ಆಮಿಷವೊಡ್ಡಿದ್ದಕ್ಕೆ ನಿಮ್ಮ ಬಳಿ ಸಾಕ್ಷಿ ಏನಿದೆ?

ಬೆಂಗಳೂರು: ಬಿಜೆಪಿ ವಿರುದ್ಧ ಜೆಡಿಎಸ್​ ನಾಯಕರು ಸ್ಪೀಕರ್​ ಅವರಿಗೆ ಆಧಾರ ರಹಿತ ದೂರು ನೀಡಿದ್ದಾರೆ. ನಾವು ಯಾವ ಶಾಸಕರಿಗೂ ಆಮಿಷವೊಡ್ಡಿಲ್ಲ. ಈ ಬಗ್ಗೆ ಜೆಡಿಎಸ್​ ನಾಯಕರ ಬಳಿ ಸಾಕ್ಷಿ ಏನಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ಬಿಜೆಪಿಯಿಂದ ನಡೆಯುತ್ತಿದೆ ಎನ್ನಲಾದ ಶಾಸಕರ ಖರೀದಿ ಪ್ರಯತ್ನದ ಕುರಿತು ಜೆಡಿಎಸ್​ನ ವಕ್ತಾರ ರಮೇಶ್​ ಬಾಬು ಅವರು ಇಂದು ಸ್ಪೀಕರ್​ ಅವರಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ನಾಯಕ ಯಡಿಯೂರಪ್ಪ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಜೆಡಿಎಸ್​ ಹಾಗೂ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಜೆಡಿಎಸ್​ ನಾಯಕರದ್ದು ಆಧಾರ ರಹಿತ ಆರೋಪ. ಸಿಎಂ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಅವರ ಹುಳುಕುಗಳನ್ನು ಮುಚ್ಚಿಕೊಳ್ಳಲು ದೂರು ನೀಡಿದ್ದಾರೆ. ಸಿಎಂ ಮೊದಲು ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಲಿ. ಅವರ ಪಕ್ಷದ ಶಾಸಕರೇ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸಿಎಂ ಮೊದಲು ಆ ಗೊಂದಲಗಳನ್ನು ನಿಯಂತ್ರಣ ಮಾಡಲಿ. ಅದು ಬಿಟ್ಟು ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಸಬಾರದು ಎಂದು ತಾಕೀತು ಮಾಡಿದ್ದಾರೆ.

ರಾಗ ದ್ವೇಷವಿಲ್ಲದೆ ಅಧಿಕಾರ ನಡೆಸಲಿ

ರಾಜ್ಯದ ಮುಖ್ಯಮಂತ್ರಿಯಾಗಿರುವ ಎಚ್​.ಡಿ. ಕುಮಾರಸ್ವಾಮಿ ಅವರು ಮೊದಲು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಂಯಮದಿಂದ ನಡೆದುಕೊಳ್ಳಬೇಕು. ಸರ್ಕಾರದ ಯಾವ ಸಚಿವರೂ ಜನರ ಕಷ್ಟಗಳನ್ನು ಕೇಳುತ್ತಿಲ್ಲ. ಮುಖ್ಯಮಂತ್ರಿಯಾಗುವಾಗ ಪ್ರಮಾಣ ಮಾಡಿದಂತೆ ರಾಗ-ದ್ವೇಷವಿಲ್ಲದೇ ಕುಮಾರಸ್ವಾಮಿ ಅಧಿಕಾರ ನಡೆಸಬೇಕು. ಜನ ದಂಗೆ ಏಳಬೇಕು ಎಂಬ ಸಿಎಂ ಹೇಳಿಕೆಗೆ ಜನರೇ ಛೀಮಾರಿ ಹಾಕುತ್ತಿದ್ದಾರೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಸಿಎಂ ನಡೆದುಕೊಳ್ಳುತ್ತಿದ್ದಾರೆ ಎಂದೂ ಯಡಿಯೂರಪ್ಪ ಕೆಂಡಾಮಂಡಲರಾದರು.