ಸ್ಥಳೀಯ ಮಟ್ಟದಲ್ಲಿ ನಾಯಕತ್ವ ಬಲಗೊಳಿಸಲು ಒತ್ತು

ಅರಸೀಕೆರೆ: ಸ್ಥಳೀಯ ಮಟ್ಟದಲ್ಲಿ ನಾಯಕತ್ವ ಬಲಗೊಳಿಸಲು ಒತ್ತು ನೀಡುವುದಾಗಿ ವಿಧಾನಸಭೆ ವಿರೋಧಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರಸಭಾ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಸದಸ್ಯರನ್ನು ನಗರದ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಗೌರವ ಸ್ವೀಕರಿಸಿ ಮಾತನಾಡಿದರು. ಪ್ರಬಲ ನಾಯಕತ್ವದ ಕೊರತೆಯಿಂದ ಕೆಲ ಸ್ಥಾನಗಳು ಕೂದಲೆಳೆ ಅಂತರದಲ್ಲಿ ಕೈತಪ್ಪಿ ಹೋಗಿವೆ ಎನ್ನುವ ಮಾಹಿತಿ ಲಭ್ಯ ವಾಗಿದೆ. ನಗರಸಭಾ ಚುನಾವಣೆಯಲ್ಲಿ ಭಯದ ವಾತಾವರಣ ಸೃಷ್ಟಿಸಿ ಮತ ಕೇಳುವ ಕೆಲಸ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಹೆದರಿಕೆಯ ರಾಜಕಾರಣಕ್ಕೆ ಬಗ್ಗುವುದು ನಮ್ಮ ಜಾಯಮಾನವಲ್ಲ. ಮುಂಬರುವ ದಿನಗಳಲ್ಲಿ ಸ್ಥಳೀಯ ಮಟ್ಟದಲ್ಲಿ ನಾಯಕತ್ವ ಬಲಗೊಳಿಸಲು ನಿರ್ಧರಿಸಲಾಗಿದ್ದು ಕಾರ್ಯಕರ್ತರು ಹಾಗೂ ಮುಖಂಡರು ಯಾವುದೇ ಕಾರಣಕ್ಕೂ ಎದೆಗುಂದಬಾರದು. ವಿರೋಧ ಪಕ್ಷದ ನಾಯಕನಾಗಿ ಜನರ ಸಮಸ್ಯೆಗಳನ್ನು ತೆರದಿಡುವ ಕೆಲಸವನ್ನು ಸಮರ್ಥವಾಗಿ ಮಾಡಲಿದ್ದೇನೆ. ನೀವ್ಯಾರೂ ಇಂತಹ ಬೆದರಿಕೆಯ ತಂತ್ರಗಳಿಗೆ ಭಯಪಡುವ ಅಗತ್ಯವಿಲ್ಲ ಎಂದು ಉತ್ಸಾಹ ತುಂಬಿದರು.
ಜಿಪಂ ಸದಸ್ಯ ಮರಿಸ್ವಾಮಿ, ವಿಜೇತ ಅಭ್ಯರ್ಥಿಗಳಾದ ಸಿ.ಗಿರೀಶ್, ಶ್ವೇತಾ ರಮೇಶ್ ನಾಯ್ಡು, ಗೀತಾ ಹೇಮಂತ್, ಅಭಿರಾಮಿ, ಶುಭಾ ಮನೋಜ್‌ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗಾರಮೇಶ್, ಗ್ರಾಮಾಂತರ ಮಂಡಲದ ಅಧ್ಯಕ್ಷ ಜಿವಿಟಿ ಬಸವರಾಜ್,ನಗರಾಧ್ಯಕ್ಷ ಮನೋಜ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಲಾಳನಕೆರೆ ಯೋಗೀಶ್, ಮುಖಂಡರಾದ ರಮೇಶ್ ನಾಯ್ಡು, ವಿಜಯ್ ಕುಮಾರ್, ಸುಬ್ಬು, ಸುವರ್ಣಮ್ಮ ಮತ್ತು ಪರಾಜಿತ ಅಭ್ಯರ್ಥಿಗಳು ಹಾಜರಿದ್ದರು.