ಅಫಜಲಪುರ: ಇಂದಿನ ಆಧುನಿಕ ಯುಗದಲ್ಲಿ ಎಷ್ಟೇ ಮುಂದುವರಿದರೂ ಕೃಷಿ ಚಟುವಟಿಕೆಗಳಲ್ಲಿ ಪ್ರಾಣಿಗಳ ಸಾಕಾಣಿಕೆಯಿಂದ ದೂರವಾದರೆ ಕೃಷಿ ಪೂರ್ಣವಾಗುವುದಿಲ್ಲ ಎಂದು ಶ್ರೀ ವೀರಮಹಾಂತ ಶಿವಾಚಾರ್ಯರು ನುಡಿದರು.
ಚಿಣಮಗೇರಾ ಗ್ರಾಮದ ಮಹಾಂತೇಶ್ವರ ಮಠದ ಆವರಣದಲ್ಲಿ ಶನಿವಾರ ಕೃಷಿ ವಿಶ್ವವಿದ್ಯಾಲಯ ರಾಯಚೂರು ಹಾಗೂ ಕೃಷಿ ಮಹಾವಿದ್ಯಾಲಯ ಕಲಬುರಗಿ ಸಹಯೋಗದಲ್ಲಿ ಏರ್ಪಡಿಸಿದ್ದ ಬಿಎಸ್ಸಿ ಅಂತಿಮ ವರ್ಷದ ಗ್ರಾಮೀಣ ವಿದ್ಯಾರ್ಥಿಗಳ ಕಾರ್ಯಾನುಭವ ಹಾಗೂ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವನ್ಯ ಜೀವಿಗಳ ಹಾಗೂ ಗೋವು ರಕ್ಷಣೆ ನಮ್ಮೆಲ್ಲರ ಹೊಣೆ. ಬಹುರಾಷ್ಟ್ರೀಯ ಕಂಪನಿಗಳ ಸಂಬಳಕ್ಕೆ ಹಿಂದೆ ಬೀಳದೆ ಇಡೀ ಜಗತ್ತಿಗೆ ಅನ್ನ ನೀಡುವ ರೈತನ ಒಳಿತಿಗೆ ಮೀಸಲಾಗಲಿ. ಇಂದು ಜಗತ್ತಿಗೆ ಎದುರಾಗುತ್ತಿರುವ ನೈಸರ್ಗಿಕ ವಿಪತ್ತುಗಳು ಹಾಗೂ ಹಾನಿಗಳಿಗೆ ಜತೆಗೆ ಕಷ್ಟದಲ್ಲಿರುವವರ ಸಹಾಯಕ್ಕೆ ಮುಂದಾಗುವುದು ಮನುಷ್ಯನ ನಿಜವಾದ ಮಾನವೀಯತೆ ಎಂದು ಹೇಳಿದರು.
ಇಂದಿನ ಆಧುನಿಕ ಯುಗದಲ್ಲಿ ನಾನು, ನನಗಾಗಿ ಎಂದು ಬದುಕುತ್ತಿರುವರ ಮಧ್ಯೆ ರೈತ ಮಾತ್ರ ನಮ್ಮವರಿಗೆ ಎಂದು ದುಡಿಯುತ್ತಿರುವುದು ಶ್ಲಾಘನೀಯ. ಇಂದಿನ ಹೆಣ್ಣುಮಕ್ಕಳು ರೈತರನ್ನು ಮದುವೆಯಾಗಲು ಹಿಂದೇಟು ಹಾಕುತ್ತಿದ್ದರೆ. ಮುಂದೊಂದಿನ ರೈತನೇ ಬೇಕು ಎನ್ನುವ ಕಾಲ ಬರುತ್ತದೆ. ರೈತರಿಗೆ ಕೃಷಿಯಲ್ಲಿ ಸರ್ಕಾರಗಳು ಕೇವಲ ಆಶ್ವಾಸನೆಗಳು ನೀಡುತ್ತಿವೆ ಹೊರತು ಕೆಲಸಗಳು ಆಗುತ್ತಿಲ್ಲ. ಕೃಷಿ ಕ್ಷೇತ್ರ ಆಯ್ಕೆ ಮಾಡಿಕೊಂಡ ನೀವು ರೈತರಿಗಾಗಿ ನಿಮ್ಮ ಜೀವನ ಮೀಸಲಾಗಲಿ ಎಂದು ಹೇಳಿದರು.
ಡಾ.ಎಂ.ಎಂ.ಪಾಟೀಲ್ ಸಮಗ್ರ ಕೃಷಿಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಡಾ.ಎಂ.ಎಂ.ಧನೋಜಿ, ಡಾ.ರಾಚಪ್ಪ, ಡಾ.ರಾಜಶೇಖರ ಬಸನಾಯಕ, ಡಾ.ಕೆ.ಎನ್.ದೊಡ್ಡಮನಿ, ರೇವಣಸಿದ್ದಪ್ಪ ಹಾಳಕಿ, ಶರಣಪ್ಪ ಕಲಕೇರಿ, ಸೈಬಣ್ಣ ಜಮಾದಾರ, ಅಶೋಕ ಭೂತಾಳೆ, ರೇವಪ್ಪ, ಲತೀಫ್ ಪಟೇಲ್, ರಾಜು ಜಮಾದಾರ, ಚಂದ್ರಕಾಂತ ನರೋಣ, ರೇವಣಸಿದ್ದಪ್ಪ ಮಡಕಿ, ಗುರುದೇವಪ್ಪ ಗೊಡೇನ, ಪ್ರಭು ಜಮಾದಾರ ಇತರರಿದ್ದರು.