ಸುಮಲತಾ ತೆಗೆದುಕೊಳ್ಳುವ ಸ್ಪಷ್ಟ ನಿರ್ಧಾರದ ಬಳಿಕ ಬಿಜೆಪಿ ತನ್ನ ನಿಲುವು ಪ್ರಕಟಿಸಲಿದೆ: ಬಿಎಸ್​ವೈ

ಗದಗ: ಮಂಡ್ಯ ರಾಜಕೀಯ ವಿಚಾರದಲ್ಲಿ ನಟಿ ಸುಮಲತಾ ಅಂಬರೀಷ್​ ಅವರು ತೆಗೆದುಕೊಳ್ಳುವ ಮೂಲಕ ಸ್ಪಷ್ಟ ನಿರ್ಧಾರದ ಬಳಿಕ ಬಿಜೆಪಿ ತನ್ನ ನಿಲುವು ಪ್ರಕಟಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರು ತಿಳಿಸಿದರು.

ಗದಗಿನಲ್ಲಿ ಗುರುವಾರ ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರಾ ಕಾರ್ಯಕ್ರಮಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅಬರು ದಿವಂಗತ ಅಂಬರೀಷ್​ ಅವರು ಮಂಡ್ಯ ಜನರ ಮನ ಗೆದ್ದ ನಾಯಕ. ಅವರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ಶೋಭೆ ತರುವಂತದಲ್ಲ. ಪುತ್ರ ನಿಖಿಲ್ ಕುಮಾರ್​ಗೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಹಗುರವಾಗಿ ಮಾತನಾಡೋದು ಸರಿಯಲ್ಲ. ಸುಮಲತಾ ಅವರು ಬಿಜೆಪಿಯ ಸಂಪರ್ಕವನ್ನು ಮಾಡಿಲ್ಲ. ಅದೇ ರೀತಿಯಾಗಿ ಬಿಜೆಪಿಯೂ ಕೂಡ ಅವರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಪತನ
ಕಾಂಗ್ರೆಸ್​ ಜೆಡಿಎಸ್​ ನೇತೃತ್ವದ ಸಮ್ಮಿಶ್ರ ಸರ್ಕಾರದ ಬಗ್ಗೆ ಮತ್ತೆ ಭವಿಷ್ಯ ನುಡಿದ ಬಿಎಸ್​ವೈ ಲೋಕಸಭಾ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಕಾಂಗ್ರೆಸ್ 20 ಶಾಸಕರು ಸಿಎಂ ಕುಮಾರಸ್ವಾಮಿಯನ್ನು ಒಪ್ಪುತ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ಗೊಂದಲ ಇದೆ. ಹೀಗಾಗಿ ಸರ್ಕಾರ ಪತನವಾಗಲಿದೆ ಎಂದು ಹೇಳಿದರು.

ಯಾವುದು ಧೂಳೀಪಟ ಆಗುತ್ತದೆ ಕಾದು ನೋಡಿ
ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಲಖನ್ ಜಾರಕಿಹೊಳಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಇನ್ನೂ ಯಾವುದು ಸ್ಪಷ್ಟವಾಗಿಲ್ಲ. ಬಳ್ಳಾರಿ ವಿಚಾರದಲ್ಲಿ ಶ್ರೀರಾಮುಲು ಬಿಟ್ಟು ಯಾವುದೇ ನಿರ್ಧಾರ ಕೈಗೊಳ್ಳಲ್ಲ. ಲೋಕಸಭಾ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಎರಡರಲ್ಲಿ ಯಾವುದು ಧೂಳೀಪಟ ಆಗುತ್ತದೆ ಎಂಬುದನ್ನು ಕಾದು ನೋಡಿ. ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಶಿವಕುಮಾರ್ ಉದಾಸಿ 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. ಈ ಕ್ಷೇತ್ರದಲ್ಲಿ ಶಿವಕುಮಾರ್ ವಿರುದ್ಧ ಸರಿಯಾದ ಎದುರಾಳಿ ಇಲ್ಲ. ನಾಳೆ ದೆಹಲಿಗೆ ಹೋಗಿ ಅಮಿತ್ ಷಾ ಭೇಟಿ ಮಾಡುತ್ತೇನೆ. ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಅಂತಿಮ ಮಾಡಿಕೊಂಡು ಬರುತ್ತೇನೆ ಎಂದು ತಿಳಿಸಿದರು. ( ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *