರಸ್ಕಾರ

< ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪ್ರದಾನ >

ಮಂಗಳೂರು: ಮಕ್ಕಳ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ನೀಡುವ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2019ರ ಬಾಲಶಕ್ತಿ ಪುರಸ್ಕಾರವನ್ನು ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಎ.ಯು. ನಚಿಕೇತ್ ಕುಮಾರ್‌ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಮಂಗಳವಾರ ಪ್ರದಾನ ಮಾಡಿದರು.

ದೆಹಲಿಯ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಾಲಶಕ್ತಿ ಪುರಸ್ಕಾರ್ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸಿದ ಸಂಸ್ಥೆಗಳಿಗೆ ಬಾಲಕಲ್ಯಾಣ್ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಕೇಂದ್ರ ಸಚಿವೆ ಮೇನಕಾ ಗಾಂಧಿ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಪ್ರಶಸ್ತಿಯು 1 ಲಕ್ಷ ರೂ. ನಗದು ಪುರಸ್ಕಾರ ಹಾಗೂ ಪ್ರಮಾಣಪತ್ರ ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರಿಗೆ ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ನಚಿಕೇತ್ ಕುಮಾರ್ 2017ರಲ್ಲಿ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ಐಸ್ವೀಪ್-2017ರಲ್ಲಿ ಬೆಳ್ಳಿಪದಕ ಹಾಗೂ ಇನ್ಸೆಫ್ ಸಂಶೋಧನಾ ಮೇಳದಲ್ಲಿ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿಯೂ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಐಟಿ ಕ್ವಿಜ್ ಸ್ಪರ್ಧೆಯಲ್ಲಿಯೂ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿದ್ದರು. ನಚಿಕೇತ್ ಉಪ್ಪಿನಂಗಡಿಯ ಪತ್ರಕರ್ತ ಯು.ಎಲ್. ಉದಯ್ ಕುಮಾರ್-ವಿನಯಾ ದಂಪತಿ ಪುತ್ರ.

ರಾಜ್ಯಕ್ಕೆ ಏಳು ಪ್ರಶಸ್ತಿ: ದೇಶಾದ್ಯಂತ 26 ಮಕ್ಕಳಿಗೆ ಬಾಲಶಕ್ತಿ ಪುರಸ್ಕಾರ್ ಲಭಿಸಿದರೆ, ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸಿದ 5 ಸಂಸ್ಥೆಗಳಿಗೆ ಬಾಲಕಲ್ಯಾಣ ಪುರಸ್ಕಾರ್ ನೀಡಿ ಗೌರವಿಸಲಾಯಿತು. ಕರ್ನಾಟಕದ 6 ವಿದ್ಯಾರ್ಥಿಗಳು ಬಾಲಶಕ್ತಿ ಪುರಸ್ಕಾರ್‌ಗೆ ಆಯ್ಕೆಯಾಗಿದ್ದು, ಒಂದು ಸಂಸ್ಥೆಯು ಬಾಲ ಕಲ್ಯಾಣ ಪುರಸ್ಕಾರ್‌ಗೆ ಆಯ್ಕೆಯಾಗಿವೆ. ಮಂಡ್ಯದ ಮಹಮ್ಮದ್ ಸುಹೈಲ್(ವಿಜ್ಞಾನ ಸಂಶೋಧನೆ), ಬೆಂಗಳೂರಿನ ಅರುಣಿಮಾ ಸೇನ್ (ವಿಜ್ಞಾನ ಸಂಶೋಧನೆ), ಉಪ್ಪಿನಂಗಡಿಯ ನಚಿಕೇತ್ ಕುಮಾರ್(ವಿಜ್ಞಾನ ಸಂಶೋಧನೆ), ಕುಮಾರಿ ಪ್ರತೀಕ್ಷಾ ಬಿ.ಆರ್. (ಸಮಾಜ ಸೇವೆ), ಬೆಂಗಳೂರಿನ ವಿನಾಯಕ್ ಎಂ.(ಕಲೆ ಮತ್ತು ಸಂಸ್ಕ ೃತಿ), ಮಾಸ್ಟರ್ ನಿಖಿಲ್ ಜಿತುರಿ (ಸಾಹಸ) ಬಾಲಶಕ್ತಿ ಪುರಸ್ಕಾರ ಪಡೆದುಕೊಂಡ ರಾಜ್ಯದವರು. ಬೆಂಗಳೂರಿನ ಬಡ ಮಕ್ಕಳಿಗೆ 4 ದಶಕಗಳಿಂದ ಉಚಿತ ಸಂಗೀತ, ನಾಟಕ, ಸಂಗೀತ ಸಾಧನಗಳ ಬಗ್ಗೆ ಶಿಕ್ಷಣ ನೀಡುತ್ತಿರುವ ರಂಗ ಕಹಳೆ ಸಂಸ್ಥೆಗೆ ಬಾಲಕಲ್ಯಾಣ ಪುರಸ್ಕಾರವನ್ನು ನೀಡಿ ರಾಷ್ಟ್ರಪತಿಗಳು ಗೌರವಿಸಿದರು.