More

    ಸಚಿವ ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ಸಂಬಂಧಪಟ್ಟಿದ್ದು: ಬಿ.ವೈ.ವಿಜಯೇಂದ್ರ

    ಗದಗ: ಉಪಚುನಾವಣೆಯಲ್ಲಿ ಕೆ.ಆರ್​.ಪೇಟೆಯಲ್ಲಿ ಗೆದ್ದಿದ್ದು ನಮಗೆ ಬಹುದೊಡ್ಡ ಶಕ್ತಿ ತುಂಬಿದೆ ಎಂದು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷವನ್ನು ಹೆಚ್ಚು ಸಂಘಟನೆ ಮಾಡುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಜನರು ಅನರ್ಹ ಶಾಸಕರನ್ನು ಅರ್ಹರನ್ನಾಗಿ ಮಾಡಿದ್ದಾರೆ. ಬಿ.ಎಸ್​.ಯಡಿಯೂರಪ್ಪನವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

    ಜನವರಿ 17ರ ನಂತರ ಅಮಿತ್​ ಷಾ ಅವರು ಬಂದ ಮೇಲೆ ಸಚಿವ ಸಂಪುಟ ವಿಸ್ತರಣೆ ಇತ್ಯರ್ಥವಾಗುತ್ತದೆ. ಸಚಿವ ಸಂಪುಟಕ್ಕೆ ಯಾರನ್ನು ಆಯ್ಕೆ ಮಾಡಬೇಕು, ಯಾರನ್ನು ಕೈ ಬಿಡಬೇಕು ಎಂಬುದು ಸಿಎಂಗೆ ಮತ್ತು ರಾಜ್ಯಾಧ್ಯಕ್ಷರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಮಾಡುತ್ತಿರುವ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ವಿಜಯೇಂದ್ರ, ವಿನಾಕಾರಣ ದೇಶ ಹಾಗೂ ರಾಜ್ಯದಲ್ಲಿ ವಿರೋಧ ಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ. ಜನರಲ್ಲಿ ವಿಷ ಬೀಜ ಬಿತ್ತುವ ಕಾಯಕ ಮಾಡುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಯಾವುದೇ ಪ್ರಜೆಗೂ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಬಿ.ಎಸ್​.ಯಡಿಯೂರಪ್ಪನವರ ಅವಧಿ ಮುಗಿದ ಬಳಿಕ ರಾಜ್ಯದಲ್ಲಿ ದಲಿತರಿಗೆ ಸಿಎಂ ಪಟ್ಟ ಒಲಿಯಲಿದೆ ಎಂದು ಬಿಜೆಪಿ ಶಾಸಕ ರಾಜು ಗೌಡ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಸದ್ಯಕ್ಕೆ ಬಿಎಸ್​ವೈ ಮುಖ್ಯಮಂತ್ರಿಯಾಗಿದ್ದಾರೆ. ಒಳ್ಳೆಯ ಆಡಳಿತ ನೀಡುತ್ತಿದ್ದಾರೆ ಎಂದು ಹೇಳಿದರು. ಅಲ್ಲದೆ ಸರ್ಕಾರದಲ್ಲಿ ನನ್ನ ಹಸ್ತಕ್ಷೇಪ ಇಲ್ಲ. ಅವೆಲ್ಲ ಕೇವಲ ಆರೋಪಗಳು ಮಾತ್ರ. ಒಳ್ಳೆಯ ಕೆಲಸಗಳು ಆಗುತ್ತಿರುವಾಗ ವಿರೋಧ ಪಕ್ಷದವರು ಆರೋಪ ಮಾಡುವುದು ಸಹಜ ಎಂದು ಹೇಳಿದರು.

    ಇಡೀ ಪಕ್ಷ ಒಗ್ಗಟ್ಟಾಗಿ ಕೆಲಸ ಮಾಡಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಾವುಟವನ್ನು ಗದಗದಲ್ಲಿಯೂ ಹಾರಿಸುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts