ಮಾಜಿ ಪ್ರಧಾನಿ ಮಗನಾದ ರೇವಣ್ಣಗೆ ಒಳ್ಳೆ ಸಂಸ್ಕಾರ ಇರಬೇಕಿತ್ತು

ಗದಗ: ಮಾಜಿ ಪ್ರಧಾನಿ ಮಗನಾದ ರೇವಣ್ಣಗೆ ಒಳ್ಳೆಯ ಸಂಸ್ಕಾರ ಇರಬೇಕಿತ್ತು ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಅವರು ಟೀಕಾ ಪ್ರಹಾರ ನಡೆಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪೀಡಿತ ಕೊಡಗು ಸಂತ್ರಸ್ತರಿಗೆ ಸಚಿವ ಎಚ್​.ಡಿ. ರೇವಣ್ಣ ಬಿಸ್ಕೆಟ್ ಎಸೆದ ವಿಚಾರಕ್ಕೆ ಪ್ರತಿಕ್ರಿಯಿಸಿ ಸಚಿವ ಸ್ಥಾನದ ಅಹಂಕಾರ ಅವರಲ್ಲಿ ತುಂಬಿಕೊಂಡಿದೆ. ಈ ಅಧಿಕಾರದ ಅಹಂ ಬಹಳ ದಿನ ಉಳಿಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಬಂದಿದೆ. ಮುಂದೆಯು ಅನ್ಯಾಯ ಆಗಲಿದೆ. ಮುಖ್ಯಮಂತ್ರಿಗಳು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಉತ್ತರ ಕರ್ನಾಟಕ ಅನ್ಯಾಯದ ಬಗ್ಗೆ ಮತ್ತೆ ಧ್ವನಿ ಎತ್ತಿದ್ದಾರೆ.

ಕೊಡಗು ನೆರೆ ಹಾವಳಿ ಪ್ರಕರಣ ಹಿನ್ನೆಲೆಯಲ್ಲಿ ಸಿಎಂ ಹಾಗೂ ಮಂತ್ರಿ ಮಂಡಲ ಮುಂಜಾಗ್ರತೆ ಕ್ರಮ ಕೈಗೊಳ್ಳಲಿಲ್ಲ. ಸರ್ಕಾರ ಮೊದಲೇ ಎಚ್ಚೆತ್ತುಕೊಂಡಿದ್ದರೆ ಜನರ ಪ್ರಾಣಹಾನಿ ತಡೆಯಬಹುದಿತ್ತು. ಸರ್ಕಾರದ ನಿರ್ಲಕ್ಷ್ಯದಿಂದ ಪ್ರಾಣ ಹಾನಿ, ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ. ಇಷ್ಟೆಲ್ಲ ಘಟನೆ ನಡೆದರೂ ಸಿಎಂ ತಡವಾಗಿ ಭೇಟಿ ನೀಡಿರುವುದು ದುರದೃಷ್ಟಕರ. ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಸೂಕ್ತ ಅನುದಾನ ಸಿಗಲಿದೆ. ಪ್ರಧಾನಿ ಕೇರಳ ಹಾಗೂ ಕರ್ನಾಟಕಕ್ಕೆ ಸೂಕ್ತ ಪರಿಹಾರ ನೀಡುತ್ತಾರೆ ಎಂಬ ಭರವಸೆ ನೀಡಿದರು. (ದಿಗ್ವಿಜಯ ನ್ಯೂಸ್​)