ಪರಿಶಿಷ್ಟರಿಗೆ ಸಿಗುತ್ತಿಲ್ಲ ಗುತ್ತಿಗೆ: ಮಾಜಿ ಸಚಿವ ಬಿ.ಶಿವರಾಮು ಆಕ್ರೋಶ

ಹಾಸನ: 50 ಲಕ್ಷ ರೂ.ಗಿಂತ ಕಡಿಮೆ ವೆಚ್ಚದ ಕಾಮಗಾರಿ ಗುತ್ತಿಗೆಯನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ನೀಡಬೇಕೆಂಬ ಕಾಂಗ್ರೆಸ್ ಸರ್ಕಾರದ ನಿಯಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಗಾಳಿಗೆ ತೂರಿದ್ದಾರೆ ಎಂದು ಮಾಜಿ ಸಚಿವ ಬಿ. ಶಿವರಾಮು ಆರೋಪಿಸಿದರು.

ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಏರ್ಪಟ್ಟಿರುವ ಮೈತ್ರಿಯ ಷರತ್ತುಗಳನ್ನು ಜೆಡಿಎಸ್ ಪಾಲಿಸುತ್ತಿಲ್ಲ. ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಮೂಲೆಗುಂಪಾಗುತ್ತಿದ್ದು, ಹೈಕಮಾಂಡ್ ನಿರ್ಲಕ್ಷಿಸಿದರೆ ರಾಜ್ಯಾದ್ಯಂತ ಈ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 50 ಲಕ್ಷ ರೂ.ಗಿಂತ ಕಡಿಮೆ ವೆಚ್ಚದ ಸರ್ಕಾರಿ ಕಾಮಗಾರಿಯನ್ನು ಪರಿಶಿಷ್ಟಿ ಜಾತಿ, ಪಂಗಡದ ಗುತ್ತಿಗೆದಾರರಿಗೆ ನೀಡಬೇಕೆಂದು ಹೇಳಿದ್ದರು. ಈ ಯೋಜನೆ ಕೇವಲ ಘೋಷಣೆ ಮಾತ್ರವಾಗಿ ಉಳಿಯದೆ ರಾಷ್ಟ್ರಪತಿಯವರ ಅಂಕಿತದೊಂದಿಗೆ ಜಾರಿಗೆ ಬಂದಿದೆ. ಕಾಂಗ್ರೆಸ್ ಸರ್ಕಾರದ ಯಾವ ಯೋಜನೆಗಳನ್ನು ಮೊಟಕುಗೊಳಿಸುವುದಿಲ್ಲ ಎನ್ನುತ್ತಲೇ ಜೆಡಿಎಸ್ ಮುಖಂಡರು ನಮಗೆ ಪೆಟ್ಟು ನೀಡುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ 50 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಕಾಮಗಾರಿಯನ್ನು ಒಟ್ಟಾಗಿಸಿ ಪ್ಯಾಕೇಜ್ ಮಾಡುತ್ತಿರುವ ಸಚಿವ ಎಚ್.ಡಿ. ರೇವಣ್ಣ ಎಸ್ಸಿ-ಎಸ್ಟಿ ಸಮುದಾಯಕ್ಕೆ ಟೆಂಡರ್ ಸಿಗದಂತೆ ಮಾಡುತ್ತಿದ್ದಾರೆ. ಆರಂಭದಿಂದಲೂ ಹಿಂದುಳಿದ ವರ್ಗಗಳ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿರುವ ಅವರೂ ಈಗಲೂ ಅದನ್ನೇ ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.