ಪದವಿ ಇಲ್ಲದಿದ್ದರೂ ಪಕ್ಷಕ್ಕೆ ದುಡಿಯುತ್ತೇನೆ

ಬೆಂಗಳೂರು: ಲೋಕಸಭಾ ಚುನಾವಣೆ ಮುಗಿದ ನಂತರ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬದಲಾಯಿಸುವ ನಿರ್ಧಾರವನ್ನು ವರಿಷ್ಠರು ತೆಗೆದುಕೊಂಡರೆ ಸಂತೋಷವಾಗಿ ಪ್ರತಿಪಕ್ಷ ನಾಯಕ ಹಾಗೂ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಬೆಂಗಳೂರು ಪ್ರೆಸ್​ಕ್ಲಬ್ ಹಾಗೂ ವರದಿಗಾರರ ಕೂಟ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಪ್ರಶ್ನೆಗೆ ಉತ್ತರಿಸಿ, 40 ವರ್ಷದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ. ಹಿಂದೆಲ್ಲ ಸ್ಥಾನವೂ ಇರಲಿಲ್ಲ, ಅಧಿಕಾರವೂ ಇರಲಿಲ್ಲ. ರಾಷ್ಟ್ರೀಯ ನಾಯಕರು ನಿರ್ಧರಿಸಿ ಕೈಗೊಳ್ಳುವ ತೀರ್ವನಕ್ಕೆ ಬದ್ಧ. ಪ್ರತಿಪಕ್ಷ ನಾಯಕ ಸ್ಥಾನದ ಜತೆಗೆ ಕಾರ್ಯಕರ್ತನಾಗಿ ದುಡಿಯುತ್ತೇನೆ. ಸ್ಥಾನ ಇರಲಿ, ಇಲ್ಲದಿರಲಿ ಪಕ್ಷ ಬಲಪಡಿಸಲು ತೊಡಗುತ್ತೇನೆ ಎಂದರು. ನಿಮ್ಮ ನಂತರ ಪಕ್ಷವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆಗೆ, ರಾಜಕೀಯದಲ್ಲಿ ಯಾರೂ ಶಾಶ್ವತರಲ್ಲ. ಮುಂದೆ ಯಾರು ನಾಯಕರಾಗುತ್ತಾರೆ ಎಂದು ನಿರ್ಧಾರ ಮಾಡಲು ಸಾಧ್ಯವಿಲ್ಲ. ಆ ಸಮಯದಲ್ಲಿ ಯಾರು ಮುಂಚೂಣಿಗೆ ಬರುತ್ತಾರೋ ಅವರು ನಡೆಸುತ್ತಾರೆ. ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದಲ್ಲಿ ನಾಯಕರಿಗೆ ಕೊರತೆ ಇಲ್ಲ ಎಂದು ತಿಳಿಸಿದರು.

ಮೇ 23ರ ನಂತರ ಸ್ಥಿತಿ ಬದಲಾವಣೆ: ನರೇಂದ್ರ ಮೋದಿ ಸರ್ಕಾರದ ಸಾಧನೆ ಕುರಿತು ಜನಸಾಮಾನ್ಯರಲ್ಲಿ ನಂಬಿಕೆ ಹೆಚ್ಚಾಗಿದೆ. ಇಲ್ಲಿನ ಮೈತ್ರಿ ಸರ್ಕಾರ ನಡೆಸುತ್ತಿರುವವರು ನಂಬಿಕೆ ಅರ್ಹರಲ್ಲ, ವಿಶ್ವಾಸ ದ್ರೋಹಿಗಳು ಎಂಬುದು ಮನದಟ್ಟಾಗಿದೆ. ಬಿಜೆಪಿ 22 ಸ್ಥಾನ ಗೆದ್ದ ನಂತರ ದೋಸ್ತಿಗಳಲ್ಲಿ ಬಡಿದಾಟ ತಾರಕಕ್ಕೇರಿ ಸರ್ಕಾರ ಕುಸಿಯಲಿದೆ ಎಂದರು. 22 ಸ್ಥಾನ ಗೆಲ್ಲದಿದ್ದರೆ ಪದಚ್ಯುತಿಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಚುನಾವಣೆ ಫಲಿತಾಂಶದ ನಂತರ ಮತ್ತೊಮ್ಮೆ ಸಂವಾದಕ್ಕೆ ಕರೆಯಿರಿ ಅಲ್ಲೇ ತಿಳಿಸುತ್ತೇನೆ ಎಂದು ಹೇಳಿದರು.

ಕೈ ನಿಮೂಲನೆ ಧೋರಣೆ ಇಲ್ಲ: ಕಾಂಗ್ರೆಸ್ ಸೇರಿ ಯಾವುದೇ ಪ್ರತಿಪಕ್ಷಗಳ ನಿರ್ನಾಮ ಧೋರಣೆಯನ್ನು ಬಿಜೆಪಿ ತಳೆದಿಲ್ಲ ಎಂದ ಬಿಎಸ್​ವೈ, ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ಅವರ ಬ್ಲಾಗ್ ಬರಹದ ಕುರಿತು ಪ್ರತಿಕ್ರಿಯಿಸಿ, ಆಡ್ವಾಣಿ ಅವರ ಮಾತು ನಮಗೆಲ್ಲ ಮಾರ್ಗದರ್ಶನ. ಆಡ್ವಾಣಿ, ಮುರಳಿ ಮನೋಹರ ಜೋಷಿ ಸೇರಿ ಹಿರಿಯರಿಗೆ ಅವಮಾನ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಐಟಿ ಇಲಾಖೆಗಿಂತ ಆಧಾರ ಬೇಕೆ?

