ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ಬಿಎಸ್​ವೈ ಆಗ್ರಹ

ಬೆಂಗಳೂರು: ರಾಜ್ಯದ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದ್ದಾರೆ.

ನಿಶ್ಚಿತ ಪಿಂಚಣಿ ಯೋಜನೆ ಹಾಗೂ ಬಸವರಾಜ ಹೊರಟ್ಟಿ ನೇತೃತ್ವದ ಸಮಿತಿ ನೀಡಿರುವ ಕಾಲ್ಪನಿಕ ವೇತನ ವರದಿ ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜು ಪಿಂಚಣಿ ವಂಚಿತ ನೌಕರರ ಸಂಘ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿದರು.

ಪಿಂಚಣಿ ಸೌಲಭ್ಯವಿಲ್ಲದೆ ರಾಜ್ಯದ ಸಾವಿರಾರು ಶಿಕ್ಷಕರು ಕಷ್ಟ ಅನುಭವಿಸುತ್ತಿದ್ದಾರೆ. ಇದೊಂದು ಜ್ವಲಂತ ಸಮಸ್ಯೆಯಾಗಿದ್ದು, ಸರ್ಕಾರ ಕೂಡಲೇ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು. ಈ ಕುರಿತು ಸರ್ಕಾರದ ಮೇಲೆ ಒತ್ತಡ ತರುವುದಾಗಿ ಪ್ರತಿಭಟನಾ ನಿರತರಿಗೆ ಭರವಸೆ ನೀಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ತರುವ ಕುರಿತು ಅವರು ಪ್ರಣಾಳಿಕೆಯಲ್ಲೇ ತಿಳಿಸಿದ್ದರು. ಈ ಕುರಿತು ಅವರೊಡನೆ ಮತ್ತೆ ಚರ್ಚೆ ಮಾಡುತ್ತೇನೆ ಎಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಎಂಎಲ್​ಸಿ ಪುಟ್ಟಣ್ಣ ಹೇಳಿದರು.

ಸಂಘದ ರಾಜ್ಯಾಧ್ಯಕ್ಷ ಜಿ. ಹನುಮಂತಪ್ಪ ಮಾತನಾಡಿ, 2006ರ ನಂತರ ಅನುದಾನಕ್ಕೊಳಪಟ್ಟು ವೇತನ ಪಡೆಯುತ್ತಿರುವ ಅನುದಾನಿತ ವಿದ್ಯಾ ಸಂಸ್ಥೆಗಳ 40 ಸಾವಿರಕ್ಕೂ ಹೆಚ್ಚು ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಜಾರಿಯಾಗಬೇಕು. ವೇತನಾನುದಾನಕ್ಕೊಳಪಟ್ಟು ಕೇವಲ ಬೆರಳೆಣಿಕೆಯಷ್ಟು ವರ್ಷ ವೇತನ ಪಡೆದ ಸಾವಿರಾರು ನೌಕರರು ಬರಿಗೈಲಿ ನಿವೃತ್ತರಾಗಿದ್ದಾರೆ. ಸರ್ಕಾರ ಕೂಡಲೇ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ನೌಕರರ ಹೋರಾಟಕ್ಕೆ ರಾಜ್ಯದ ಎನ್​ಪಿಎಸ್ ನೌಕರರ ಸಂಘಟನೆಯೂ ಸೇರಿ ಹಲವು ಶಿಕ್ಷಕ ಹಾಗೂ ನೌಕರರ ಸಂಘಟನೆಗಳು ಬೆಂಬಲ ಸೂಚಿಸಿವೆ. ಪ್ರತಿಭಟನೆಯ ಏಳನೇ ದಿನವಾದ ಬುಧವಾರ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.