ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬೀಳುತ್ತೆ ಎನ್ನಬೇಡಿ

ಬಾಗಲಕೋಟೆ: ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಅವರೇ ಕಚ್ಚಾಡಿಕೊಂಡು ಬೇರೆಯಾಗುತ್ತಾರೆ. ಈ ಬಗ್ಗೆ ನಮ್ಮ ಪಕ್ಷದ ಮುಖಂಡರು ಹೇಳಿಕೆ ನೀಡಕೂಡದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸರ್ಕಾರ ಬೀಳುತ್ತೆ, ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದು ನಮ್ಮ ಪಕ್ಷದ ಮುಖಂಡರು ಹೇಳಿಕೆ ನೀಡುವುದರಿಂದ ಅವರಲ್ಲಿ ಒಗ್ಗಟ್ಟು ಮೂಡುತ್ತದೆ. ಅದಕ್ಕೆ ಅವಕಾಶ ಕೊಡಬೇಡಿ. ಅವರೇ ಕಚ್ಚಾಡಿ ಸರ್ಕಾರ ಉರುಳಿಸುತ್ತಾರೆ ಎಂದು ಸ್ವಪಕ್ಷೀಯರಿಗೆ ಸುದ್ದಿಗೋಷ್ಠಿಯಲ್ಲಿ ಕಿವಿಮಾತು ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಲಕೋಟೆ ಅಥವಾ ಕೊಪ್ಪಳ ಸೇರಿ ಎಲ್ಲಿಯೇ ಸ್ಪರ್ಧಿಸಿದರೂ ಬಿಜೆಪಿಗೆ ತೊಂದರೆ ಇಲ್ಲ. ಸೆ.3ರಂದು ಪ್ರಕಟವಾಗಲಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.50ರಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.