ಲೋಕ ಕಲಿಗಳಿಗೆ ಉಪ ಟಾಸ್ಕ್

ಬೆಂಗಳೂರು: ಕೇಂದ್ರದಲ್ಲಿ ಸರ್ಕಾರ ರಚನೆಗೆ ಲೋಕಸಭಾ ಚುನಾವಣೆ ಅವಶ್ಯ ಇರುವಷ್ಟೇ ರಾಜ್ಯದಲ್ಲಿ ಎದುರಾಗಿರುವ ಎರಡು ಉಪಚುನಾವಣೆ ಯಲ್ಲಿ ಗೆಲುವು ಮುಖ್ಯ ಎಂದರಿತ ಬಿಜೆಪಿ, ಎಲ್ಲ ಲೋಕಸಭಾ ಅಭ್ಯರ್ಥಿಗಳು, ಪದಾಧಿಕಾರಿಗಳ ದಿಢೀರ್ ಸಭೆಯನ್ನು ಶುಕ್ರವಾರ ನಡೆಸಿ ಕೆಲವು ಮಹತ್ವದ ಸೂಚನೆಗಳನ್ನು ನೀಡಿತು.

2-3 ತಿಂಗಳಿಂದ ಅನೇಕರು ಚುನಾವಣೆಯಲ್ಲಿ ತೊಡಗಿದ್ದರಿಂದ ಬಸವಳಿದಿದ್ದರು. ಫಲಿತಾಂಶಕ್ಕೆ ಒಂದು ತಿಂಗಳಿರುವ ಕಾರಣಕ್ಕೆ ಅದಾಗಲೇ ವಿದೇಶ ಸೇರಿ ಅನೇಕ ಕಡೆಗೆ ಕುಟುಂಬ ಹಾಗೂ ಸ್ನೇಹಿತರ ಜತೆಗೆ ಪ್ರವಾಸಕ್ಕೆ ಯೋಜನೆ ಹಾಕಿಕೊಂಡಿದ್ದರು. ಉಪಚುನಾವಣೆಗೆ ಮೈತ್ರಿ ಸರ್ಕಾರ ತನ್ನೆಲ್ಲ ಶಕ್ತಿ, ಮಂತ್ರಿಗಳನ್ನು ಬಳಸುತ್ತದೆ. ಪ್ರತಿಪಕ್ಷವಾಗಿ ನಮ್ಮ ನಾಯಕರು ಇಲ್ಲದಿದ್ದರೆ ಕಷ್ಟ ಎಂದರಿತ ಬಿಜೆಪಿ ವರಿಷ್ಠರು ಶುಕ್ರವಾರ ಸಭೆ ನಡೆಸಿ ಎಲ್ಲರಿಗೂ ಉಪಚುನಾವಣೆಯಲ್ಲಿ ತೊಡಗಿಕೊಳ್ಳುವಂತೆ ತಿಳಿಸಿದ್ದಾರೆ. ಕಾಂಗ್ರೆಸ್- ಜೆಡಿಎಸ್​ನಲ್ಲಿ ಗೊಂದಲ ತಾರಕಕ್ಕೇರಿದೆ. ಫಲಿತಾಂಶದ ಬಳಿಕ ಇನ್ನಷ್ಟು ಉಲ್ಬಣಗೊಳ್ಳಲಿದೆ. ಹೀಗಾಗಿ ಕುಂದಗೋಳ, ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಗೆಲ್ಲಬೇಕಿದೆ. ಆದ್ದರಿಂದ ಅನುಕೂಲ ಇರುವ ನಾಯಕರು ಈ 2 ಕ್ಷೇತ್ರಗಳಿಗೆ ಹೋಗಿ ಪ್ರತಿ ಮತಗಟ್ಟೆಯಲ್ಲಿ, ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಕೆಲವರಿಗೆ ಜವಾಬ್ದಾರಿ ಹೊರಿಸಿದ್ದು, ನನ್ನ ಹೆಸರಿಲ್ಲ ಎಂದು ಸುಮ್ಮನೆ ಕೂರುವಂತಿಲ್ಲ. ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಮೇ 23ರ ಬಳಿಕ ಎಲ್ಲಿಗೆ ಹೋದರೂ ಕೇಳುವುದಿಲ್ಲ. ಈಗ ಎಲ್ಲರೂ ಇರಬೇಕು ಎಂದು ಯಡಿಯೂರಪ್ಪ ಸೂಚಿಸಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮುಖಂಡರಾದ ಬಿ.ಶ್ರೀರಾಮುಲು, ಅರವಿಂದ ಲಿಂಬಾವಳಿ, ಎನ್.ರವಿಕುಮಾರ್, ತೇಜಸ್ವಿನಿ ಅನಂತಕುಮಾರ್ ಉಪಸ್ಥಿತರಿದ್ದರು. ಆದರೆ, ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ, ಅನಂತಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಗೈರಾಗಿದ್ದರು.

ನಾಮಪತ್ರ ಸಲ್ಲಿಕೆ: ಕುಂದಗೋಳ ಕ್ಷೇತ್ರದ ಉಪಚುನಾವಣೆಗಾಗಿ ಶುಕ್ರವಾರ ಬಿಜೆಪಿಯ ಎಸ್.ಐ.ಚಿಕ್ಕನಗೌಡರ್ ಪಕ್ಷದ ಬಿ ಫಾಮ್ರ್ ಇಲ್ಲದೆ ನಾಮಪತ್ರ ಸಲ್ಲಿಸಿದ್ದಾರೆ.

ಪ್ರತಿಪಕ್ಷದ ಹಿರಿಯರ ಸೋಲು ಖಚಿತ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ದೇವೇಗೌಡರ ಜತೆಗೆ ಎಂ.ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ ಸೇರಿ ಪ್ರತಿಪಕ್ಷದ ಅನೇಕ ಹಿರಿಯ ಮುಖಂಡರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲುವುದು ಖಚಿತ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ರಾಜ್ಯ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು ಹಾಗೂ ಕ್ಷೇತ್ರ ಉಸ್ತುವಾರಿಗಳ ಸಭೆಯಲ್ಲಿ ಮಾತನಾಡಿ, ಈ ಬಾರಿ ಕೇಂದ್ರದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ರಾಜ್ಯದಲ್ಲೂ 22 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದಾಗ ಕೆಲವರಷ್ಟೇ ಚಪ್ಪಾಳೆ ತಟ್ಟಿದರು. ಆಗ ಯಡಿಯೂರಪ್ಪ, ಚಪ್ಪಾಳೆ ತಟ್ಟಲು ಸಂಕೋಚ ಪಡಬೇಕಿಲ್ಲ ಎನ್ನುತ್ತಿದ್ದಂತೆ ಸಭೆಯಲ್ಲಿದ್ದವರು ಜೋರಾಗಿ ಕರತಾಡನ ಮಾಡಿದರು.

ಮಂಡ್ಯದಲ್ಲಿ 45 ಸಾವಿರ ಲೀಡ್ !

ಮಂಡ್ಯದಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರು 45 ಸಾವಿರ ಮತಗಳ ಅಂತರದಿಂದ ಜಯಿಸುತ್ತಾರೆ ಎಂದು ಜಿಲ್ಲಾಧ್ಯಕ್ಷ ನಾಗನಗೌಡ ವರದಿ ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಹೊರತುಪಡಿಸಿ ಬಹುತೇಕ ಎಲ್ಲ ಕ್ಷೇತ್ರಗಳ ವರದಿಯಲ್ಲೂ ಹೆಚ್ಚಿನ ವಿಶ್ವಾಸ ಕಾಣುತ್ತಿತ್ತು ಎಂದು ನಾಯಕರು ತಿಳಿಸಿದ್ದಾರೆ. ಅವರು ಪ್ರಸ್ತಾಪಿಸುತ್ತಿದ್ದ ವಿಚಾರಗಳ ಆಧಾರದಲ್ಲಿ ಸುಮಾರು 17-18 ಕ್ಷೇತ್ರಗಳು ಜಯಿಸುವಂತೆ ತೋರುತ್ತದೆ ಎಂದು ನಾಯಕರೊಬ್ಬರು ತಿಳಿಸಿದ್ದಾರೆ.

18-19 ಗೆಲ್ಲುವ ವಿಶ್ವಾಸ

ಶುಕ್ರವಾರ ಬೆಳಗ್ಗಿನಿಂದಲೇ ನಡೆದ ಸರಣಿ ಸಭೆಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆ 28 ಕ್ಷೇತ್ರಗಳ ಬಗ್ಗೆಯೂ ಆಯಾ ಜಿಲ್ಲಾ ಘಟಕಗಳಿಂದ ವಿಸõತ ವರದಿ ಸಲ್ಲಿಸಲಾಯಿತು. ಹಾಸನದಲ್ಲಿ ಹೊಳೆನರಸೀಪುರ, ಚನ್ನರಾಯಪಟ್ಟಣ ಹೊರತುಪಡಿಸಿ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ಅಭ್ಯರ್ಥಿ ಎ. ಮಂಜು ತಿಳಿಸಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಪಕ್ಷದ ಪರ ವಾತಾವರಣವಿದ್ದರೂ ಒಕ್ಕಲಿಗ ಸಮುದಾಯ ಎಷ್ಟರಮಟ್ಟಿಗೆ ಬಿಜೆಪಿ ಕಡೆ ವಾಲಿದೆ ಎಂಬುದು ತಿಳಿಯುತ್ತಿಲ್ಲ ಎಂದು ಮೈಸೂರು ಜಿಲ್ಲಾ ಮುಖಂಡರು ವರದಿ ನೀಡಿದ್ದಾರೆ. ಶಿವಮೊಗ್ಗದಲ್ಲಿ ಚುನಾವಣೆ ಯಶಸ್ವಿಯಾಗಿ ನಡೆದಿದ್ದು, ಉಪಚುನಾವಣೆಗಿಂದ ಕನಿಷ್ಠ ಮೂರು ಪಟ್ಟು ಅಂದರೆ ಒಂದೂವರೆ ಲಕ್ಷ ಮತಗಳ ಅಂತರದಲ್ಲಿ ಜಯಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರಕ್ಕೆ ಕೊನೆವರೆಗೂ ಅಭ್ಯರ್ಥಿ ಘೊಷಣೆ ಮಾಡಲಿಲ್ಲ. ಕೊನೇ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿ ಘೊಷಣೆ ಮಾಡಿದ್ದು, ಅನೇಕ ಗೊಂದಲಗಳಿಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ನೋಡಿಕೊಳ್ಳುವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ವರದಿಯಲ್ಲಿ ತಿಳಿಸಲಾಯಿತು.

ಉಮೇಶ್ ಪುತ್ರನಿಗೆ ಚಿಂಚೋಳಿ ಟಿಕೆಟ್

ಬೆಂಗಳೂರು: ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಡಾ.ಉಮೇಶ್ ಜಾಧವ್ ಸಹೋದರ ರಾಮಚಂದ್ರ ಜಾಧವ್ ಬದಲಿಗೆ ಪುತ್ರ ಡಾ.ಅವಿನಾಶ್ ಜಾಧವ್ ಹೆಸರನ್ನು ರಾಜ್ಯ ಬಿಜೆಪಿ ಅಂತಿಮಗೊಳಿಸಿದೆ. ಶುಕ್ರವಾರ ಬೆಳಗ್ಗಿನಿಂದ ನಡೆದ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಎರಡು ಬಾರಿ ಭೇಟಿ ಮಾಡಿದ ಉಮೇಶ್, ಪುತ್ರನ ಹೆಸರನ್ನು ಕೇಂದ್ರ ಚುನಾವಣೆ ಸಮಿತಿಗೆ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದೇ ಹೆಸರು ಶಿಫಾರಸು ಆಗಿರುವ ಕಾರಣ ಬಹುತೇಕ ಡಾ.ಅವಿನಾಶ್​ಗೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ.

ಗುರುವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಮಚಂದ್ರ ಜಾಧವ್ ಹೆಸರು ಅಂತಿಮಗೊಳಿಸಿತ್ತು. ಉಮೇಶ್ ಜಾಧವ್ ಕುಟುಂಬದವರೊಂದಿಗೆ ರ್ಚಚಿಸಿ, ಅಂತಿಮ ಕ್ಷಣದಲ್ಲಿ ಪುತ್ರ ಅವಿನಾಶ್​ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಯಡಿಯೂರಪ್ಪ ಭೇಟಿ ಬಳಿಕ ಪ್ರತಿಕ್ರಿಯಿಸಿದ ಡಾ.ಉಮೇಶ್ ಜಾಧವ್, ಕಲಬುರಗಿಯಲ್ಲಿ ಚುನಾವಣೆ ಚೆನ್ನಾಗಿ ನಡೆದಿದೆ. ನಾವು ಗೆಲ್ಲುತ್ತೇವೆ. ಚಿಂಚೋಳಿ ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಕುರಿತಂತೆ ರಾಜ್ಯಾಧ್ಯಕ್ಷರೊಂದಿಗೆ ರ್ಚಚಿಸಿದ್ದೇನೆ. ಜನರ ಒಲವು ಯಾರ ಕಡೆಗೆ ಹೆಚ್ಚು ಇದೆಯೋ ಅವರಿಗೆ ಅವಕಾಶ ನೀಡುವಂತೆ ಕೋರಿದ್ದೇನೆ. ಸಹೋದರ ರಾಮಚಂದ್ರ ಜಾಧವ್ ಅಥವಾ ಪುತ್ರ ಅವಿನಾಶ್ ಜಾಧವ್ ಸೇರಿ ಯಾರಿಗಾದರೂ ಪಕ್ಷ ಟಿಕೆಟ್ ನೀಡಬಹುದು. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಸಿಗಬೇಕು ಎಂದರು.

ಮಾಜಿ ಸಚಿವ ಸುನೀಲ್ ವಲ್ಯಾಪುರೆ ಕೂಡ ಯಡಿಯೂರಪ್ಪ ಭೇಟಿಯಾಗಿ ಸ್ಪರ್ಧೆಗೆ ಅವಕಾಶ ನೀಡುವಂತೆ ಕೋರಿದರು. ಮುಂದೆ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ನೀಡುವುದಾಗಿ ಮನವರಿಕೆ ಮಾಡಿಕೊಡಲು ಬಿಎಸ್​ವೈ ಪ್ರಯತ್ನಿಸಿದರು. ಮತ್ತೊಂದು ಕ್ಷೇತ್ರ ಕುಂದಗೋಳಕ್ಕೆ ಗುರುವಾರ ಶಿಫಾರಸು ಮಾಡಿದ್ದ ಎಸ್.ಐ. ಚಿಕ್ಕನಗೌಡ್ರ ಹೆಸರಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ನಾನೂ ಚಿಂಚೋಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಗುರುವಾರ ರಾಜ್ಯ ಬಿಜೆಪಿ ಕೋರ್ ಕಮಿಟಿ ಶಿಫಾರಸು ಮಾಡಿರುವ ಸಂಭ್ಯಾವರ ಪಟ್ಟಿಯಲ್ಲಿ ಎಷ್ಟು ಹೆಸರಿದೆಯೋ ಗೊತ್ತಿಲ್ಲ. ಶನಿವಾರ ಕ್ಷೇತ್ರದ ಬೆಂಬಲಿಗರು, ಕಾರ್ಯಕರ್ತರ ಸಭೆ ಕರೆಯಲಾಗಿದೆ. ಆ ಸಭೆ ನಿರ್ಧಾರದಂತೆ ಮುಂದುವರಿಯುತ್ತೇನೆ.

| ಸುನೀಲ್ ವಲ್ಯಾಪುರೆ ಮಾಜಿ ಸಚಿವ