ಕಾಮಗಾರಿಗೆ ಮುನ್ನವೇ 1,365 ಕೋಟಿ ರೂ. ಬಿಡುಗಡೆ ಮಾಡಿರುವುದಕ್ಕೆ ಐಟಿ ಇಲಾಖೆ ಅಧಿಕಾರಿಗಳಿಗಿಂತಲೂ ಆಧಾರ ಬೇಕೆ ಎಂದಿರುವ ಯಡಿಯೂರಪ್ಪ, ಇದು 20 ಪರ್ಸೆಟ್ ಸರ್ಕಾರ ಎಂಬುದು ಸಾಬೀತಾಗಿದೆ. ಕಾಮಗಾರಿಗೆ ಮೊದಲೇ ಹಣ ನೀಡುವ ಅವಶ್ಯಕತೆ ಏನಿತ್ತು ಎಂದು ಸರ್ಕಾರ ಉತ್ತರ ನೀಡಬೇಕು ಎಂದರು.

ಎಚ್​ಡಿಡಿ, ಖರ್ಗೆ ಸೋಲು ಖಚಿತ

ರಾಜ್ಯದಲ್ಲಿ ಬಿರುಸಿನ ಹಣಾಹಣಿ ನಡೆಯುತ್ತಿರುವ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ತುಮಕೂರಿನಲ್ಲಿ ಎಚ್.ಡಿ. ದೇವೇಗೌಡರ ಸೋಲು ಖಚಿತ. ಚಿಕ್ಕಬಳ್ಳಾಪುರದಲ್ಲಿ ಗೆಲುವು ಪಕ್ಕಾ ಆಗಿದ್ದು, ಕೋಲಾರದಲ್ಲೂ ಉತ್ತಮ ಪರಿಸ್ಥಿತಿಯಿದೆ ಎಂದು ಬಿಎಸ್​ವೈ ಹೇಳಿದ್ದಾರೆ. ಆಡಿಯೋ ಸೇರಿ ಅನೇಕ ವಿಚಾರಗಳಲ್ಲಿ ಸರ್ಕಾರ ಹಾಗೂ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮನ್ನು ಬ್ಲಾ್ಯಕ್ ಮೇಲ್ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ನೇರ ಆರೋಪ ಮಾಡಿದರು. ಇದೆಲ್ಲದರ ಪರಿಣಾಮವನ್ನು ಅವರು ಎದುಸಿರುತ್ತಾರೆ ಎಂದರು. ಚುನಾವಣೆ ಸಮಯದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಹೆಲಿಕಾಪ್ಟರ್​ಗೆ ಪ್ರಯತ್ನಿಸುತ್ತವೆ. ಇಷ್ಟಕ್ಕೂ ಕೊಂಡುಕೊಳ್ಳುವಷ್ಟು ಅವಕಾಶವಿರುವವರಿಗೆ ಇದೊಂದು ಸಮಸ್ಯೆಯೇ ಎಂದು ವ್ಯಂಗ್ಯವಾಡಿದರು.

ಎರಡು ಕಡೆ ಅಚ್ಚರಿ ಆಯ್ಕೆ

ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ 26 ಕಡೆ ತಾವು ಸೂಚಿಸಿದವರಿಗೇ ವರಿಷ್ಠರು ಟಿಕೆಟ್ ನೀಡಿದ್ದಾರೆ. ಬೆಂಗಳೂರು ದಕ್ಷಿಣದಿಂದ ಒಂದೇ ಹೆಸರನ್ನು ಕಳಿಸಲಾಗಿತ್ತು. ಕೆಲವು ವಿಶೇಷ ಕಾರಣಗಳಿಂದ ವರಿಷ್ಠರು ಚಿಕ್ಕೋಡಿ ಹಾಗೂ ದಕ್ಷಿಣದಲ್ಲಿ ಭಿನ್ನ ಹೆಸರನ್ನು ಆಯ್ಕೆ ಮಾಡಿದ್ದಾರೆ. ಅವರಿಗೆ ಆ ಅಧಿಕಾರ ಇದೆ. ಈ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಜಯಗಳಿಸುವುದರಲ್ಲಿ ಎರಡು ಮಾತಿಲ್ಲ ಎಂದರು. ಬಹುಶಃ ತೇಜಸ್ವಿನಿ ಅನಂತಕುಮಾರ್ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸ್ಥಾನ ಒಪ್ಪಿಕೊಂಡಿದ್ದಕ್ಕೆ ಅಮಿತ್ ಷಾ ರೋಡ್ ಶೋಗೆ ಆಗಮಿಸಿದ್ದರು ಎಂದು ಯಡಿಯೂರಪ್ಪ ವಿಶ್ಲೇಷಿಸಿದರು.

Leave a Reply

Your email address will not be published. Required fields are marked *