ಆಕಾಶದ ಅಗಲಕ್ಕೂ ನಿಂತ ಆಲ ಬಾಬಾಸಾಹೇಬ್ ಅಂಬೇಡ್ಕರ್

| ಡಾ. ಎಸ್​.ನರೇಂದ್ರಕುಮಾರ್​

ದಮನಿತ ಸಮುದಾಯಗಳಿಗೆ ಸ್ವಾಭಿಮಾನ, ಘನತೆ-ಗೌರವ, ಸಮಾನತೆ ತಂದುಕೊಡಲು ತಮ್ಮ ಬದುಕಿನುದ್ದಕ್ಕೂ ರಚನಾತ್ಮಕ ಕಾರ್ಯಗಳ ಮೂಲಕ ಧ್ಯಾನಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣಗೊಂಡ ದಿನ ಡಿಸೆಂಬರ್ 6. ಇದು ಮಾನವೀಯತೆಯ ಸಾಧಕನನ್ನು ನೆನೆಯುತ್ತ ನಮ್ಮ ನಮ್ಮ ಅಂತರಂಗವನ್ನು ಪುನರ್ ವಿಮರ್ಶೆ ಮಾಡಿಕೊಳ್ಳಬೇಕಾದ ದಿನವಾಗಿದೆ.

ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ ಪಿಎಚ್.ಡಿ. ಪದವಿ, ಇಂಗ್ಲೆಂಡಿನ ಸ್ಕೂಲ್ ಆಫ್ ಎಕನಾಮಿಕ್ಸ್ ಆಂಡ್ ಪೊಲಿಟಿಕಲ್ ಸೈನ್ಸ್ ವತಿಯಿಂದ ಎಂ.ಎಸ್ಸಿ., ಡಿ.ಎಸ್ಸಿ. ಪದವಿ, ಲಂಡನ್​ನ ಗ್ರೇಸ್ ಇನ್ ಕಾಲೇಜಿನಿಂದ ಬಾರ್-ಅಟ್-ಲಾ ಇವು ಅಂಬೇಡ್ಕರ್ ಅವರು ಪಡೆದ ಪದವಿಗಳು.

ಇಷ್ಟೆಲ್ಲ ಪದವಿಗಳ ಹಿಂದೆ ಪ್ರಾಮಾಣಿಕವಾದ ಅಪಾರ ಪರಿಶ್ರಮವಿದೆ, ಹಲವಾರು ಸಂಕಟಗಳಿವೆ. ಶೂದ್ರರು ಅಸ್ಪಶ್ಯರು ವಿದ್ಯೆಗೆ ಅನರ್ಹರು ಎಂಬ ಸಾಂಪ್ರದಾಯಿಕ ನಂಬಿಕೆಯ ಬುಡವನ್ನೇ ಅಲ್ಲಾಡಿಸಿದ ಸಾಧನೆ ಇದು. ಅಂಬೇಡ್ಕರ್ ಅವರು ಪಡೆದ ಈ ಪದವಿಗಳು ಶತಶತಮಾನಗಳ ಕಾಲ ಅಕ್ಷರ ನಿರಾಕರಿಸಿದ ವಿಕೃತ ಮನಸುಗಳಿಗೆ ಅರ್ಥಪೂರ್ಣ ಪ್ರತಿಭಟನೆಯ ಪ್ರತ್ಯುತ್ತರವಾಗಿದೆ. ಅವಕಾಶ ಸಿಕ್ಕರೆ ಶೋಷಿತನೊಬ್ಬ ಯಾವ ಎತ್ತರಕ್ಕೆ ಏರಬಲ್ಲನೆಂಬುದಕ್ಕೆ ಸಂಕೇತವಾಗಿದೆ.

ತಾವು ಅನುಭವಿಸಿದ ಅಸ್ಪಶ್ಯತೆಯ ಯಾತನೆಗೆ ಹೇಸಿ ತಾವು ಪಡೆದ ಪದವಿಗೆ ಅಮೆರಿಕದಲ್ಲೊ ಇಂಗ್ಲೆಂಡಿನಲ್ಲೊ ಅಥವಾ ಇನ್ನೆಲ್ಲೊ ಉತ್ತಮ ಹುದ್ದೆ ಪಡೆದು ತಮ್ಮ ಇಡೀ ಸಂಸಾರದೊಂದಿಗೆ ಸುಖವಾಗಿ ಬದುಕಬಹುದಿತ್ತು. ಅದು ಅಂದು ಅಂಬೇಡ್ಕರ್ ಅವರಿಗೆ ಕಷ್ಟವಾಗಿರಲಿಲ್ಲ. ಆದರೆ ಅಂಬೇಡ್ಕರ್ ಆಯ್ಕೆ ಮಾಡಿಕೊಂಡದ್ದು ಹೋರಾಟದ ಬದುಕನ್ನು. ಅದರಲ್ಲೂ ಬ್ರಿಟಿಷರ ಗುಲಾಮಗಿರಿಯಿಂದ ಭಾರತವನ್ನು ಮುಕ್ತಗೊಳಿಸಬೇಕು ಎಂಬ ಪ್ರಬಲ ಹೋರಾಟ ನಡೆಯುತ್ತಿದ್ದಾಗ. ಕೇವಲ ಬ್ರಿಟಿಷರ ಶೋಷಣೆಯಿಂದ ಭಾರತ ಬಿಡುಗಡೆಗೊಂಡರೆ ಸಾಲದು; ಬ್ರಿಟಿಷರು ಈ ನಮ್ಮ ದೇಶಕ್ಕೆ ಬರುವುದಕ್ಕಿಂತ ಮೊದಲಿಂದಲೂ ಜಾತಿ, ಅಸ್ಪಶ್ಯತೆ ಮಾತ್ರವಲ್ಲ ಮಹಿಳೆ ಎಂಬ ಕಾರಣಕ್ಕಾಗಿ ಹಲವಾರು ಸಮುದಾಯಗಳು ಗುಲಾಮಗಿರಿಯಲ್ಲಿ ಶೋಷಣೆಗೆ ಒಳಗಾಗಿ ಬದುಕುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

1927ರ ಮಾರ್ಚ್​ನಲ್ಲಿ ಮಹಾರಾಷ್ಟ್ರದ ಮಹಾಡ್​ನಲ್ಲಿ ಅಂಬೇಡ್ಕರ್ ನಡೆಸಿದ ಚೌಡರ್ ಕೆರೆಯ ನೀರಿನ ಸತ್ಯಾಗ್ರಹ ಕೇವಲ ಅಸ್ಪಶ್ಯರು ನೀರನ್ನು ರ್ಸ³ಸುವುದಷ್ಟೇ ಆಗಿರಲಿಲ್ಲ. ಭಾರತದಾದ್ಯಂತ ಅಸ್ಪಶ್ಯತೆ ಕಾರಣಕ್ಕೆ ಪ್ರಕೃತಿದತ್ತ ನೀರನ್ನು ಕೂಡ ಕುಡಿಯಲು ನಿರ್ಬಂಧಿಸುವ ಮನುಷ್ಯನ ನೀಚತನದ ವಿರುದ್ಧದ ಪ್ರತಿಭಟನೆಯಾಗಿತ್ತು. ಹಾಗೆಯೇ 1930ರಲ್ಲಿ ನಡೆಸಿದ ಕಾಳರಾಮ ದೇವಾಲಯ ಪ್ರವೇಶ ಚಳವಳಿ; ದೇವರ ದೃಷ್ಟಿಯಲ್ಲಿ ಮನುಷ್ಯರೆಲ್ಲ ಒಂದೇ ಎಂದು ಹೇಳುವ ಜನರೇ, ಕೆಲವು ಸಮುದಾಯಗಳನ್ನು ಮಾತ್ರ ದೇವಾಲಯದ ಒಳಗೆ ಸೇರಿಸದ ಆಷಾಢಭೂತಿತನವನ್ನು ವಿರೋಧಿಸುವುದಾಗಿತ್ತು. ಅಂಬೇಡ್ಕರ್ ಇಂಥ ಚಳವಳಿಗಳನ್ನು ಕೇವಲ ಅಸ್ಪಶ್ಯರನ್ನು ಸಂಘಟಿಸಿ ಮಾಡಲಿಲ್ಲ; ಅವರೊಂದಿಗೆ ಸಹಸ್ರಬುದ್ಧೆ, ಸುರೇಂದ್ರನಾಥ ಟಿಪ್ನಿಸ್, ಅನಂತರಾವ್ ಚಿತ್ರೆ, ಎನ್.ಎಂ. ಜೋಷಿ, ಅಮೃತಕರ್ ಮುಂತಾದವರು ಅಂದರೆ ಬ್ರಾಹ್ಮಣರನ್ನು ಒಳಗೊಂಡಂತೆ ಬೇರೆ ಬೇರೆ ಹಿನ್ನೆಲೆಯ ಜನರಿದ್ದರು. ಘನತೆಯ ಸಮಾಜ ನಿರ್ವಣವೆಂದರೆ ಸಮಾನತೆಗಾಗಿ ಎಲ್ಲ ಜನರ ಮಾನಸಿಕ ಪರಿವರ್ತನೆ ಎಂಬ ಖಚಿತ ನಿಲುವು ಅಂಬೇಡ್ಕರ್ ಅವರದಾಗಿತ್ತು.

1930ರಿಂದ 32ರ ಅವಧಿಯಲ್ಲಿ ಇಂಗ್ಲೆಂಡಿನಲ್ಲಿ ನಡೆದ ದುಂಡುಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ ಅಂಬೇಡ್ಕರ್ ಬ್ರಿಟಿಷರ ತವರುನೆಲದಲ್ಲೇ ಬ್ರಿಟಿಷರ ಶೋಷಣೆಯನ್ನು ಪ್ರಬಲವಾಗಿ ಖಂಡಿಸಿ ದೇಶಭಕ್ತಿ ಮೆರೆದರು. ಹಾಗೆಯೇ ಮೊದಲ ಬಾರಿಗೆ ವಿದೇಶದಲ್ಲಿ ಜಾತಿ ಅಸ್ಪಶ್ಯತೆಯ ಭೀಕರತೆಯನ್ನು ಬಹಿರಂಗಪಡಿಸಿದರು. ಗಾಂಧಿಯವರೊಂದಿಗೆ ಸಕಾರಣವಾದ ತಾತ್ತಿ ್ವ ಸಂಘರ್ಷಕ್ಕೆ ಇಳಿಯುವ ಮೂಲಕ ದಲಿತರ ಪರವಾಗಿ ಗಾಂಧಿ ಇನ್ನಷ್ಟು ರಚನಾತ್ಮಕ ಯೋಜನೆಗಳನ್ನು ಹಾಕಿಕೊಳ್ಳಲು ಕಾರಣರಾದರು. ‘ಹರಿಜನ ಸೇವಕ ಸಂಘ’, ‘ಹರಿಜನ’ ಪತ್ರಿಕೆ ಮುಂತಾದವು ಗಾಂಧಿಯವರಿಂದ ರೂಪುಗೊಂಡದ್ದು ಈ ಕಾರಣದಿಂದಲೆ.

ಅಂಬೇಡ್ಕರ್ ತಮ್ಮ ಗುರುಗಳೆಂದು ಕರೆದುಕೊಂಡಿರುವುದು ಬುದ್ಧ, ಕಬೀರ ಹಾಗೂ ಜ್ಯೋತಿಬಾ ಫುಲೆಯವರನ್ನು. ಇವರೆಲ್ಲರೂ ಭಾರತೀಯರೇ. ಮುಖ್ಯವಾಗಿ ಈ ನೆಲದಲ್ಲಿ ಮಾನವೀಯತೆ, ಸಮಾನತೆ, ಸೌಹಾರ್ದವನ್ನು ಬಿತ್ತಿದವರು. ಇವರಾರೂ ಅಂಬೇಡ್ಕರ್ ಜಾತಿಯವರಲ್ಲ. ಸಕಲರಿಗೂ ಒಳಿತನ್ನು ಹಾರೈಸಿದ ಮಹಾಚೇತನಗಳನ್ನು ಮಾತ್ರ ತಮ್ಮ ಗುರುಗಳೆಂದು ಸ್ವೀಕರಿಸುವ ಅಂಬೇಡ್ಕರ್​ರವರ ಮನಸ್ಸು ಅಸಾಮಾನ್ಯ.

1930ರ ಸಂದರ್ಭದಲ್ಲಿ ಗಾಂಧಿಯವರೊಂದಿಗೆ ‘ನನಗೆ ತಾಯಿನಾಡು ಎಂಬುದಿಲ್ಲ’ ಎಂದು ಹೇಳುವ ಅಂಬೇಡ್ಕರ್ ಅವರ ಮಾತುಗಳಲ್ಲಿ ಈ ದೇಶದವರಾಗಿಯೂ ಅಭದ್ರತೆಯಿಂದ ಬದುಕು ಸಾಗಿಸುತ್ತಿರುವ ಅಸಂಖ್ಯಾತ ಜನಸಮೂಹದ ಅಪಾರ ನೋವಿದೆ. ಆದರೆ 1940ರ ಸಂದರ್ಭದಲ್ಲಿ ‘ನಾವು ಯಾವುದೇ ಜಾತಿಯವರಾಗಿರಲಿ, ಯಾವುದೇ ಧರ್ಮದವರಾಗಿರಲಿ, ಯಾವುದೇ ಭಾಷೆಯವರಾಗಿರಲಿ, ಯಾವುದೇ ಪ್ರದೇಶದವರಾಗಿರಲಿ ನಾವು ಮೊದಲು ಭಾರತೀಯರು, ಕೊನೆಗೂ ಭಾರತೀಯರು. ಭಾರತೀಯತೆಯನ್ನು ಉಳಿದು ಬೇರೇನೂ ಇಲ್ಲ’ ಎನ್ನುವ ಅಂಬೇಡ್ಕರ್ ಮಾತುಗಳಲ್ಲಿ ಭಾರತೀಯರೆಲ್ಲರೂ ತಮ್ಮ ಸೀಮಿತತೆಯನ್ನು ಮೀರಿ ಭಾರತೀಯರಾಗಬೇಕೆಂಬ ಅಭಿಮಾನದ ಹಂಬಲವಿದೆ.

ಅಂಬೇಡ್ಕರ್ 1936ರ ದಶಕದಲ್ಲಿ ‘ಸ್ವತಂತ್ರ್ಯ ಕಾರ್ವಿುಕ ಪಕ್ಷ’ ಸ್ಥಾಪಿಸುವ ಮೂಲಕ ಎಲ್ಲ ಹಿನ್ನೆಲೆಯ ಕಾರ್ವಿುಕರ ಹಿತರಕ್ಷಣೆ ಮಾಡುವ ಕಾಳಜಿ ತೋರಿದರು. ಈ ಅವಧಿಯಲ್ಲಿ ರೈತರು, ಕೃಷಿ ಕಾರ್ವಿುಕರು, ಮಹಿಳಾ ಕಾರ್ವಿುಕರನ್ನು ಸಂಘಟಿಸುವ ವೇದಿಕೆ ಸಿದ್ಧಪಡಿಸಿದರು. ‘ಸಮಾನ ಕೆಲಸಕ್ಕೆ ಸಮಾನ ವೇತನ’, ‘ಸಂಬಳಸಹಿತ ಹೆರಿಗೆ ರಜೆ’, ಉದ್ಯೋಗ ಭದ್ರತೆ ಮುಂತಾದ ಕಾನೂನುಗಳು ಜಾರಿಗೆ ಬರಲು ಪರಿಶ್ರಮಿಸಿದರು. ಭೂಮಿಯ ರಾಷ್ಟ್ರೀಕರಣವನ್ನು ಒತ್ತಾಯಿಸಿದ ಅಂಬೇಡ್ಕರ್ ಸಮುದಾಯ ಮತ್ತು ಸಹಕಾರ ಬೇಸಾಯ ಪದ್ಧತಿಯ ಕನಸುಕಂಡವರು. ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾದ ಅವಧಿಯಲ್ಲಿ ಅಂಬೇಡ್ಕರ್ ಅವರು ಮಹಿಳೆಯರ ವಿಮೋಚನೆಗಾಗಿ ‘ಹಿಂದೂ ಕೋಡ್ ಬಿಲ್’ ಮಂಡಿಸಿದರು. ಆದರೆ ಅದು ಸಂಸತ್ತಿನಲ್ಲಿ ಚರ್ಚೆಗೆ ಒಳಗಾಗದ ಕಾರಣ 1950ರಲ್ಲಿ ರಾಜೀನಾಮೆ ನೀಡಿ ಮಂತ್ರಿ ಪದವಿಯನ್ನೇ ತ್ಯಜಿಸಿದರು.

ಪ್ರಜಾತಂತ್ರ ವ್ಯವಸ್ಥೆಯ ವಿಷಯ ಬಂದಾಗ ‘ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ಸರ್ಕಾರವೇ ಪ್ರಜಾತಂತ್ರ’ ಎಂಬ ಅಬ್ರಹಾಂ ಲಿಂಕನ್​ರ ಹೇಳಿಕೆಯನ್ನು ಉಲ್ಲೇಖಿಸುವುದು ಸಾಮಾನ್ಯ. ಆದರೆ ಅಂಬೇಡ್ಕರ್- ‘ಯಾವುದೇ ರಕ್ತಪಾತವಿಲ್ಲದೆ ಜನರ ಆರ್ಥಿಕ ಮತ್ತು ಸಾಮಾಜಿಕ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಸರ್ಕಾರ’, ‘ಪ್ರಜಾತಂತ್ರ ಕೇವಲ ಆಡಳಿತ ವಿಧಾನವಲ್ಲ ಜೀವನ ಪದ್ಧತಿ’ ಎಂದಿದ್ದಾರೆ. ಅವರಿಗೆ ಭಾರತದ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷತೆಯ ಅವಕಾಶ ದೊರೆತದ್ದು ವಿಶೇಷ. ಅಸಮಾನತೆಯ ಸಂಕೀರ್ಣ ಭಾರತವನ್ನು ಸಮಾನತೆಯ ಆಧಾರದಲ್ಲಿ ಕಟ್ಟುವುದು ಸವಾಲಿನ ಕೆಲಸವೇ ಆಗಿತ್ತು. ಭಾರತದ ಬಹುಪಾಲು ಮೌಖಿಕ ಕಾನೂನುಗಳು ಅನ್ಯಾಯಗಳನ್ನು ಪ್ರತಿಪಾದಿಸಿದರೆ ಸಂವಿಧಾನದ ಕಾನೂನುಗಳು ಸಮಾನತಾ ನ್ಯಾಯವನ್ನು ಎತ್ತಿಹಿಡಿದವು. ಭಾರತದ ಸಂವಿಧಾನವು ಸಮಾನತಾ ಸಂಸ್ಕೃತಿಯನ್ನು ಪ್ರತಿಪಾದಿಸುವ ಪವಿತ್ರಗ್ರಂಥವಾಗಿ ರೂಪುಗೊಳ್ಳಲು ಅಂಬೇಡ್ಕರರ ದೂರದರ್ಶಿತ್ವ ಕಾರಣವಾಗಿದೆ.

ಯಾವುದೇ ಧರ್ಮ ತನ್ನ ಅನುಯಾಯಿಗಳಿಗೆ ಸ್ವಾತಂತ್ರ್ಯ, ಸಮಾನತೆ, ಸೋದರತೆಯ ಮಹತ್ವವನ್ನು ತಿಳಿಸಿಕೊಡಬೇಕೆಂದರು. ಕಾನೂನಿಗಿಂತಲೂ ಧರ್ಮ ಮನುಷ್ಯನ ಮೇಲೆ ಹೆಚ್ಚು ಪ್ರಭಾವ ಬೀರುವುದರಿಂದ ಧರ್ಮ ಯಾವುದೇ ಬಗೆಯ ಮೌಢ್ಯ, ಕಂದಾಚಾರ, ಹಿಂಸೆ, ಅಸಮಾನತೆಗಳನ್ನು ಆಚರಿಸಬಾರದು; ಬದಲಿಗೆ ಅರಿವು, ಕಾರುಣ್ಯ, ಸಮಾನತೆ, ಸೌಹಾರ್ದಗಳಿಗೆ ಅವಕಾಶ ನೀಡಬೇಕು ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಜಗತ್ತಿನ ಹಲವಾರು ಧರ್ಮಗಳನ್ನು ಆಳವಾಗಿ ಅಧ್ಯಯನ ಮಾಡಿ ಕೊನೆಗೆ ಬೌದ್ಧ ಧರ್ಮವನ್ನು ವಿಮೋಚನೆಯ ಬೆಳಕಾಗಿ ಕಂಡರು. 1956ರ ಅಕ್ಟೋಬರ್ 14ರಂದು ಲಕ್ಷಾಂತರ ಜನರೊಂದಿಗೆ ಬೌದ್ಧ ಧಮ್ಮವನ್ನು ಅಪ್ಪಿಕೊಂಡರು. ಅಂಬೇಡ್ಕರ್ ಬೌದ್ಧಧರ್ಮವನ್ನು ಅಪ್ಪಿಕೊಳ್ಳುವುದೂ ಪ್ರಜಾತಂತ್ರದ ಆಶಯದಿಂದಲೇ. ‘ನಾನು ಪ್ರಜಾತಂತ್ರದ ಆಶಯಗಳನ್ನು ಬುದ್ಧನ ಚಿಂತನೆಗಳಿಂದ ಸ್ವೀಕರಿಸಿದ್ದೇನೆ’ ಎನ್ನುತ್ತಾರೆ ಅಂಬೇಡ್ಕರ್.

ಎಲ್ಲ ಹಿನ್ನೆಲೆಯ ಅಸಮಾನತೆಗಳ ವಿರುದ್ಧ ಅಂಬೇಡ್ಕರ್​ರ ಧ್ವನಿ ಇತ್ತು. ಈ ಕಾರಣವಾಗಿ ಬಾಬಾಸಾಹೇಬ್ ಅಂಬೇಡ್ಕರ್ ವಿಶ್ವಮಾನ್ಯತೆ ಪಡೆದಿದ್ದಾರೆ. ಕವಿ ಸಿದ್ದಲಿಂಗಯ್ಯನವರ ಪದ್ಯದ ರೂಪಕದಂತೆ ‘ಆಕಾಶದ ಅಗಲಕ್ಕೂ ನಿಂತ ಆಲ’ವಾಗಿದ್ದಾರೆ. ಅಂಬೇಡ್ಕರ್ ಅವರನ್ನು ತೆರೆದ ಕಣ್ಣುಗಳಿಂದ ನೋಡುವ ಹಾಗೂ ಅವರ ಬರಹಗಳನ್ನು ಪೂರ್ವಗ್ರಹವಿಲ್ಲದೆ ಓದುವ, ಅನುಸರಿಸುವ ವಿಶಾಲ ಮನಸುಗಳು ಇಂದು ಹೆಚ್ಚಾಗಬೇಕಿದೆ. ಇದೇ ಬಾಬಾಸಾಹೇಬರಿಗೆ ನಾವು ಸಲ್ಲಿಸಬಹುದಾದ ಅರ್ಥಗರ್ಭಿತ ಗೌರವ.

(ಲೇಖಕರು ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನೆ ಹಾಗೂ ವಿಸ್ತರಣ ಕೇಂದ್ರದ ಸಂಯೋಜನಾಧಿಕಾರಿ)